ಸೋಮವಾರಪೇಟೆ, ಫೆ.19: ಕಳೆದ 4 ತಿಂಗಳ ಹಿಂದಷ್ಟೇ ವಿವಾಹವಾಗಿದ್ದ ಮಹಿಳೆಯೋರ್ವರು ಡೆತ್‍ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸಮೀಪದ ಹಾಗನಲ್ಲು ಗ್ರಾಮದಲ್ಲಿ ನಡೆದಿದೆ.

ಹಾನಗಲ್ಲು ಗ್ರಾಮ ನಿವಾಸಿ ನೋಣು-ಕೊರಪಲಮ್ಮ ಅವರ ಪುತ್ರಿ, ಹೆಚ್.ಎನ್. ರತ್ನ (36) ಎಂಬವರೇ ನೇಣಿಗೆ ಶರಣಾದವರಾಗಿದ್ದು, ನಿನ್ನೆ ಸಂಜೆ ಘಟನೆ ನಡೆದಿರಬಹುದು ಎಂದು ಅಂದಾಜಿಸಲಾಗಿದೆ.

ಸಂಜೆ ವೇಳೆಯಲ್ಲಿ ಮನೆಯಿಂದ ಕಾಣೆಯಾಗಿದ್ದ ರತ್ನ ಅವರನ್ನು ಸಂಬಂಧಿಕರು ಹುಡುಕಾಡುತ್ತಿದ್ದ ಸಂದರ್ಭ, ರಾತ್ರಿ 9 ಗಂಟೆ ಸುಮಾರಿಗೆ ಹಳೆಯ ಮನೆಯ ಬಳಿಯಿರುವ ಮಾವಿನ ಮರಕ್ಕೆ ವೇಲಿನಿಂದ ನೇಣುಬಿಗಿದುಕೊಂಡ ಸ್ಥಿತಿಯಲ್ಲಿ ಮೃತದೇಹ ಕಂಡುಬಂದಿದೆ.

ಕಳೆದ 3.9.2018ರಂದು ಹಾನಗಲ್ಲು ಗ್ರಾಮದ ಗಣಪತಿ ದೇವಾಲಯದಲ್ಲಿ ಶನಿವಾರಸಂತೆಯ ಮಹೇಂದ್ರ ಎಂಬಾತನೊಂದಿಗೆ ವಿವಾಹ ನೆರವೇರಿದ್ದು, ತಾಳಿ ಕಟ್ಟಿದ ದಿನವೇ ಮಹೇಂದ್ರ ಇಲ್ಲಿಂದ ಓಡಿ ಹೋಗಿದ್ದಾನೆ. ಈ 4 ತಿಂಗಳ ಕಾಲ ಒಂಟಿಯಾಗಿದ್ದ ರತ್ನ ಅವರು ನಿನ್ನೆ ದಿನ ಡೆತ್‍ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಂಬಂಧಿಕರು ತಿಳಿಸಿದ್ದಾರೆ.

ಸ್ಥಳಕ್ಕೆ ಸೋಮವಾರಪೇಟೆ ಪೊಲೀಸರು ತೆರಳಿ ಪರಿಶೀಲಿಸಿದ್ದು, ಠಾಣೆಯಲ್ಲಿ ದೂರು ದಾಖಲಿಸಿಕೊಂಡಿದ್ದಾರೆ. ತಾಲೂಕು ತಹಶೀಲ್ದಾರ್ ಗೋವಿಂದರಾಜು ಅವರ ಸಮಕ್ಷಮ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಮೃತದೇಹವನ್ನು ವಾರಸುದಾರರಿಗೆ ಒಪ್ಪಿಸಲಾಯಿತು.