ಸಿದ್ದಾಪುರ, ಫೆ.19 :ಇತ್ತೀಚೆಗೆ ದಾರುಣವಾಗಿ ಹತ್ಯೆಯಾದ ಸಂಧ್ಯಾಳ ಕುಟುಂಬಕ್ಕೆ ಸರಕಾರವಾಗಲಿ ಜಿಲ್ಲಾಡಳಿತವಾಗಲಿ ಯಾವದೇ ಪರಿಹಾರ ನೀಡಲಿಲ್ಲ ಹಾಗೂ ಸ್ಥಳಕ್ಕೆ ಭೇಟಿ ನೀಡಲಿಲ್ಲವೆಂದು ಜಸ್ಟಿಸ್ ಫಾರ್ ಸಂಧ್ಯಾ ಸಮಿತಿಯ ವತಿಯಿಂದ ಸಿದ್ದಾಪುರ ಗ್ರಾ.ಪಂ. ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ಈ ಸಂದರ್ಭ ಜಸ್ಟಿಸ್ ಫಾರ್ ಸಂಧ್ಯಾ ಸಮಿತಿಯ ಮುಖ್ಯಸ್ಥ ಎ.ಎಸ್. ಮುಸ್ತಫ ಮಾತನಾಡಿ, ಸಂಧ್ಯಾ ಸಾವನ್ನಪ್ಪಿ 2 ವಾರ ಕಳೆದರೂ ಜಿಲ್ಲಾಡಳಿತದ ಅಧಿಕಾರಿಯಾಗಲಿ, ತಾಲೂಕು ಆಡಳಿತ ಅಧಿಕಾರಿಯಾಗಲಿ ಯಾರೂ ಕೂಡ ಬಾರದೇ ಬಡಕುಟುಂಬದ ಬಗ್ಗೆ ನಿರ್ಲಕ್ಷ್ಯ ಧೋರಣೆಯನ್ನು ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು. ಇದೇ ಸಂದರ್ಭದಲ್ಲಿ ಪ್ರತಿಭಟನಾಕಾರರು ಸ್ಥಳಕ್ಕೆ ವೀರಾಜಪೇಟೆ ತಹಶೀಲ್ದಾರ್ ಬರುವಂತೆ ಒತ್ತಾಯಿಸಿದರು. ನಂತರ ಸ್ಥಳಕ್ಕೆ ವೀರಾಜಪೇಟೆ ತಹಶೀಲ್ದಾರ್ ಗೋವಿಂದರಾಜ್ ಹಾಗೂ ಅಮ್ಮತ್ತಿ ಹೋಬಳಿ ಕಂದಾಯ ಪರಿವೀಕ್ಷಕ ವಿನು ಭೇಟಿ ನೀಡಿ ಪ್ರತಿಭಟನಾಕಾರರ ಬೇಡಿಕೆಗಳನ್ನು ಆಲಿಸಿದರು. ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಪ್ರತಿಭಟನಾಕಾರರು ಸಲ್ಲಿಸಿದರು. ಈ ಸಂದರ್ಭ ಆದಿ ದ್ರಾವಿಡ ಸಂಘದ ಜಿಲ್ಲಾಧ್ಯಕ್ಷ ಜನಾರ್ಧನ, ತಾಲೂಕು ಅಧ್ಯಕ್ಷ ಶಿವಪ್ಪ, ಎಂ. ಗಿರೀಶ ಹಾಗೂ ಜಿಲ್ಲಾ ಪಂಚಾಯತ್ ಸದಸ್ಯೆ ಸರಿತಾ ಪೂಣಚ್ಚ ಹಾಗೂ ಗ್ರಾ.ಪಂ ಸದಸ್ಯರುಗಳು ಹಾಜರಿದ್ದರು.