ಸೋಮವಾರಪೇಟೆ, ಫೆ. 18: ತಾಲೂಕು ಪತ್ರಕರ್ತರ ಸಂಘದ ಆಶ್ರಯದಲ್ಲಿ ಗೌಡಳ್ಳಿಯ ಬಿಜಿಎಸ್ ಮೈದಾನದಲ್ಲಿ ದಿ.ಸಿ.ಎನ್.ಸುನಿಲ್ ಸ್ಮರಣಾರ್ಥ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಪತ್ರಕರ್ತರ ಕ್ರಿಕೆಟ್ ಪಂದ್ಯಾಟದ ‘ಸುನಿಲ್ ಸ್ಮಾರಕ ಮೀಡಿಯಾ ಕಪ್’ನ್ನು ವೀರಾಜಪೇಟೆ ಸೌತ್ ಟೈಗರ್ಸ್ ತಂಡ ಪಡೆಯಿತು.

ಮಡಿಕೇರಿ ಪ್ರಿಂಟ್ ಪಂಟರ್ಸ್ ದ್ವಿತೀಯ ಹಾಗು ಮಡಿಕೇರಿ ಮೀಡಿಯಾ ಇಲೆವೆನ್ ತೃತೀಯ ಸ್ಥಾನಗಳಿಸಿತು. ಸರಣಿ ಹಾಗೂ ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ಸೌತ್ ಟೈಗರ್ಸ್‍ನ ಮುಸ್ತಾಫ ಪಡೆದರು. ಉತ್ತಮ ಕ್ಯಾಚರ್ ಪ್ರಶಸ್ತಿಯನ್ನು ಪ್ರಿಂಟ್ ಪಂಟರ್ಸ್ ತಂಡದ ವಿನುಕುಮಾರ್, ಉತ್ತಮ ಎಸೆತಗಾರನಾಗಿ ಸೋಮವಾರಪೇಟೆ ವಾರಿಯರ್ಸ್ ತಂಡದ ಶಿವರಾಜ್, ಉತ್ತಮ ಹೊಡೆತಗಾರರಾಗಿ ವಿನಯ್ ಹೊರ ಹೊಮ್ಮಿದರು. ಬೆಸ್ಟ್ ಫೀಲ್ಡರ್ ಪ್ರಶಸ್ತಿಯನ್ನು ವಿಜಯ್ ಹಾನಗಲ್ ಪಡೆದರು.

ಇಲ್ಲಿನ ಸಫಾಲಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಬಹುಮಾನ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ, ವಿಜೇತ ತಂಡಗಳಿಗೆ ಬಹುಮಾನ ವಿತರಿಸಿ ಮಾತನಾಡಿದ ಶಾಸಕ ಅಪ್ಪಚ್ಚು ರಂಜನ್, ಸಮಾಜಸೇವೆಯಲ್ಲೇ ತಮ್ಮನ್ನು ತೊಡಗಿಸಿಕೊಂಡಿರುವ ಪತ್ರಕರ್ತರು, ರಾಜಕಾರಣಿಗಳು ಆರೋಗ್ಯದ ಕಡೆಗೆ ಹೆಚ್ಚಿನ ಗಮನ ನೀಡಬೇಕು. ಏನೇ ಸಾಧನೆ ಮಾಡಬೇಕಾದರೂ ಆರೋಗ್ಯ ಬಹುಮುಖ್ಯ ಪಾತ್ರವಹಿಸುತ್ತದೆ. ಸಮತೋಲನ ಆಹಾರ ಮತ್ತು ಕ್ರೀಡಾಚಟುವಟಿಕೆಗಳಿಂದ ಆರೋಗ್ಯವನ್ನು ಕಾಪಾಡಿಕೊಳ್ಳ ಬಹುದು ಎಂದು ಹೇಳಿದರು.

ಪತ್ರಕರ್ತ ದಿ.ಸಿ.ಎನ್.ಸುನಿಲ್ ಕುಮಾರ್ ಅವರ ಪುತ್ರಿ ಸುಷ್ಮಿನಿ, ಪಂದ್ಯಾವಳಿಗೆ ಶ್ರಮಿಸಿದ ಕ್ರೀಡಾ ಸಂಚಾಲಕ ಎಸ್.ಎ.ಮುರುಳಿಧರ್, ಡಿ.ಪಿ.ಲೋಕೇಶ್, ಶಿವರಾಜ್, ಮಂಜುನಾಥ್, ರಾಜ್ಯ ಸಮಿತಿ ಸದಸ್ಯ ಎ.ಆರ್.ಕುಟ್ಟಪ್ಪ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್. ಸವಿತಾ ರೈ, ಕ.ಸಾ.ಪ. ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್ ಅವರುಗಳನ್ನು ಸನ್ಮಾನಿಸಲಾಯಿತು.

ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಎಂ.ಬಿ.ಅಭಿಮನ್ಯು ಕುಮಾರ್, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ಆರ್. ಹರೀಶ್, ಜಿಲ್ಲಾ ಪತ್ರಕರ್ತರ ಸಂಘದ ಕ್ಷೇಮಾಭಿವೃದ್ಧಿ ನಿಧಿಯ ಅಧ್ಯಕ್ಷ ಎಸ್.ಮಹೇಶ್, ದಾನಿಗಳಾದ ಕೆ.ಎ.ಯಾಕುಬ್, ಕೊತ್ನಳ್ಳಿ ಅರುಣ್ ಕುಮಾರ್, ನಾಪಂಡ ಉಮೇಶ್, ಬಿ.ಡಿ.ಮಂಜುನಾಥ್, ನಾಗೇಂದ್ರ, ವಿರಾಜಪೇಟೆ ತಾಲೂಕು ಅಧ್ಯಕ್ಷ ಚಂಗಪ್ಪ ಇದ್ದರು. ತಾನ್ಯ ಲೋಕೇಶ್ ಪ್ರಾರ್ಥಿಸಿ, ಸಂಘದ ಕಾರ್ಯದರ್ಶಿ ವಿಜಯ್ ಹಾನಗಲ್ ಕಾರ್ಯಕ್ರಮ ನಿರ್ವಹಿಸಿದರು. ‘ಶಕ್ತಿ’ ಉಪ ಸಂಪಾದಕ ಉಜ್ವಲ್ ರಂಜಿತ್ ಅವರಿಂದ ಕನ್ನಡ ಗೀತೆಗಾಯನ ಕಾರ್ಯಕ್ರಮ ನಡೆಯಿತು.