ಪೊನ್ನಂಪೇಟೆ, ಫೆ. 19: : ಕೊಡಗಿನ ಸಾಮಾನ್ಯ ಬೆಳೆಗಾರರ, ಕೃಷಿಕರ ಮತ್ತು ಕೃಷಿ ಕಾರ್ಮಿಕರ ಬದುಕಿಗೆ ನಿರಂತರವಾಗಿ ಸವಾಲೊಡ್ಡುತ್ತಿರುವ ಕೊಡಗಿನ ಕೆಲವೇ ಕೆಲವು ಡೋಂಗಿ ಪರಿಸರವಾದಿಗಳಿಂದ ಕೊಡಗು ಜಿಲ್ಲೆಯನ್ನು ಮುಕ್ತಗೊಳಿಸುವಂತೆ ಜನಾಗ್ರಹ ಮುಂದಿಡುವ ‘ಸೇವ್ ಕೊಡಗು’ ಬೃಹತ್ ಪ್ರತಿಭಟನಾ ರ್ಯಾಲಿಯನ್ನು ಇದೇ ತಿಂಗಳ 25 ರಂದು ಸೋಮವಾರ ಗೋಣಿಕೊಪ್ಪಲುವಿನಲ್ಲಿ ಆಯೋಜಿಸಲಾಗಿದೆ ಎಂದು ಸೇವ್ ಕೊಡಗು ಆಂದೋಲನದ ಭಾಗವಾಗಿ ರಚಿಸಲಾಗಿರುವ ವಿವಿಧ ರಾಜಕೀಯ ಪಕ್ಷಗಳ ಮತ್ತು ವಿವಿಧ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ತಿಳಿಸಿದ್ದಾರೆ.

ಈ ಕುರಿತು ಕರೆದಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ವೀರಾಜಪೇಟೆ ತಾಲೂಕು ಬಿ.ಜೆ.ಪಿ. ಸಮಿತಿ ಅಧ್ಯಕ್ಷ ಕುಂಞಂಗಡ ಅರುಣ್ ಭೀಮಯ್ಯ ಅವರು, ಕೇವಲ ಹಣದ ಆಸೆಗಾಗಿ ಕಾರ್ಯನಿರ್ವಹಿಸುತ್ತಿರುವ ಡೋಂಗಿ ಪರಿಸರವಾದಿಗಳು ಕೊಡಗು ತಮ್ಮ ಸ್ವಂತ ಆಸ್ತಿ ಎಂಬ ಭ್ರಮೆಯಲ್ಲಿದ್ದಾರೆ. ಇವರಿಂದ ಜಿಲ್ಲೆಯ ಅಸ್ತಿತ್ವಕ್ಕೆ ತೀವ್ರ ಧಕ್ಕೆ ಎದುರಾಗುತ್ತಿದೆ. ವಿದೇಶಿ ದೇಣಿಗೆ ಹಣದ ಆಮಿಷದಿಂದಾಗಿ ಕೊಡಗನ್ನು ಇವರು ತಮ್ಮ ಪ್ರಯೋಗ ಶಾಲೆಯನ್ನಾಗಿಸಿ ಕೊಂಡಿದ್ದಾರೆ. ಈ ಕುರಿತು ಜನಜಾಗೃತಿ ಮೂಡಿಸಿ ಅವರಿಂದ ಕೊಡಗನ್ನು ಪಾರು ಮಾಡಲು ಈ ಬೃಹತ್ ಪ್ರತಿಭಟನಾ ರ್ಯಾಲಿಯನ್ನು ಪಕ್ಷಾತೀತವಾಗಿ ಮತ್ತು ಜಾತ್ಯತೀತವಾಗಿ ಸಂಘಟಿಸಲಾಗುತ್ತದೆ ಎಂದು ವಿವರಿಸಿದಲ್ಲದೆ, ಈ ಹಿಂದೆ ನಿಗದಿಯಾಗಿದ್ದ ಇದೇ ರ್ಯಾಲಿಯನ್ನು ಕಾಫಿ ಕುಯ್ಲಿನ ಸಮಯವಾದ್ದರಿಂದ ಜನರ ಬೇಡಿಕೆಯಂತೆ ಮುಂದೂಡಲಾಗಿತ್ತು ಎಂದರು.

ಕಳೆದ ಹಲವು ವರ್ಷಗಳಿಂದ ಡೋಂಗಿ ಪರಿಸರವಾದಿಗಳು ಪರಿಸರ ಪ್ರೇಮದ ಹೆಸರಿನಲ್ಲಿ ಕೊಡಗಿನ ಜನರ ನಿದ್ದೆಗೆಡಿಸುತ್ತಿದ್ದಾರೆ. ಹೊಸ ಯೋಜನೆಗಳನ್ನು ಜಾರಿಗೆ ತರಲು ಇನ್ನಿಲ್ಲದ ಪ್ರಯತ್ನಗಳನ್ನು ತೆರೆಮರೆಯಲ್ಲಿ ನಡೆಸುತ್ತಾ ಬರುತ್ತಿದ್ದಾರೆ. ಕೊಡಗಿಗೆ ಸಂಬಂಧವೇ ಇಲ್ಲದ ವ್ಯಕ್ತಿ ಮತ್ತು ಸಂಘಟನೆಗಳ ಮೂಲಕ ಸರಕಾರಕ್ಕೆ ಒತ್ತಡ ಹೇರುವ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಗೋಷ್ಠಿಯಲ್ಲಿದ್ದ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮತ್ತು ಕಸ್ತೂರಿ ರಂಗನ್ ವರದಿ ವಿರೋಧಿ ಹೋರಾಟ ಸಮಿತಿಯ ಜಿಲ್ಲಾ ಸಂಚಾಲಕ ತೀತಿರ ಧರ್ಮಜ ಉತ್ತಪ್ಪ ಮಾತನಾಡಿ, ಕೆಲ ಡೋಂಗಿ ಪರಿಸರವಾದಿಗಳ ಅಭಿಪ್ರಾಯವೇ ಕೊಡಗಿನ ಬಹುಜನರ ಅಭಿಪ್ರಾಯವಾಗುವದಿಲ್ಲ. ಇವರ ವಿರುದ್ಧ ಜನ ಪ್ರತಿಭಟಿಸದಿದ್ದರೆ ಮುಂದೆ ಇವರೇ ಕೊಡಗಿನ ದೊಣ್ಣೆ ನಾಯಕರಾಗುತ್ತಾರೆ. ಆದ್ದರಿಂದ ಕೊಡಗಿನ ಜನ ಕೂಡಲೇ ಜಾಗೃತರಾಗಿ ಡೋಂಗಿ ಪರಿಸರವಾದಿಗಳ ಜನವಿರೋಧಿ ಕೆಲಸಗಳ ವಿರುದ್ಧ ಪ್ರತಿಭಟಿಸಬೇಕು ಎಂದರು.

ಜಿಲ್ಲಾ ಕಾಂಗ್ರೆಸ್ ವಕ್ತಾರ ಆಪಟ್ಟೀರ ಟಾಟು ಮೊಣ್ಣಪ್ಪ ಮಾತನಾಡಿ, ಜಿಲ್ಲೆಯಲ್ಲಿ ಮಿತಿ ಮೀರಿರುವ ಡೋಂಗಿ ಪರಿಸರವಾದಿಗಳ ಉಪಟಳದ ವಿರುದ್ಧ ಜನಜಾಗೃತಿ ಮೂಡಿಸಲು ಮತ್ತು ಅವರ ಜನವಿರೋಧಿ ಕೃತ್ಯಗಳನ್ನು ಒಕ್ಕೊರಲಿನಿಂದ ಖಂಡಿಸಿ ಜನಾಗ್ರಹ ಮುಂದಿಡಲು ತಾ. 25ರಂದು ಗೋಣಿಕೊಪ್ಪಲು ಪಟ್ಟಣದಲ್ಲಿ ಜಿಲ್ಲಾ ಮಟ್ಟದ ಬೃಹತ್ ಪ್ರತಿಭಟನಾ ರ್ಯಾಲಿಯನ್ನು ಆಯೋಜಿಸಲಾಗಿದೆ. ಅಂದು ಬೆಳಿಗ್ಗೆ 10 ಗಂಟೆಗೆ ಪಾಲಿಬೆಟ್ಟ ಜಂಕ್ಷನ್‍ನಿಂದ ಪ್ರತಿಭಟನಾ ಮೆರವಣಿಗೆ ಹೊರಡಲಿದೆ. ಹಿರಿಯ ಹೋರಾಟಗಾರರು, ಜಿಲ್ಲೆಯ ಶಾಸಕರು, ಜಿ.ಪಂ., ತಾ.ಪಂ., ವಿವಿಧ ಗ್ರಾ.ಪಂ. ಚುನಾಯಿತ ಪ್ರತಿನಿಧಿಗಳು, ಜನಪ್ರತಿನಿಧಿಗಳು ಸೇರಿದಂತೆ ಸಾವಿರಾರು ಬೆಳೆಗಾರರು, ಕೃಷಿಕ ಮತ್ತು ಕೃಷಿ ಕಾರ್ಮಿಕರು ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ವಿವರಿಸಿದರಲ್ಲದೆ, ಪ್ರತಿಭಟನಾ ಸಭೆಗಾಗಿ ಜನರಲ್ಲಿ ಜಾಗೃತಿ ಮೂಡಿಸಲು ವೀರಾಜಪೇಟೆ ತಾಲೂಕಿನ ಎಲ್ಲಾ 39 ಗ್ರಾ.ಪಂ. ವ್ಯಾಪ್ತಿಯಲ್ಲಿ ಸೇವ್ ಕೊಡಗು ಆಂದೋಲನದ ಭಾಗವಾಗಿ ರಚಿಸಲಾಗಿರುವ ವಿವಿಧ ರಾಜಕೀಯ ಪಕ್ಷಗಳ ಮತ್ತು ವಿವಿಧ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಶಾಸಕರ ನೇತೃತ್ವದಲ್ಲಿ 4 ದಿನಗಳ ಕಾಲ ಪ್ರವಾಸ ನಡೆಸಿ ಜನರನ್ನು ಸಂಘಟಿಸಲು ರೂಪು ರೇಷೆ ಸಿದ್ಧಗೊಂಡಿದೆ ಎಂದು ಮಾಹಿತಿ ನೀಡಿದರು.

ಈ ಪ್ರತಿಭಟನಾ ರ್ಯಾಲಿಯಿಂದಾಗಿ ವಿಚಲಿತರಾಗಿರುವ ಡೋಂಗಿ ಪರಿಸರವಾದಿಗಳು ಈ ರ್ಯಾಲಿಗೆ ಪರೋಕ್ಷವಾಗಿ ಬೆದರಿಕೆಯೊಡ್ಡಲು ಪ್ರಯತ್ನಿಸುತ್ತಿದ್ದಾರೆ. ಸಂಬಂಧವೇ ಇಲ್ಲದ ವಿಷಯಗಳನ್ನು ಅವರು ಪ್ರಸ್ತಾಪಿಸುತ್ತಿದ್ದಾರೆ. ತಾ. 25ರ ಪ್ರತಿಭಟನಾ ರ್ಯಾಲಿಗೂ, ನ್ಯಾಯಾಲಯದ ಹಿಂದಿನ ತೀರ್ಪಿಗೂ ಯಾವದೇ ಸಂಬಂಧವಿಲ್ಲ. ಇದು ಜನರಲ್ಲಿ ತಪ್ಪು ಮಾಹಿತಿ ನೀಡಿ ಗೊಂದಲ ಸೃಷ್ಟಿಸುವ ಷಡ್ಯಂತರ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದ ಜಿ.ಪಂ. ಸದಸ್ಯ ಹಾಗೂ ಅಖಿಲ ಕೊಡಗು ಅಮ್ಮಕೊಡವ ಸಮಾಜದ ಗೌರವಾಧ್ಯಕ್ಷ ಬಿ.ಎನ್. ಪ್ರಥ್ಯು ಅವರು ಮಾತನಾಡಿ, ಡೋಂಗಿ ಪರಿಸರವಾದಿಗಳ ಕಪಿಮುಷ್ಠಿಯಿಂದ ಕೊಡಗನ್ನು ಮುಕ್ತಗೊಳಿಸಲು ಜನಶಕ್ತಿಯ ಪ್ರತಿಭಟನೆಯೊಂದೇ ಸೂಕ್ತ ಮಾರ್ಗವಾಗಿದೆ. ಈ ಹಿಂದೆಯೂ ಬಾಳೆಲೆ ಜಿ.ಪಂ. ವ್ಯಾಪ್ತಿಯಲ್ಲಿ ಪರಿಸರವಾದಿಗಳ ವಿರುದ್ಧ ಜನಾಂದೋಲನ ರ್ಯಾಲಿ ನಡೆಸಿ ಜನಜಾಗೃತಿ ಮೂಡಿಸಲಾಗಿತ್ತು ಎಂದರಲ್ಲದೆ, ಇದೀಗ ಇದೇ ಡೋಂಗಿ ಪರಿಸರವಾದಿಗಳು ತಿತಿಮತಿ-ಹುಣಸೂರು ರಾಜ್ಯ ಹೆದ್ದಾರಿಯಲ್ಲಿ ಜನಸಾಮಾನ್ಯರ ಅನೂಕೂಲಕ್ಕೆ ವಿರುದ್ಧವಾಗಿ ರಾತ್ರಿ ವೇಳೆ ವಾಹನ ಸಂಚಾರ ನಿರ್ಬಂಧಿಸಲು ತೀವ್ರ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

ಗೋಷ್ಠಿಯಲ್ಲಿ ಬಿ.ಜೆ.ಪಿ. ಮುಖಂಡ ತೀತಿಮಾಡ ಲಾಲ ಭೀಮಯ್ಯ ಹಾಜರಿದ್ದರು.