ಸಿದ್ದಾಪುರ, ಫೆ.18: ಹೊರರಾಜ್ಯದ ಕಾರ್ಮಿಕರಿಂದ ಹತ್ಯೆಯಾದ ವಿದ್ಯಾರ್ಥಿನಿ ಸಂಧ್ಯಾಳ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂಬ ಒತ್ತಾಯ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಜಿಲ್ಲಾ ಆದಿ ದ್ರಾವಿಡ ಸೇವಾ ಸಮಾಜದ ವತಿಯಿಂದ ಸಿದ್ದಾಪುರದ ಬಸ್ಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಯಿತ್ತು.

ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ, ಆದಿದ್ರಾವಿಡ ಸೇವಾ ಸಮಾಜದ ಜಿಲ್ಲಾಧ್ಯಕ್ಷ ಜನಾರ್ಧನ, ಹೊರ ರಾಜ್ಯದ ಕಾರ್ಮಿಕರಿಂದ ಹತ್ಯೆಯಾದ ಸಂಧ್ಯಾಳ ಕುಟುಂಬಕ್ಕೆ ಸರಕಾರ ರೂ 25 ಲಕ್ಷ ಪರಿಹಾರ ನೀಡಬೇಕು. ಆಕೆಯ ಕುಟುಂಬದ ಸದಸ್ಯರೋರ್ವರಿಗೆ ಸರಕಾರಿ ಕೆಲಸ ನೀಡಬೇಕು ಎಂದು ಒತ್ತಾಯಿಸಿದರು. ಮುಂದಿನ ಒಂದು ವಾರದಲ್ಲಿ ಜಿಲ್ಲೆಯಲ್ಲಿ ಅನಧಿಕೃತವಾಗಿ ಇರುವ ಹೊರ ರಾಜ್ಯದ ಕಾರ್ಮಿಕರನ್ನು ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.

ಬಿ.ಎಸ್.ಪಿ ಪಕ್ಷದ ಜಿಲ್ಲಾಧ್ಯಕ್ಷ ಮೋಹನ್ ಮೌರ್ಯ ಮಾತನಾಡಿ, ದೇಶದಲ್ಲಿ ನಿರಂತರವಾಗಿ ದಲಿತ ಹೆಣ್ಣುಮಕ್ಕಳ ಮೇಲೆ ಕೊಲೆ ಇನ್ನಿತರ ದೌರ್ಜನ್ಯ ನಡೆಯುತ್ತಿದ್ದು, ಇದಕ್ಕೆ ಸರಕಾರಗಳು ಕಡಿವಾಣ ಹಾಕ ಬೇಕೆಂದು ಒತ್ತಾಯಿಸಿದರು.

ಗ್ರಾ.ಪಂ. ಸದಸ್ಯೆ ಹಾಗೂ ಎಮ್ಮೆಗುಂಡಿ ತೋಟದ ಕಾರ್ಮಿಕ ಮಹಿಳೆ ರಾಧ ಮಾತನಾಡಿ, ಹೊರರಾಜ್ಯದ ಕಾರ್ಮಿಕರಿಂದ ಮುಗ್ಧ ಯುವತಿಯ ಹತ್ಯೆಯಾಗಿದ್ದು, ಈ ಹಿನ್ನೆಲೆಯಲ್ಲಿ ಹೊರರಾಜ್ಯದ ಕಾರ್ಮಿಕರಿಗೆ ತೋಟಗಳಲ್ಲಿ ಅವಕಾಶ ನೀಡಬಾರದು ಎಂದರು. ಸಾಮಾಜಿಕ ಕಾರ್ಯಕರ್ತ ಎ.ಎಸ್ ಮುಸ್ತಫ, ರೆಜಿತ್ ಕುಮಾರ್ ಗುಹ್ಯ ಮಾತನಾಡಿ, ಬಡ ಕುಟುಂಬಕ್ಕೆ ನ್ಯಾಯ ಒದಗಿಸಲು ಜಿಲ್ಲೆಯ ಎಲ್ಲ ರಾಜಕೀಯ ಪಕ್ಷಗಳು, ಸಂಘ ಸಂಸ್ಥೆಗಳು ಸ್ವಯಂಪ್ರೇರಿತವಾಗಿ ಪ್ರತಿಭಟಿಸಬೇಕು ಎಂದರು.

ಪ್ರತಿಭಟನೆಯಲ್ಲಿ ಆದಿ ದ್ರಾವಿಡ ಸಂಘದ ಜಿಲ್ಲಾ ಉಪಾಧ್ಯಕ್ಷ ಕುಶಾಲಪ್ಪ, ವೀರಾಜಪೇಟೆ ತಾಲೂಕು ಅಧ್ಯಕ್ಷ ಶಿವಪ್ಪ, ಗ್ರಾ.ಪಂ ಸದಸ್ಯರಾದ ಜಾಫರ್ ಆಲಿ, ಹುಸೈನ್, ಆದಿ ದ್ರಾವಿಡ ಸಂಘದ ಪದಾಧಿಕಾರಿಗಳಾದ ವಿಶ್ವನಾಥ್ ಸೇರಿದಂತೆ ನೂರಾರು ಮಂದಿ ಸದಸ್ಯರು ಕಾರ್ಮಿಕರು ಇದ್ದರು.

ಪಾಲಿಬೆಟ್ಟದಲ್ಲಿ

ಸಂಧ್ಯಾಳ ಹತ್ಯೆಯನ್ನು ಖಂಡಿಸಿ ಪಾಲಿಬೆಟ್ಟದ ಗ್ರಾಮಸ್ಥರು ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಪಾಲಿಬೆಟ್ಟದಲ್ಲಿ ಪ್ರತಿಭಟನೆ ನಡೆಯಿತು. ಪಾಲಿಬೆಟ್ಟದ ಗಣಪತಿ ದೇವಾಲಯ ದಿಂದ ಟಾಟಾ ಕಂಪೆನಿಯ ಮುಖ್ಯ ಕಚೇರಿಯ ರಸ್ತೆಯವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಬಳಿಕ ಬಸ್ಸು ನಿಲ್ದಾಣದಲ್ಲಿ ಮಾನವ ಸರಪಳಿ ರಚಿಸಿ ಹತ್ಯೆಯನ್ನು ಖಂಡಿಸಿದರು. ಈ ಸಂದರ್ಭ ಗ್ರಾ.ಪಂ ಅಧ್ಯಕ್ಷ ಪುಲಿಯಂಡ ಬೋಪಣ್ಣ, ಮಹಿಳಾ ಸಂಘದ ಮಂಜುಳ, ಗ್ರಾ.ಪಂ ಸದಸ್ಯ ದೀಪಕ್ ಗಣಪತಿ ಸೇರಿದಂತೆ ಇನ್ನಿತರರು ಹಾಜರಿದ್ದರು.