ಕೂಡಿಗೆ, ಫೆ. 18: ಮುಳ್ಳುಸೋಗೆ ಗ್ರಾಮ ಪಂಚಾಯಿತಿಯ ಮಾಸಿಕ ಸಭೆ ಗ್ರಾ.ಪಂ. ಅಧ್ಯಕ್ಷೆ ಭವ್ಯ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ 2019-20ನೇ ಸಾಲಿನ ಮಾಂಸ ಮಾರಾಟ ಮಳಿಗೆಗಳ ಹರಾಜು ಪ್ರಕ್ರಿಯೆಯ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು.
14ನೇ ಹಣಕಾಸು ಯೋಜನೆಯ ಕಾಮಗಾರಿಗಳ ಬಗ್ಗೆ ಚರ್ಚೆ ನಡೆದು ಕಾಮಗಾರಿಯ ಕ್ರಿಯಾ ಯೋಜನೆ ತಯಾರಿಸಿ ಆಯಾ ವಾರ್ಡುಗಳಲ್ಲಿ ಕಾಮಗಾರಿ ನಡೆಸುವ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು. ಕಳೆದ ಸಾಲಿನ ಮುಂಗಡ ಬಜೆಟ್ ಅನುಮೋದನೆಯಂತೆ ಕಾಮಗಾರಿಗಳು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿದ್ದು, 2019-20 ನೇ ಸಾಲಿನ ಮುಂಗಡ ಬಜೆಟ್‍ನ ಬಗ್ಗೆ ಚರ್ಚೆ ನಡೆದು, ಅನುಮೋದನೆ ದೊರೆಯಿತು. ಈಗಾಗಲೇ ಗುಮ್ಮನಕೊಲ್ಲಿಯ ಸರ್ವೇ ನಂ. 5/1ಪಿ2ನಲ್ಲಿ ಕಸ ವಿಲೇವಾರಿ ಘಟಕವನ್ನು ಸ್ಥಾಪಿಸಲು ಜಾಗ ಗುರುತಿಸಿದ್ದು, ಈ ಕಾಮಗಾರಿಗೆ ಈಗಾಗಲೇ ಸರ್ಕಾರದಿಂದ ರೂ. 10 ಲಕ್ಷ ಅನುಮೋದನೆಗೊಂಡಿದ್ದು, ಕಾಮಗಾರಿಯ ಟೆಂಡರ್ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಸದ್ಯದಲ್ಲೆ ಕಸ ವಿಲೇವಾರಿ ಘಟಕ ಪ್ರಾರಂಭಗೊಳ್ಳುವದರ ಬಗ್ಗೆ ಚರ್ಚೆ ನಡೆಯಿತು. ಸದಸ್ಯರು ತಮ್ಮ ತಮ್ಮ ಅಭಿಪ್ರಾಯಗಳೊಂದಿಗೆ ಮೂಲಭೂತ ಸೌಲಭ್ಯಗಳಾದ ಕುಡಿಯುವ ನೀರು ಮತ್ತು ಶುಚಿತ್ವಕ್ಕೆ ಹೆಚ್ಚು ಒತ್ತು ನೀಡುವಂತೆ ಮನವಿ ಮಾಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭವ್ಯ ಮಾತನಾಡಿ, ಸದಸ್ಯರ ಅಭಿಪ್ರಾಯಗಳನ್ನು ಸಂಗ್ರಹಿಸಲಾಗಿದೆ. ಅದರನುಗುಣವಾಗಿ ಕಾಮಗಾರಿ ಮತ್ತು ಇನ್ನಿತರ ವಿಷಯಗಳನ್ನು ತುರ್ತಾಗಿ ಕೈಗೊಳ್ಳಲು ಗಮನಹರಿಸು ವದಾಗಿ ಸಭೆಗೆ ತಿಳಿಸಿದರು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಜಶೇಖರ್ ಮಾತನಾಡಿ, ಕಳೆದ ಸಾಲಿನ ಮುಂಗಡ ಬಜೆಟ್‍ನ ನಿಯಮಾನುಸಾರ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಅದೇ ರೀತಿಯಲ್ಲಿ ಈ ಸಾಲಿನಲ್ಲಿ ಬಜೆಟ್ ಅನುಮೋದನೆಯ ನಂತರ ಹೆಚ್ಚಿನ ಕಾಮಗಾರಿಗಳಿಗೆ ಮತ್ತು ಮೂಲಭೂತ ಸೌಲಭ್ಯಗಳಿಗೆ ಹೆಚ್ಚಿನ ಆಧ್ಯತೆ ನೀಡಲಾಗುವದು ಎಂದರು.
ಸಭೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಕಾರ್ಯದರ್ಶಿ ಇದ್ದರು.