ಶಾಸಕ ಅಪ್ಪಚ್ಚು ರಂಜನ್
ಕುಶಾಲನಗರ, ಮಾ. 8: ಕಾಮಗಾರಿ ಗುಣಮಟ್ಟದ ಬಗ್ಗೆ ದೂರುಗಳು ಬಂದಲ್ಲಿ ನಿರ್ದಾಕ್ಷಿಣ್ಯವಾಗಿ ಗುತ್ತಿಗೆದಾರರ ಮೇಲೆ ಕ್ರಮಕ್ಕೆ ಶಿಫಾರಸು ಮಾಡಲಾಗುವದು ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಹೇಳಿದ್ದಾರೆ.
ಕುಶಾಲನಗರದ ಬಲಮುರಿ ದೇವಾಲಯದ ಬಳಿಯಿರುವ ಕರಿಯಪ್ಪ ಬಡಾವಣೆಯಲ್ಲಿ ಗ್ರಾಮ ವಿಕಾಸ ಯೋಜನೆಯಡಿ ಸುಮಾರು 1.6 ಕಿಲೋ ಮೀಟರ್ ಉದ್ದದ ರಸ್ತೆ ಕಾಮಗಾರಿಯ ಡಾಂಬರೀಕರಣಕ್ಕೆ ಭೂಮಿಪೂಜೆ ಹಾಗೂ ಬಿಜೆಪಿ ಬೈಕ್ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು. ಸರ್ಕಾರದ ಗ್ರಾಮ ವಿಕಾಸ ಯೋಜನೆಯಡಿ ಈಗಾಗಲೇ ಜಿಲ್ಲೆಯ ಎರಡು ವಿಧಾನ ಪರಿಷತ್ ಸದಸ್ಯರು ಅವರವರ ಕ್ಷೇತ್ರಗಳಲ್ಲಿ ಸುಮಾರು ಮೂರು ನಾಲ್ಕು ಗ್ರಾಮಗಳ ಅಭಿವೃದ್ಧಿಗೆ ವಿಶೇಷ ಅನುದಾನದಡಿ ಗ್ರಾಮ ವಿಕಾಸ ಯೋಜನೆಯ ಅನುದಾನವನ್ನು ಸದ್ಬಳಕೆ ಮಾಡಿದ್ದು, ಸುಮಾರು ರೂ. 80 ಲಕ್ಷ ವೆಚ್ಚದಲ್ಲಿ 1.600. ಕಿಲೋ ಮೀಟರ್ ರಸ್ತೆ ಡಾಂಬರೀಕರಣಕ್ಕೆ ಚಾಲನೆ ನೀಡಲಾಗಿದೆ.
ಸಾರ್ವಜನಿಕರು ಕಾಮಗಾರಿಯ ಸಂದರ್ಭ ಯಾವದೇ ಕಳಪೆ ಗುಣಮಟ್ಟಕ್ಕೆ ಆಸ್ಪದ ಕೊಡದೆ ಗುಣಮಟ್ಟದ ಕಾಮಗಾರಿಗೆ ಒತ್ತು ನೀಡಬೇಕು. ಕಾಮಗಾರಿ ಏನಾದರೂ ಕಳಪೆ ಗುಣಮಟ್ಟದಲ್ಲಿ ಕಂಡು ಬಂದರೆ ಶೀಘ್ರ ಗುತ್ತಿಗೆದಾರರು ಹಾಗೂ ಅಭಿಯಂತರರ ವಿರುದ್ಧ ಕ್ರಮ ಕೈಗೊಳ್ಳಲಾಗುವದು ಎಂದರು. ನಂತರ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಅನುದಾನವನ್ನು ಮಂಜೂರು ಮಾಡಿಸಿಕೊಂಡು ಆದೇಶದ ಹಾಗೂ ಪಟ್ಟಿಯ ಪ್ರಕಾರ ಕೆಲಸ ನಡೆಯುವಂತೆ ಎಚ್ಚರ ವಹಿಸಬೇಕು. ನಿರ್ವಹಣೆಯ ಹೆಚ್ಚಿನ ಗುಣಮಟ್ಟದ ಕಾಮಗಾರಿಗೆ ಒತ್ತು ನೀಡುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸಬೇಕು. ಉತ್ತಮ ಗುಣಮಟ್ಟದ ಕೆಲಸ ಮಾಡುವ ಮೂಲಕ ಸಮಾಜದ ಅಭಿವೃದ್ಧಿಗೆ ಕಾರಣಕರ್ತರಾಗುವಂತೆ ಕರೆ ನೀಡಿದರು.
ಈ ಸಂದರ್ಭ ಜಿಲ್ಲಾ ಪಂಚಾಯಿತಿ ಸದಸ್ಯೆ ಮಂಜುಳಾ. ಸೋಮವಾರಪೇಟೆ ತಾಲೂಕು ಬಿಜೆಪಿ ಯುವ ಮೋರ್ಚಾ ಕಾರ್ಯಾಧ್ಯಕ್ಷ ಎಂ.ಡಿ. ಕೃಷ್ಣಪ್ಪ. ಕುಶಾಲ್ ನಗರ ಬಿಜೆಪಿ ಅಧ್ಯಕ್ಷ ಕೆ.ಜೆ. ಮನು. ಪ.ಪಂ. ಸದಸ್ಯರಾದ ಶೈಲಾ ಕ್ರಷ್ಣಪ್ಪ, ಕೇಶವ, ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಸದಸ್ಯರಾದ ಎಂ.ಎಸ್. ಶಿವಾನಂದ, ರುದ್ರಾಂಬಿಕೆ, ಜಗದೀಶ್, ಪ್ರಮುಖರಾದ ಕುಮಾರಪ್ಪ, ಬಿ.ಕೆ. ಚೆಲುವರಾಜು, ಗಣಪತಿ, ಭಾಸ್ಕರ್ ನಾಯ್ಕ್ ಕಾರ್ಯಕರ್ತರು ಇದ್ದರು.