ಸೋಮವಾರಪೇಟೆ,ಫೆ.18: ಕೇಂದ್ರದಲ್ಲಿ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೇರಿದ ಎನ್‍ಡಿಎ ಸರ್ಕಾರದ ಅವಧಿ ಕೆಲವೇ ತಿಂಗಳುಗಳಲ್ಲಿ ಪೂರ್ಣಗೊಳ್ಳಲಿದ್ದು, ಮುಂಬರುವ ಲೋಕಸಭಾ ಚುನಾವಣೆಗೆ ಕೊಡಗು-ಮೈಸೂರು ಕ್ಷೇತ್ರದಿಂದ ಹಾಲಿ ಸಂಸದ ಪ್ರತಾಪ್ ಸಿಂಹ ಮತ್ತೊಮ್ಮೆ ಕಣಕ್ಕಿಳಿಯುವ ಸುಳಿವು ನೀಡಿದ್ದಾರೆ.ಭಾರತೀಯ ಜನತಾ ಪಾರ್ಟಿಯಲ್ಲಿ ಟಿಕೇಟ್ ಆಕಾಂಕ್ಷಿಗಳ ಪಟ್ಟಿಯೂ ಅಧಿಕವಿದ್ದು, ಮೈಸೂರಿನ ಜಿಲ್ಲಾ ಬಿಜೆಪಿ ಪ್ರಮುಖರಾದ ಮಂಜುನಾಥ್ ಅವರು ಟಿಕೇಟ್‍ಗಾಗಿ ಪ್ರಯತ್ನಿಸುತ್ತಿದ್ದಾರೆ. ಇದರೊಂದಿಗೆ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರೂ ಸಹ ಲೋಕಸಭೆಗೆ ಸ್ಪರ್ಧಿಸುವ ಅಭಿಲಾಷೆ ಹೊರಗೆಡವಿದ್ದಾರೆ.
ಈ ಮಧ್ಯೆ ಹಾಲಿ ಸಂಸದರಾಗಿರುವ ಪ್ರತಾಪ್ ಸಿಂಹ ಅವರೇ ಮತ್ತೊಮ್ಮೆ ಕ್ಷೇತ್ರವನ್ನು ಪ್ರತಿನಿಧಿಸುವ ಸೂಚನೆ ನೀಡಿದ್ದಾರೆ. ಸೋಮವಾರಪೇಟೆಯ ಕೊಡವ ಸಮಾಜದಲ್ಲಿ ನಡೆದ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಸಭೆಯಲ್ಲಿ ತಮ್ಮ ಅವಧಿಯ ಕೆಲಸ ಕಾರ್ಯಗಳ ಬಗ್ಗೆ ಮಾಹಿತಿ ನೀಡಿ, ಮತ್ತೊಮ್ಮೆ ಆಶೀರ್ವದಿಸಿ ಎಂದು ಮನವಿ ಮಾಡಿದ್ದಾರೆ.