ಅರಣ್ಯ ಇಲಾಖೆಗೆ ನೋಟಿಸ್‍ಮಡಿಕೇರಿ, ಮಾ. 7: ಕೊಡಗು ಜಿಲ್ಲೆ ಅರಣ್ಯ ಪ್ರದೇಶದಲ್ಲಿ ಪದೇ ಪದೇ ಸಂಭವಿಸುವ ಕಾಳ್ಗಿಚ್ಚು ತಡೆಯಲು ಪ್ರತ್ಯೇಕ ಕಾರ್ಯಪಡೆ (ಟಾಸ್ಕ್ ಫೋರ್ಸ್) ಸ್ಥಾಪಿಸುವಂತೆ ನಿರ್ದೇಶನ ನೀಡಬೇಕು ಎಂದು ಕೋರಿ ಸಲ್ಲಿಸಲಾದ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಅರಣ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ನೋಟಿಸ್ ಜಾರಿಗೊಳಿಸಲು ಹೈಕೋರ್ಟ್ ಆದೇಶಿಸಿದೆ.
ಈ ಕುರಿತಂತೆ ಕೊಡಗು ಜಿಲ್ಲೆಯ ಕಾವೇರಿ ಸೇನೆ ಪ್ರಧಾನ ಸಂಚಾಲಕ ಕೆ.ಎ. ರವಿ ಚೆಂಗಪ್ಪ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಅಲೋಕ್ ಆರಾಧೆ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು.
ಇದೊಂದು ಗಂಭೀರ ಪ್ರಕರಣ ಎಂಬ ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿದ ನ್ಯಾಯಪೀಠ, ಕೊಡಗು ಜಿಲ್ಲಾಧಿಕಾರಿ, ಉಪ ಅರಣ್ಯ ಸಂರಕ್ಷಣಾಧಿಕಾರಿಗೆ ನೋಟಿಸ್ ಜಾರಿ ಗೊಳಿಸಲು ಆದೇಶಿಸಿ ವಿಚಾರಣೆಯನ್ನು ತಾ. 13 ಕ್ಕೆ ಮುಂದೂಡಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಹೆಚ್. ಪವನಚಂದ್ರ ಶೆಟ್ಟಿ, ಕಾಳ್ಗಿಚ್ಚು ಪತ್ತೆ ಹಚ್ಚಲು ಡ್ರೋಣ್ ಕ್ಯಾಮೆರಾ ಬಳಕೆಗೆ ಅನುಮತಿ ನೀಡುವಂತೆ ನಿರ್ದೇಶಿಸಬೇಕು ಎಂದು ಕೋರಿದರು.
ಇದಕ್ಕೆ ಪ್ರತಿಯಾಗಿ ಸರಕಾರದ ಪರ ವಕೀಲರು ಪ್ರಮಾಣ ಪತ್ರ ಸಲ್ಲಿಸಿ, ಈ ದಿಸೆಯಲ್ಲಿ ಈಗಾಗಲೇ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಕಾಳ್ಗಿಚ್ಚು ನಿಯಂತ್ರಣ ಹಾಗೂ ನಿರ್ವಹಣಾ ಯೋಜನೆ 2018-19 ಅನ್ನು ಈಗಾಗಲೇ ರೂಪಿಸಲಾಗಿದೆ. ಪ್ರಸಕ್ತ ವರ್ಷ ಮಡಿಕೇರಿ ವಲಯವನ್ನು ಕಾಳ್ಗಿಚ್ಚು ಶೂನ್ಯ ಪ್ರದೇಶವನ್ನಾಗಿ ಮಾಡುವ ಗುರಿ ಇಟ್ಟುಕೊಳ್ಳಲಾಗಿದೆ ಎಂದು ಪ್ರಮಾಣ ಪತ್ರದಲ್ಲಿ ತಿಳಿಸಲಾಗಿದೆ.