ಗೋಣಿಕೊಪ್ಪಲು, ಫೆ.19: ಸರ್ಕಾರಿ ಬಸ್ ಹಾಗೂ ಓಮಿನಿ ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಓಮಿನಿ ಕಾರಿನ ಚಾಲಕ ಮೊಹಮ್ಮದ್ (45) ಹಾಗೂ ಅವರ ಪುತ್ರ ಶಫೀಕ್ (14) ಎಂಬವರುಗಳು ಗಾಯಗೊಂಡಿದ್ದಾರೆ. ಮಧ್ಯಾಹ್ನದ ವೇಳೆ ಮೈಸೂರಿನಿಂದ ಸರ್ಕಾರಿ ಬಸ್ ಗೋಣಿಕೊಪ್ಪ ಕಡೆಗೆ ಬರುತ್ತಿತ್ತು. ಈ ಸಂದರ್ಭ ಮೈಸೂರು ಕಡೆಗೆ ತೆರಳುತ್ತಿದ್ದ ಸುಳ್ಯ ಮೂಲದವರಾದ ಮೊಹಮ್ಮದ್ ಅವರ ಕಾರು ಸಮೀಪದ ಹರಿಶ್ಚಂದ್ರಪುರದಲ್ಲಿ ಮುಖಾಮುಖಿ ಡಿಕ್ಕಿಯಾಗಿದ್ದು, ಮೊಹಮ್ಮದ್ ಅವರ ಬಲಗಾಲಿಗೆ ತೀವ್ರ ಪೆಟ್ಟಾಗಿದ್ದು, ಮಗ ಶಫೀಕ್ ತಲೆಗೆ ಗಾಯವಾಗಿದೆ. ಗೋಣಿಕೊಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಸುಳ್ಯಕ್ಕೆ ಕಳುಹಿಸಲಾಯಿತು. ಸುಮಾರು 20 ನಿಮಿಷಗಳ ಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಸಾರ್ವಜನಿಕರೇ ವಾಹನ ತೆರವುಗೊಳಿಸಿ ಸಹಕರಿಸಿದರು. ನಗರದಲ್ಲಿ ಬಿಎಸ್‍ಎನ್‍ಎಲ್‍ನ ಸೇವೆ ಸ್ಥಗಿತಗೊಂಡಿದ್ದು, ಯಾವದೇ ದೂರವಾಣಿ ಕರೆಗಳು ಸ್ವೀಕೃತವಾಗುತ್ತಿರಲಿಲ್ಲ. ಇದರಿಂದ ಸಕಾಲದಲ್ಲಿ ಪೊಲೀಸರು ಆಗಮಿಸಲು ಸಾಧ್ಯವಾಗಲಿಲ್ಲ.

-ಹೆಚ್.ಕೆ.ಜಗದೀಶ್