ಸೋಮವಾರಪೇಟೆ, ಫೆ.19: ಸುಮಾರು 18 ಲಕ್ಷ ವೆಚ್ಚದಲ್ಲಿ ನೂತನವಾಗಿ ಜೀರ್ಣೋದ್ಧಾರಗೊಂಡಿರುವ ದೊಡ್ಡಮಳ್ತೆ ಗ್ರಾಮದ ಶ್ರೀ ಸಿದ್ಧಿವಿನಾಯಕ ದೇವಾಲಯದ ಲೋಕಾರ್ಪಣಾ ಕಾರ್ಯ ತಾ. 23 ಮತ್ತು 24ರಂದು ನಡೆಯಲಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಡಿ.ಆರ್. ಪುಟ್ಟರಾಜು ತಿಳಿಸಿದ್ದಾರೆ.

ತಾ. 23ರಂದು ಸಂಜೆ 5.30ಕ್ಕೆ ಆಲಯವರಿ ಗ್ರಹ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹ, ಸ್ಥಳ ಶುದ್ಧಿ, ಪ್ರಸಾದ ಶುದ್ಧಿ, ರಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಬಲಿ, ದಿಕ್ಷಾಲಬಲಿ, ಬಿಂಬಾಧಿವಾಸ ನಡೆಯಲಿದ್ದು, ತಾ. 24ರಂದು ಪೂರ್ವಾಹ್ನ 8 ಗಂಟೆಯಿಂದ ಗಣಪತಿ ಹೋಮ, ಪ್ರತಿಷ್ಠಾಪನಾ ಹೋಮ, ಗಂಗಾಪೂಜೆ, ಬ್ರಹ್ಮ ಕಲಶಪೂಜೆ, ಶಿಖರ ಪ್ರತಿಷ್ಠೆ, ಬ್ರಹ್ಮ ಕಲಶಪೂಜೆ, 12.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ.

ತಾ. 24ರಂದು ಪೂರ್ವಾಹ್ನ 9.50ಕ್ಕೆ ದೇವಾಲಯವನ್ನು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಉದ್ಘಾಟಿಸಲಿದ್ದು, ಮಾಜೀ ಸಚಿವ ಬಿ.ಎ. ಜೀವಿಜಯ, ಜೆಡಿಎಸ್ ಕ್ಷೇತ್ರ ಸಮಿತಿ ಅಧ್ಯಕ್ಷ ಹೆಚ್.ಆರ್. ಸುರೇಶ್, ಜಿ.ಪಂ. ಸದಸ್ಯ ಬಿ.ಜೆ. ದೀಪಕ್, ಉದ್ಯಮಿ ನಾಪಂಡ ಮುತ್ತಪ್ಪ, ಹರಪಳ್ಳಿ ರವೀಂದ್ರ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ.

ಬೆಸೂರಿನ ಶಿಲ್ಪಿ ಎಸ್.ಎಸ್. ವರಪ್ರಸಾದ್ ಅವರು ನೂತನ ವಿಗ್ರಹ ಕೆತ್ತನೆ ಕಾರ್ಯ ನಿರ್ವಹಿಸಿದ್ದು, ಶಿವಮೊಗ್ಗದ ಸಂತೋಷ್ ಮತ್ತು ಸಂಗಡಿಗರು ನೂತನ ದೇವಾಲಯವನ್ನು ನಿರ್ಮಿಸಿದ್ದಾರೆ. ಈ ಹಿಂದೆ ಇದ್ದ ಸಣ್ಣಗುಡಿಯ ಬದಲಿಗೆ ನೂತನವಾಗಿ 18 ಲಕ್ಷ ವೆಚ್ಚದಲ್ಲಿ ದೇವಾಲಯ ನಿರ್ಮಿಸಲಾಗಿದೆ ಎಂದು ಸಮಿತಿಯ ಕಾರ್ಯದರ್ಶಿ ರಾಜೇಶ್ ಡಿ.ಬಿ. ಮಾಹಿತಿ ನೀಡಿದರು.