ಮಡಿಕೇರಿ, ಮಾ. 7: ‘ಪುಸ್ತಕದ ಬದನೆಕಾಯಿ ಸಾಂಬಾರಿಗೆ ಆಗಲ್ಲ’ ಎನ್ನುವ ಮಾತಿಗೆ ಅರ್ಥ ಕಲ್ಪಿಸುವ ಮೂಲಕ, ಇಂದಿನ ಪಠ್ಯಕ್ರಮಗಳಿಂದ ಒತ್ತಡದಲ್ಲಿ ಸಿಲುಕಿರುವ ಮಕ್ಕಳಿಗೆ ಶೈಕ್ಷಣಿಕ ಆಸಕ್ತಿ ಅಥವಾ ಹುರುಪು ತುಂಬುವ ದಿಸೆಯಲ್ಲಿ ಇಲ್ಲಿನ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯ ಕಾರ್ಯೋನ್ಮುಖ ವಾಗಿದೆ. ಪ್ರಸಕ್ತ ಈ ಶಾಲೆಯಲ್ಲಿ ಕೇಂದ್ರೀಯ ಪಠ್ಯ ಕ್ರಮದೊಂದಿಗೆ ಗುರುಕುಲ ಶಿಕ್ಷಣ ಪದ್ಧತಿಗೆ ಒತ್ತು ನೀಡಲಾಗುತ್ತಿದೆ.

ಮನುಷ್ಯ ಮಾತ್ರರಾಗಿ ಹುಟ್ಟುವ ಎಲ್ಲ ಮಕ್ಕಳೂ ಮನುಕುಲಕ್ಕೆ ಸೇರಿದ್ದರು, ತಮ್ಮ ತಮ್ಮ ಪ್ರತಿಭೆ, ನಿರಂತರ ಪರಿಶ್ರಮ, ಸತತ ಸಾಧನೆಯ ಮೂಲಕ ಬ್ರಹ್ಮಜ್ಞಾನವನ್ನು ಸಂಪಾದಿಸಿಕೊಳ್ಳುವದು ಸಾಧ್ಯವೆಂದು ನೈಜ ಶಿಕ್ಷಣದಲ್ಲಿ ಆದ್ಯತೆ ನೀಡಲಾಗುತ್ತಿದೆ. ಹೀಗಾಗಿ ಇಂದು ಕೊಡಗು ವಿದ್ಯಾಲಯದ ಮಕ್ಕಳು ಶಾಲೆ ಹಾಗೂ ಮನೆಗಳಲ್ಲಿ ಒತ್ತಡದಿಂದ ಮುಕ್ತ ವಾತಾವರಣದಲ್ಲಿ ತಮ್ಮ ಹೆತ್ತವರಿಗೂ ಕಸರತ್ತು ನೀಡತೊಡಗಿದ್ದಾರೆ. ಪರಿಣಾಮ ಜಡತ್ವ ದೂರವಾಗಿ ಕ್ರಿಯಾಶೀಲತೆ ಕಂಡುಕೊಳ್ಳಲು ಯತ್ನಿಸಲಾಗುತ್ತಿದೆ.

ಕೊಡಗಿನಂತಹ ಪ್ರಾಕೃತಿಕ ಸಿರಿಯ ನಡುವೆ ಪರಿಸರ, ಮರ, ಗಿಡ, ಪ್ರಾಣಿ, ಪಕ್ಷಿ, ಹಣ್ಣು-ಹಂಪಲು, ಹಾಲು, ನೀರು, ಬಳ್ಳಿ, ಹೂವು, ಹಾವು, ಹಲ್ಲಿ ಹೀಗೆ ಪ್ರಕೃತಿಯ ಪ್ರತಿಯೊಂದನ್ನು ಮಕ್ಕಳಿಗೆ ಪರಿಚಯಿಸಲಾಗುತ್ತಿದೆ. ಅಷ್ಟು ಮಾತ್ರವಲ್ಲದೆ ಸದಾ ಕ್ರಿಯಾಶೀಲರಾಗಿ ಕಲಿಕೆಯಲ್ಲಿ ಒಲವಿನಿಂದ ಪಾತ್ರವಹಿಸುವ ದಿಸೆಯಲ್ಲಿ ಸಂಸ್ಕಾರ ಪೂರ್ಣ ಶಿಕ್ಷಣ ನೀಡಲಾಗುತ್ತಿದೆ.

ಶಾಲಾ ಪರಿಸರದಲ್ಲಿರುವ ಮರ - ಗಿಡಗಳ ನಡುವೆ ಒಣಗಿ ಬಿದ್ದಿರುವ ಸೌದೆಗಳನ್ನು ಸಂಗ್ರಹಿಸಿ ತಾವೇ ಅಡುವೆ ತಯಾರಿಸಿ ಸಹಭೋಜನದಲ್ಲಿ ತೊಡಗುತ್ತಿದ್ದಾರೆ. ಮನೆಗಳಿಂದ ಹೆತ್ತವರ ಮಾರ್ಗದರ್ಶನದಲ್ಲಿ ವಿಭಿನ್ನ ತಿನಿಸುಗಳನ್ನು ತಯಾರಿಸಿ ತಂದು ಶಾಲೆಯೊಳಗೆ ಮಾರಾಟಗೊಳಿಸುವ ಮೂಲಕ ಆರ್ಥಿಕ ನಿರ್ವಹಣೆಯ ಹೊಣೆ ಹೊತ್ತುಕೊಂಡು ಗಳಿಕೆ ಅಥವಾ ಉಳಿಕೆಯ ತಿಳುವಳಿಕೆ ಪಡೆಯುವಂತಾಗಿದೆ. ಕೇವಲ ನಿತ್ಯದ ಪಠ್ಯ ಪುಸ್ತಕಗಳ ಅಧ್ಯಯನ, ಸಂಜೆ ಬಳಿಕ ಮನೆಗೆ ಹಿಂತಿರುಗಿದ ವೇಳೆ, ಮನೆ ಕೆಲಸ (ಹೋಂ ವರ್ಕ್) ಬರವಣಿಕೆಗೆ ಸೀಮಿತಗೊಳ್ಳದೆ ಪ್ರತಿಯೊಂದು ಅಂಶದೆಡೆಗೆ ಪೋಷಕರು ಹಾಗೂ ಶಾಲಾ ವೇಳೆ ಶಿಕ್ಷಕರೊಂದಿಗೆ ಚರ್ಚಿಸಿ ಉತ್ತರ ಕಂಡುಕೊಳ್ಳುತ್ತಾರೆ.

ಸಾಮೂಹಿಕ ಪ್ರಯತ್ನ: ಇಂಥಹ ಕಲಿಕೆಗೆ ಆದ್ಯತೆಯೊಂದಿಗೆ ಸಾಮೂಹಿಕ ಶಿಕ್ಷಣ ಕ್ರಮಕ್ಕೆ ಒತ್ತು ನೀಡಲು ಯತ್ನಿಸುತ್ತಿದ್ದಾರೆ. ವಿದ್ಯಾಸಂಸ್ಥೆಯ ಆಡಳಿತ ಅಧಿಕಾರಿ ವಿದ್ಯಾ ಹರೀಶ್, ಸ್ವತಃ ತಾವೇ ಶಾಲಾ ಆವರಣದಲ್ಲಿ ನೆಲದಲ್ಲೇ ಆಸೀನರಾಗಿ ಎಲ್ಲ ಶಿಕ್ಷಕ ಸಿಬ್ಬಂದಿಯನ್ನು ಕುಳ್ಳಿರಿಸಿಕೊಂಡು ದೈನಂದಿನ ಚಟುವಟಿಕೆಗಳ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತಾರೆ. ವಿದ್ಯಾರ್ಥಿ, ಶಿಕ್ಷಕ, ಪೋಷಕ, ವಿದ್ಯಾಲಯ ನಡುವೆ ಅಂತರಕ್ಕೆ ಅವಕಾಶವಾಗದಂತೆ ಸಮ್ಮಿಲನ ದೊಂದಿಗೆ ಸಹಬಾಳ್ವೆಗೆ ಚಿತ್ತ ಹರಿಸಿದ್ದಾರೆ.

ಮಕ್ಕಳಲ್ಲಿ ಕಲರವ: ಇಂಥಹ ವಿನೂತನ ಪ್ರಯೋಗದಿಂದ ಕೊಡಗು ವಿದ್ಯಾಲಯದ ಮಗು ಸ್ವಾಭಿಮಾನದ ಹಾದಿಯತ್ತ ಹೆಜ್ಜೆ ಇಡುವಂತಾಗಿದೆ. ತನ್ನ ಬೂಟು ತಾನೇ ಪಾಲೀಶ್ ಮಾಡಿಕೊಳ್ಳುವದು, ಸಮವಸ್ತ್ರ ಗುಂಡಿ ಕಿತ್ತು ಹೋದರೆ ಮಕ್ಕಳೇ ಅದನ್ನು ಸರಿಪಡಿಸಿಕೊಳ್ಳುವದು. ನಿತ್ಯೋಪಯೋಗಿ ವಸ್ತುಗಳು, ಆಹಾರ ಕ್ರಮ, ನೀರಿನ ಮಿತ ಬಳಕೆ, ಪರಿಸರ ಪ್ರೇಮ ಇತ್ಯಾದಿ ಪ್ರತಿಯೊಂದು ಅಂಶದತ್ತ ಗಮನಿಸಲು ನಿಗಾವಹಿಸುವಂತಾಗಿದೆ. ಪರಿಣಾಮ ಮಕ್ಕಳಲ್ಲಿ ಹೊಸತನದ ಕಲರವ ಶಾಲಾ ಪರಿಸರ ಹಾಗೂ ಮನೆಗಳಲ್ಲೂ ಕಾಣುವಂತಾಗಿದೆ.

ನಿತ್ಯ ಶಾಲೆಯ ದ್ವಾರದಲ್ಲಿ ಬಣ್ಣದ ರಂಗೋಲಿ, ಸಾಮೂಹಿಕ ಪ್ರಾರ್ಥನೆ ನಡುವೆ ಪ್ರತಿಭಾ ಚಟುವಟಿಕೆ, ನಿರ್ಭಯದಿಂದ ಶಿಕ್ಷಕರನ್ನು ಭೇಟಿಯಾಗಿ ಸಂಶಯ ಪರಿಹರಿಸಿಕೊಳ್ಳುವ ವಾತಾವರಣ ಮೂಡುವಂತಾಗಿದೆ. ಹೀಗೆ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದಲ್ಲಿ ದಿನನಿತ್ಯ ಒಂದಿಲ್ಲೊಂದು ರೀತಿಯ ಹೊಸತನ ಕಾಣುವಂತಾಗಿದೆ. ಮಕ್ಕಳು ಮುಕ್ತ ವಾತಾವರಣದಲ್ಲಿ ಲವಲವಿಕೆಯಿಂದ ನಲಿಯುತ್ತಾ ನೈಜ ಶಿಕ್ಷಣ ಪಡೆಯುವಂತಾಗಿದೆ. ಚಿಣ್ಣರಿಂದಲೇ ಅರಳಿರುವ ವಿಭಿನ್ನ ಚಿತ್ರಕಲೆಗಳನ್ನು ಕೂಡ ಶಾಲಾ ಆವರಣದೊಳಗೆ ನೋಡುತ್ತಾ, ಒಂದು ರೀತಿ ಬಣ್ಣದ ಲೋಕದಲ್ಲಿ ಮೈಮರೆಯುವಂತಾಗಿದೆ. ವಿವಿಧತೆಯಲ್ಲಿ ಏಕತೆ, ಆ ಮೂಲಕ ಸಾಮರಸ್ಯ, ರಾಷ್ಟ್ರೀಯ ಭಾವೈಕ್ಯತೆಗೆ ಇಲ್ಲಿ ಆದ್ಯತೆ ಕಾಣಬಹುದಾಗಿದೆ.

ಕ್ರಾಫ್ಟ್‍ಮೇಳ: ಮುಂದಿನ ಮಾರ್ಚ್ 30, 31, ಏಪ್ರಿಲ್ 1 ವಿದ್ಯಾಲಯದಲ್ಲಿ ಕ್ರಾಫ್ಟ್ ಮೇಳ 2019 ಆಯೋಜಿಸಲಾಗಿದೆ.

ಈ ಮೇಳದಲ್ಲಿ ವಿದ್ಯಾಲಯ ಮಾತ್ರವಲ್ಲದೆ ಹೊರಗಿನ ಮಕ್ಕಳು, ಹಿರಿಯರು ಪಾಲ್ಗೊಳ್ಳಬಹುದು. ಆಸಕ್ತರು ಮಾರ್ಚ್ 10 ರೊಳಗೆ ಹೆಸರು ನೋಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಹೆಚ್ಚಿನ ಮಾಹಿತಿಗೆ 9448504545 ಅಥವಾ 9611981614 ರಲ್ಲಿ ಸಂಪರ್ಕಿಸಲು ವಿದ್ಯಾಲಯ ಪ್ರಕಟಣೆ ತಿಳಿಸಿದೆ.