*ಗೋಣಿಕೊಪ್ಪಲು : ದೇಶದೊಳಗಿದ್ದು, ದೇಶಕ್ಕೆ ದ್ರೋಹವೆಸಗುವವರನ್ನು ದಮನ ಮಾಡದೆ ದೇಶದಲ್ಲಿ ಶಾಂತಿ ನೆಲೆಸಲು ಸಾಧ್ಯವಿಲ್ಲ ಎಂದು ಶಾಸಕ ಕೆ.ಜಿ ಬೋಪಯ್ಯ ತಿಳಿಸಿದರು.
ಕುಟ್ಟ ಬಸ್ ನಿಲ್ದಾಣದಲ್ಲಿ ನಡೆದ ಯೋಧರಿಗೆ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯೋಧರ ಮರಣದಿಂದ ದೇಶವೇ ನೋವು ಅನುಭವಿಸುತ್ತಿದೆ. ಆದರೆ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ದೇಶದ ವಿರುದ್ಧ ಪ್ರಚಾರ ಮಾಡುತ್ತಿರುವದು ವಿಷಾದನೀಯ. ಪಾಕಿಸ್ತಾನದ ಹೇಯ ಕೃತ್ಯ ದೇಶದ ಸ್ವಾಭಿಮಾನಕ್ಕೆ ಧಕ್ಕೆ ತಂದಿದೆ. ಸೈನಿಕರ ಪ್ರಾಣದ ಜೊತೆ ರಾಜಕೀಯ ಮಾಡುವದು ಬೇಡ.
ದಕ್ಷಿಣ ಕನ್ನಡ ಸಂಸ್ಕಾರ ಭಾರತ ಸಂಚಾಲಕ ಕೃಷ್ಣ ಉಪಾಧ್ಯಾಯ ಮಾತನಾಡಿ, ಸ್ವಾತಂತ್ರ್ಯ ಪ್ರಾರಂಭದಲ್ಲಿ ಸೈನಿಕರಿಗೆ ರಾಜಕಾರಣದ ಬಲ ಇರಲಿಲ್ಲ ಆದರೆ ಇಂದು ಸೈನಿಕರಿಗೆ ಮುಕ್ತ ಸ್ವಾತಂತ್ರ್ಯ ನೀಡಲಾಗಿದೆ. ದೇಶದ ವಿರುದ್ಧ ಅಟ್ಟಹಾಸ ಮೆರೆಯುತ್ತಿರುವ ಉಗ್ರಗಾಮಿಗಳ ನಾಶ ಖಂಡಿತ ನಡೆಯಲಿದೆ ಎಂದರು.
ಬಿಜೆಪಿ ಮಂಡಳ ಅಧ್ಯಕ್ಷ ಕುಂಞಂಗಡ ಅರುಣ್ ಭೀಮಯ್ಯ, ಕುಟ್ಟ ಸ್ಥಾನೀಯ ಸಮಿತಿಯ ಅಧ್ಯಕ್ಷ ದಿನೇಶ್, ಶ್ರೀಮಂಗಲ ಸ್ಥಾನೀಯ ಅಧ್ಯಕ್ಷ ಕಳ್ಳಂಗಡ ಕಾಳಪ್ಪ, ಬಿರುನಾಣಿ ಅಧ್ಯಕ್ಷ ಅಣ್ಣಳಮಾಡ ರಾಯ್, ಹುದಿಕೇರಿ ಅಧ್ಯಕ್ಷ ನೂರೇರ ವಿನು, ಕೆ.ಬಾಡಗ ಅಧ್ಯಕ್ಷ ನವೀನ್, ಬಿ. ಶೆಟ್ಟಿಗೇರಿ ಸುಮನ್, ಶ್ರೀಮಂಗಲ ಗ್ರಾ.ಪಂ ಕಲ್ಪನ ತಿಮ್ಮಯ್ಯ, ಜಿ.ಪಂ ಮಾಜಿ ಅಧ್ಯಕ್ಷ ಚೋಡುಮಾಡ ಶರೀನ್ ಸುಬ್ಬಯ್ಯ, ವಿ.ಎಸ್.ಎಸ್.ಎನ್. ಅಧ್ಯಕ್ಷ ಹೊಟ್ಟೇಂಗಡ ರಮೇಶ್ ಸೇರಿದಂತೆ ನೂರಾರು ಕಾರ್ಯಕರ್ತರು ಹಾಜರಿದ್ದರು. ಈ ಸಂದರ್ಭ ಬಸ್ ನಿಲ್ದಾಣದಲ್ಲಿ ಮಾನವ ಸರಪಳಿ ರಚಿಸಿ ಪಾಕಿಸ್ತಾನ ಧ್ವಜವನ್ನು ದಹನ ಮಾಡುವ ಮೂಲಕ ಆಕ್ರೋಶವನ್ನು ವ್ಯಕ್ತಪಡಿಸಿದರು.
- ಎನ್.ಎನ್. ದಿನೇಶ್