ಮಡಿಕೇರಿ, ಫೆ. 19: ದೇಶದ ಮಹಿಳೆಯರು ಇಂದು ರಾಜಕೀಯ ಶಕ್ತಿಯಾಗಿ ಸಕ್ರೀಯರಾಗಲು ಮಾಜಿ ಪ್ರಧಾನಿ ದಿ.ಇಂದಿರಾಗಾಂಧಿ ಅವರೇ ಸ್ಫೂರ್ತಿ ಎಂದು ಮಹಿಳಾ ಕಾಂಗ್ರೆಸ್ನ ಜಿಲ್ಲಾಧ್ಯಕ್ಷೆ ಸುರಯ್ಯ ಅಬ್ರಾರ್ ಅಭಿಪ್ರಾಯಪಟ್ಟಿದ್ದಾರೆ.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾಂಗ್ರೆಸ್ನ ಇಂದಿರಾ ಮಹಿಳಾ ಶಕ್ತಿ ಘಟಕದ ಸಭೆಯಲ್ಲಿ ವಿಶೇಷ ಆಹ್ವಾನಿತರಾಗಿ ಪಾಲ್ಗೊಂಡು ಅವರು ಮಾತನಾಡಿದರು. ಇಂದಿರಾಗಾಂಧಿ ಮಹಿಳೆ ಮನೆಗೆ ಮಾತ್ರ ಸೀಮಿತವಾಗದೆ ದೇಶವನ್ನು ಸಹ ಸಮರ್ಥವಾಗಿ ಆಳಬಲ್ಲಳು ಎನ್ನುವದನ್ನು ವಿಶ್ವಕ್ಕೇ ತೋರಿಸಿಕೊಟ್ಟ ಧೈರ್ಯವಂತೆ ಎಂದು ಬಣ್ಣಿಸಿದರು. ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕೆಂದು ಸುರಯ್ಯಾ ಅಬ್ರಾರ್ ಕರೆ ನೀಡಿದರು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಇಂದಿರಾ ಮಹಿಳಾ ಶಕ್ತಿ ಘಟಕದ ಅಧ್ಯಕ್ಷೆ ಶಶಿ, ಕಾಂಗ್ರೆಸ್ ಪಕ್ಷದ ಬಲವರ್ಧನೆಯಲ್ಲಿ ಮಹಿಳಾ ಕಾರ್ಯಕರ್ತರ ಪಾತ್ರ ಪ್ರಮುಖವಾಗಿದ್ದು, ಇನ್ನು ಮುಂದೆಯೂ ಪಕ್ಷ ಸಂಘಟನೆಗೆ ಎಲ್ಲರೂ ಕೈಜೋಡಿಸುವಂತೆ ಮನವಿ ಮಾಡಿದರು.
ನಗರಸಭಾ ಅಧ್ಯಕ್ಷರಾದ ಕಾವೇರಮ್ಮ ಸೋಮಣ್ಣ, ನಗರ ಕಾಂಗ್ರೆಸ್ ಅಧ್ಯಕ್ಷ ಕೆ.ಯು.ಅಬ್ದುಲ್ ರಜಾóಕ್, ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಫ್ಯಾನ್ಸಿ ಪಾರ್ವತಿ, ಸೀತಾಚಿಕ್ಕಣ್ಣ ಮತ್ತಿತರ ಪ್ರಮುಖರು ಸಭೆಯಲ್ಲಿ ಉಪಸ್ಥಿತರಿದ್ದರು.