ಮಡಿಕೇರಿ, ಫೆ. 19: ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಭಯೋತ್ಪಾದನಾ ಘಟನೆಯನ್ನು ಖಂಡಿಸಿ ಮುಸ್ಲಿಂ ಜಮಾಅತ್ ಒಕ್ಕೂಟದ ವತಿಯಿಂದ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಯಿತು.

ನಗರದ ಇಂದಿರಾ ಗಾಂಧಿ ವೃತ್ತದ ಬಳಿ ಮಾನವ ಸರಪಳಿ ರಚಿಸಿದ ಪ್ರತಿಭಟನಾಕಾರರು ಭಾರತೀಯರ ಮೇಲಿನ ಉಗ್ರರ ಧಾಳಿಗೆ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭ ಮಾತನಾಡಿದ ಮುಸ್ಲಿಂ ಜಮಾಅತ್‍ಗಳ ಒಕ್ಕೂಟದ ಅಧ್ಯಕ್ಷ ಮಹಮ್ಮದ್ ಹನೀಫ್, ಭಾರತಕ್ಕೆ ಸ್ವಾತಂತ್ರ್ಯ ಬಂದ ಬಳಿಕ ಹಿಂದೂ, ಮುಸ್ಲಿಂ, ಕ್ರೈಸ್ತ ಧರ್ಮದವರು ಬೇರೆ ಬೇರೆಯಾಗಿದ್ದಾರೆ. ನಮ್ಮ ಕಾರ್ಯಕ್ರಮಗಳು ಆರೋಪ-ಪ್ರತ್ಯಾರೋಪಕ್ಕೆ ಸೀಮಿತವಾಗಿದೆ.

ಭಾರತೀಯ ಯೋಧರ ಮೇಲೆ ಉಗ್ರರು ಏಕಾಏಕಿ ಧಾಳಿ ನಡೆಸಿದ್ದು, ಉಗ್ರರು ಸ್ಪೋಟಕಗಳನ್ನು ಇಟ್ಟುಕೊಂಡು ಹೋಗುತ್ತಿದರೂ ಯಾವದೇ ಸುಳಿವು ದೊರೆತಿಲ್ಲ ಎಂದರೆ ಇದರಲ್ಲಿ ಕಾಣದ ಕೈಗಳ ಕೈವಾಡವಿದೆ ಎಂಬದು ಸ್ಪಷ್ಟವಾಗುತ್ತದೆ ಎಂದ ಅವರು, ಕ್ರೂರ ಕೃತ್ಯ ನಡೆಸಿದವರನ್ನು ಬಹಿರಂಗವಾಗಿ ಗಲ್ಲಿಗೇರಿಸಬೇಕು ಎಂದು ಆಗ್ರಹಿಸಿದರು.

ಪಿಎಫ್‍ಐ ಜಿಲ್ಲಾಧ್ಯಕ್ಷ ಹ್ಯಾರಿಸ್ ಮಾತನಾಡಿ, ಪಾಕ್ ಉಗ್ರರು ನಡೆಸಿದ ಕೃತ್ಯದಿಂದಾಗಿ ಭಾರತೀಯ ವೀರ ಯೋಧರು ಪ್ರಾಣ ಕಳೆದುಕೊಂಡಿದ್ದಾರೆ. ಭಾರತದಲ್ಲಿ ಹಲವು ವರ್ಷಗಳ ಬಳಿಕ ಇಂತಹ ಘೋರ ಕೃತ್ಯ ನಡೆದಿದೆ. ಘಟನೆಗೆ ಕಾರಣಕರ್ತರಾದ ವ್ಯಕ್ತಿಗಳಿಗೆ ಕೇಂದ್ರ ಸರಕಾರ ಕಠಿಣ ಶಿಕ್ಷೆಯನ್ನು ವಿಧಿಸಬೇಕು ಎಂದರು.

ಎಸ್‍ಡಿಪಿಐ ರಾಜ್ಯ ಸಮಿತಿ ಸದಸ್ಯ ಅಮೀನ್ ಮೊಹಿಸಿನ್ ಮಾತನಾಡಿ, ಕೇಂದ್ರ ಸರಕಾರ ವೀರ ಯೋಧರಿಗೆ ಸೂಕ್ತ ಭದ್ರತೆಯನ್ನು ಕಲ್ಪಿಸಿ ಘಟನೆ ಮರುಕಳಿಸದಂತೆ ತಡೆಯಬೇಕು ಹಾಗೂ ಉಗ್ರಗಾಮಿಗಳಿಗೆ ತಕ್ಕ ಉತ್ತರ ನೀಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಮಡಿಕೇರಿಯ ಬದ್ರಿಯ ಮಸೀದಿ, ಜುಮಾ ಮಸೀದಿ, ಮದೀನ ಮಸೀದಿ, ಮಕ್ಕ ಮಸೀದಿಯ ಅಧ್ಯಕ್ಷರುಗಳು ಹಾಗೂ ಪ್ರಮುಖರಾದ ಅಬ್ದುಲ್ ರಜಾóಕ್, ಮನ್ಸೂರ್ ಮತ್ತಿತರರು ಇದ್ದರು.