ಮಡಿಕೇರಿ, ಮಾ. 8: ಮತದಾನವು ಭಾರತೀಯ ಪ್ರಜೆಗಳ ಮೂಲಭೂತ ಹಕ್ಕಾಗಿದ್ದು, ಸಮಾಜದ ಅಭಿವೃದ್ಧಿಗೆ ಪ್ರಜಾಪ್ರಭುತ್ವ ಬಲಪಡಿಸಬೇಕಿದೆ. ಆದ್ದರಿಂದ ಅರ್ಹರೆಲ್ಲರೂ ಮತದಾನ ಮಾಡುವಂತಾಗಬೇಕು ಎಂದು ಸ್ವೀಪ್ ಸಮಿತಿ ಅಧ್ಯಕ್ಷರಾದ ಕೆ. ಲಕ್ಷ್ಮಿಪ್ರಿಯಾ ತಿಳಿಸಿದ್ದಾರೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಮತದಾನದ ಮಹತ್ವ ಕುರಿತು ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ನಡೆದ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪ್ರಜಾಪ್ರಭುತ್ವ ಬಲಪಡಿಸುವ ನಿಟ್ಟಿನಲ್ಲಿ 18 ವರ್ಷ ಪೂರ್ಣಗೊಂಡ ಪ್ರತಿಯೊಬ್ಬರು ಚುನಾವಣಾ ಗುರುತಿನ ಚೀಟಿ ಪಡೆದು ಮತದಾನ ಮಾಡುವಂತಾಗಬೇಕು ಎಂದು ಅವರು ಹೇಳಿದರು. ಪ್ರತಿಯೊಬ್ಬ ಪ್ರಜೆಯು ಮತದಾನ ಮಾಡಬೇಕು ಮತ್ತು ನೆರೆಹೊರೆಯವರಿಗೂ ಕೂಡ ಮಾಹಿತಿ ನೀಡುವಂತಾಗಬೇಕು. ಅರ್ಹರು ಮತದಾನದಿಂದ ವಂಚಿತರಾಗಬಾರದು ಎಂದು ಜಿ.ಪಂ. ಸಿಇಒ ಅವರು ಸಲಹೆ ಮಾಡಿದರು.

ಬೀದಿ ಬದಿ ವ್ಯಾಪಾರಸ್ಥರ ಜೊತೆ ಮಾತನಾಡಿ ಅವರ ಕುಂದು ಕೊರತೆಗಳನ್ನು ಪರಿಶೀಲಿಸಿ ಜೀವನ ಮಟ್ಟದ ಅಭಿವೃದ್ಧಿಗೆ ವಿವಿಧ ಇಲಾಖೆಗಳಲ್ಲಿ ವಿಶೇಷವಾದ ಯೋಜನೆಯ ಮೂಲಕ ಪ್ರೋತ್ಸಾಹ ಧನವನ್ನು ಕೂಡಲೇ ತಲಪಿಸುವಂತೆ ನಿರ್ದೇಶನ ನೀಡಿದರು. ಭೂ ವಿಜ್ಞಾನ ಇಲಾಖೆಯ ರೇಷ್ಮ ಅವರು ಕಂಟ್ರೋಲ್ ಯೂನಿಟ್, ಬ್ಯಾಲೇಟ್ ಯೂನಿಟ್ ಮತ್ತು ವಿವಿ ಪ್ಯಾಟ್ ಬಗ್ಗೆ ಮಾಹಿತಿ ನೀಡಿದರು. ಮತ ಚಲಾಯಿಸಿರುವ ಬಗ್ಗೆ ವಿವಿ ಪ್ಯಾಟ್‍ನಿಂದ ಖಾತರಿ ಪಡಿಸಿಕೊಳ್ಳಬಹುದಾಗಿದೆ ಎಂದು ಅವರು ಹೇಳಿದರು. ನಗರಸಭೆಯ ವ್ಯವಸ್ಥಾಪಕಿ ಸುಜಾತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯಕ್ರಮ ಅಧಿಕಾರಿ ಮಮ್ತಾಜ್ ಇತರರು ಇದ್ದರು. ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಅರುಂಧತಿ ಮಾತನಾಡಿ, ಪ್ರತಿಯೊಬ್ಬರೂ ಮತದಾನದ ಮಹತ್ವದ ಬಗ್ಗೆ ಇತರರಿಗೂ ಮಾಹಿತಿ ನೀಡಬೇಕು. ಮತದಾನದ ದಿನದಂದು ತಪ್ಪದೇ ಮತಗಟ್ಟೆಗೆ ತೆರಳಿ ಮತಹಕ್ಕು ಚಲಾಯಿಸುವಂತಾಗಬೇಕು ಎಂದರು.

ಸರ್ಕಾರದ ವತಿಯಿಂದ ವಿಶೇಷ ಪ್ರೋತ್ಸಾಹ ಧನ, ಸಾಲ ಸೌಲಭ್ಯಗಳನ್ನು ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸಲು “ಸಮೃದ್ಧಿ” ಮುಂತಾದ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದು ಸೌಲಭ್ಯಗಳನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಮ್ತಾಜ್ ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು. ಪ್ರಭಾವತಿ ಸ್ವಾಗತಿಸಿದರು, ಮಮ್ತಾಜ್ ವಂದಿಸಿದರು.