ವೀರಾಜಪೇಟೆ, ಫೆ. 18: ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಉಗ್ರರ ಧಾಳಿಗೆ ತುತ್ತಾದ ಸಿಆರ್‍ಪಿಎಫ್‍ನ ಹುತಾತ್ಮ ಯೋಧರಿಗೆ ಜಿಲ್ಲಾ ಬೆಳೆಗಾರರ ಒಕ್ಕೂಟದಿಂದ ವೀರಾಜಪೇಟೆಯ ಮಿನಿ ವಿಧಾನಸೌಧದ ಮುಂದಿರುವ ಯೋಧರ ಸ್ತಂಭಕ್ಕೆ ಪುಷ್ಪ್ಪಗುಚ್ಚ ಇರಿಸಿ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಒಕ್ಕೂಟದ ಅಧ್ಯಕ್ಷ ಕ್ಯೆಬುಲಿರ ಹರೀಶ್ ಪೂವಯ್ಯ ಮಾತನಾಡಿ ಪಾಕಿಸ್ತಾನ ಮೂರು ಯುದ್ಧದಲ್ಲಿ ಮುಖಭಂಗ ಅನುಭವಿಸಿದರೂ ಅವರ ಕುಚೋದ್ಯ ಬುದ್ದಿ ಬಿಟ್ಟಿಲ್ಲ. ಈ ಘಟನೆಯನ್ನು ಮುಂದಿಟ್ಟುಕೊಂಡು ಭಾರತೀಯ ಸೇನೆ ತಕ್ಕ ಪಾಠ ಕಲಿಸಿದರೆ ಮಾತ್ರ ಹುತಾತ್ಮ ಯೋಧರ ಆತ್ಮಕ್ಕೆ ಶಾಂತಿ ಸಿಗುತ್ತದೆ. ಯಾವಾಗ ಭಾರತವನ್ನು ತನ್ನಿಂದ ಸೋಲಿಸಲು ಸಾಧ್ಯ ಇಲ್ಲ ಎಂದು ಅರಿತುಕೊಂಡ ಬಳಿಕ ಅದು ಉಗ್ರವಾದಿಗಳನ್ನು ಭಾರತಕ್ಕೆ ಛೂ ಬಿಟ್ಟು ಕುಕೃತ್ಯ ಮಾಡುತ್ತಿದೆ. ಯೋಧರ ಮೇಲೆ ಉಗ್ರ ಧಾಳಿಯಾದಾಗ ಸಾಮಾಜಿಕ ಜಾಲ ತಾಣದಲ್ಲಿ ಬೆಂಬಲ ನೀಡಿದ ಆಂತರಿಕ ದುಷ್ಟ ಶಕ್ತಿಗÀಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಹೇಳಿದರು.

ಕೂರ್ಗ್ ವೈಲ್ಡ್ ಲೈಫ್ ಸೊಸೈಟಿಯ ಅಧ್ಯಕ್ಷ ಕರ್ನಲ್ ಮುತ್ತಣ್ಣ ಮಾತನಾಡಿ, 1971 ರ ಯುದ್ಧದಿಂದ ಆರಂಭಿಸಿ ಕಾರ್ಗಿಲ್ ಯುದ್ಧ, ನಂತರ ದೇಶದೊಳಗೆ ನಡೆದ ಅನೇಕ ವಿಧ್ವಂಸಕ ಚಟುವಟಿಕೆಗಳನ್ನು ಸಡಿಲವಾಗಿ ಬಿಟ್ಟಿರುವದೇ ಈ ದುರಂತಕ್ಕೆ ಕಾರಣ. ಬಲಿಷ್ಠ ಸೇನೆ ನಮ್ಮ ದೇಶದ್ದಾಗಿದ್ದರೂ, ಸಣ್ಣ ಸೇನೆ ಪಾಕ್ ನಮ್ಮನ್ನು ಆಟವಾಡಿಸುತ್ತಿರುವದಕ್ಕೆ ನಮ್ಮ ವ್ಯವಸ್ಥೆ ಕಾರಣ. ಇಸ್ರೇಲ್ ದೇಶ ನಮಗೆ ಮಾದರಿಯಾಗಬೇಕು, ಅವರಂತೆ ನಾವು ಕಠಿಣವಾಗಿ ಉತ್ತರ ನೀಡಬೇಕು ಎಂದರು.

ಒಕ್ಕೂಟದ ಖಜಾಂಚಿ ಮಾಣಿರ ವಿಜಯ ನಂಜಪ್ಪ ಹಾಗೂ ಸದಸ್ಯರು, ವೀರಾಜಪೇಟೆ ಕೊಡವ ಸಮಾಜ ಉಪಾಧ್ಯಕ್ಷ ಕುಲ್ಲಚಂಡ ಪೂಣಚ್ಚ, ಬೊಳ್ಳೆರ ರಾಜ ಸುಬ್ಬಯ್ಯ, ಅರಣಮಾಡ ಸತೀಶ್, ಐಚೆಟ್ಟಿರ ರಂಜಿ ಕುಟ್ಟಯ್ಯ, ಅಲ್ಲಪಂಡ ಚಿಣ್ಣಪ್ಪ, ಬಿದ್ದಂಡ ಗಣಪತಿ, ಜಮ್ಮಡ ಮೋಹನ್ ಐಚೆಟ್ಟಿರ ಅರುಣ್ ಚಂಗಪ್ಪ, ಪ.ಪಂ. ಸದಸ್ಯೆ ಆಶಾಸುಬ್ಬಯ್ಯ, ಮಾಜಿ ಸೈನಿಕರ ಸಂಘದ ಉಪಾಧ್ಯಕ್ಷ ಚಪ್ಪಂಡ ಹರೀಶ್ ಮತ್ತಿತರರು ಪಾಲ್ಗೊಂಡಿದ್ದರು.

ವೀರಾಜಪೇಟೆಯ ವರ್ತಕ ಸಮುದಾಯ, ನಿವಾಸಿಗಳು ಹಾಗೂ ಸಮಾಜ ಸೇವಕರು ಸೇರಿ ಕಾಶ್ಮೀರದ ಪುಲ್ವಮಾದಲ್ಲಿ ಹುತಾತ್ಮರಾದ ಯೋಧರಿಗೆ ಮೇಣದ ಬತ್ತಿ ಹಿಡಿದು ಶ್ರದ್ಧಾಂಜಲಿ ಅರ್ಪಿಸಿದರು.

ಇಲ್ಲಿನ ಗಡಿಯಾರ ಕಂಬದ ಬಳಿ ಕೆಲವು ನಿಮಿಷಗಳವರೆಗೆ ಮೌನಾಚರಣೆ ಮಾಡಿದ ಸಮುದಾಯದವರು ನಂತರ ಮೆರವಣಿಗೆಯಲ್ಲಿ ತೆರಳಿ ಇಲ್ಲಿನ ಮಿನಿ ವಿಧಾನಸೌಧದ ಮುಂದಿರುವ ಯೋಧರ ಸ್ತಂಭಕ್ಕೆ ಪುಷ್ಪಗುಚ್ಚದ ನಮನ ಸಲ್ಲಿಸಿದರು. ಸಂಘಟನೆಗಳ ಯೋಗೀಶ್ ನಾಯ್ಡು, ಡಿ.ಪಿ.ರಾಜೇಶ್, ಟಿ.ಪಿ.ಕೃಷ್ಣ, ಪಿ.ಎ.ಮಂಜುನಾಥ್ ಇತರ ಪ್ರಮುಖರು ಭಾಗವಹಿಸಿದ್ದರು.