ಮಡಿಕೇರಿ, ಮಾ. 7: ಜಾತಿ-ಜಾತಿಗಳೊಂದಿಗೆ, ಧರ್ಮ-ಧರ್ಮಗಳೊಂದಿಗೆ ಭಾಂದವ್ಯ, ಸಾಮರಸ್ಯ ಬೆಳೆಸುವಲ್ಲಿ ಅರೆಭಾಷೆ ತುಂಬಾ ಪ್ರಮುಖಪಾತ್ರ ವಹಿಸಿದೆ. ಭಾಷೆಯ ಮಟ್ಟಿಗೆ ಇದು ಒಂದು ಸ್ವಾಗತಾರ್ಹ ಬೆಳವಣಿಗೆ ಎಂದು ಲೇಖಕ, ವಿಶ್ರಾಂತ ಪ್ರಿನ್ಸಿಪಾಲ್ ಕೆ.ಆರ್. ಗಂಗಾಧರ್ ಹೇಳಿದರು.
ಸುಳ್ಯದಲ್ಲಿ ನಡೆದ ಪ್ರಪ್ರಥಮ ಅರೆಭಾಷೆ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪೀಠದಿಂದ ಅವರು ಮಾತನಾಡಿದರು.
ಅರೆಭಾಷೆ ಒಂದು ಜನಾಂಗದ ಭಾಷೆಯಾದುದ್ದರಿಂದ ಮೊತ್ತಮೊದಲು ಜನಾಂಗದವರ ಮನೆಯ ಭಾಷೆಯಾಗಬೇಕು. ಎರಡನೆಯ ಹಂತದಲ್ಲಿ ನಮ್ಮ ಜನಾಂಗವನ್ನು ಮೀರಿ ಬೆಳೆಯಬೇಕು. ಮೂರನೇ ಹಂತದದಲ್ಲಿ ನಮ್ಮ ಪ್ರದೇಶವನ್ನು ಮೀರಿ ಬೆಳೆಯಬೇಕು. ಅರೆಭಾಷೆ ಬೆಳೆಯಬೇಕಾದರೆ ಇದನ್ನು ಮಾತೃಭಾಷೆಯಾಗಿ ಮಾತನಾಡುವ ನಾವೇ ಆಸಕ್ತಿ ವಹಿಸಬೇಕೇ ವಿನಃ ವ್ಯವಹಾರಿಕವಾಗಿ ಮಾತನಾಡುವದ ರಿಂದ ಇದನ್ನು ನಿರೀಕ್ಷಿಸುವದು ಸಾಧ್ಯವಾಗದು ಎಂದು ಕೆ.ಆರ್.ಜಿ ಹೇಳಿದರು.
ಅರೆಭಾಷೆಯ ಹಿಂದಿರುವ ಸಂಸ್ಕøತಿಯ ಉಳಿವು ಕೂಡ ಇಂದಿನ ಅಗತ್ಯ. ನಮ್ಮ ಪ್ರಾದೇಶಿಕ ಆಚರಣಾ ವೈವಿದ್ಯತೆಗಳಲ್ಲಿ ಅನ್ಯ ಸಂಸ್ಕøತಿಯನ್ನು ದೂರ ಇಡಬೇಕು. ನಮ್ಮ ಆಚರಣೆಗಳು ನಮ್ಮದೇ ಆಗಬೇಕು. ದೈವಸ್ಥಾನ, ಭೂತ ಸ್ಥಾನಗಳಲ್ಲಿ ವೈಧಿಕ ಸಂಸ್ಕøತಿಯ ಪ್ರಭಾವ ಧೂಳಿಕರಿಸಬೇಕು. ಇತಿಹಾಸಕ್ಕೆ ಗೌರವ ಕೊಟ್ಟು ಪರಂಪರೆಯಲ್ಲಿ ಉಳಿಸುವ ಕೆಲಸ ಮಾಡಬೇಕು ಎಂದು ಸಮ್ಮೇಳನಾಧ್ಯಕ್ಷರು ಹೇಳಿದರು.
ಅರೆಭಾಷೆಗೆ ಭಾಷಾ ಅಲ್ಪಸಂಖ್ಯಾತರ ಸ್ಥಾನಮಾನ ಸಿಗಬೇಕು. ಮಂಗಳೂರು ವಿಶ್ವ ವಿದ್ಯಾನಿಲಯಗಳು ಅರೆಭಾಷೆ ಅಧ್ಯಯನ ಪೀಠ ಸ್ಥಾಪನೆಯಾಗಬೇಕು. ಸಂವಿಧಾನದ 8ನೇ ಪರಿಚ್ಚೇದಕ್ಕೆ ಸೇರ್ಪಡೆಯಾಗಬೇಕು. ಅರೆಭಾಷೆ ಜನಾಂಗಕ್ಕೆ ಪ್ರತ್ಯೇಕ ಮೀಸಲಾತಿ ದೊರೆಯಲು ಪ್ರಯತ್ನಿಸಬೇಕು ಎಂದು ಕೆ.ಆರ್.ಜಿ. ಪ್ರತಿಪಾದಿಸಿದರು.
ಸೊಗಸು ಸಾರಿದ ಮೆರವಣಿಗೆ
ಸಮ್ಮೇಳನಕ್ಕೆ ಪೂರ್ವಭಾವಿಯಾಗಿ ಸುಮಾರು ನಾಲ್ಕು ಕಿಲೋ ಮೀಟರ್ ದೂರದ ಮೆರವಣಿಗೆ ನಡೆಯಿತು. ಸಮ್ಮೇಳನಾಧ್ಯಕ್ಷರನ್ನು ಮೆರವಣಿಗೆಯಲ್ಲಿ ಕರೆತರಲಾಯಿತು.
ಸುಳ್ಯದ ಅಮರಶ್ರೀಭಾಗ್ ದಿಂದ ಆರಂಭಗೊಂಡ ಮೆರವಣಿಗೆಯಲ್ಲಿ ನೂರಕ್ಕೂ ಅಧಿಕ ದ್ವಿಚಕ್ರ ವಾಹನಗಳು, ಚತುಚಕ್ರ ವಾಹನಗಳು, ಕುದುರೆಗಳು, ಸ್ತಬ್ಧ ಚಿತ್ರಗಳು, ನಾಸಿಕ್ ಬ್ಯಾಂಡ್, ಮೆರವಣಿಗೆಗೆ ಮೆರಗು ನೀಡಿತ್ತು. ಮೆರವಣಿಗೆಗೆ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಕೆ.ವಿ. ರೇಣುಕಾಪ್ರಸಾದ್ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ದಿನೇಶ್ ಮಡಪ್ಪಾಡಿ, ರಾಜ್ಯ ಅರೆಭಾಷೆ ಅಕಾಡೆಮಿ ಅಧ್ಯಕ್ಷ ಪಿ.ಸಿ. ಜಯರಾಮ, ಸಮಿತಿ ಪದಾಧಿಕಾರಿಗಳು ಇದ್ದರು.
ಕಾವ್ಯ-ಗಾನ-ಕುಂಚ
ಸಮ್ಮೇಳನದಲ್ಲಿ ಕಾವ್ಯ - ಗಾನ - ಕುಂಚ ನಡೆಯಿತು. ಕಾವ್ಯ ವಾಚನದಲ್ಲಿ ದಾಮೋದರ ಕುಯಿಂತೋಡು, ಕೊಟ್ಟಕೇರಿಯನ ಲೀಲಾ ದಯಾನಂದ, ಯಶವಂತ ಕುಡೆಕಲ್ಲು, ಸಂಗೀತಾ ರವಿರಾಜ್, ಉದಯ ಭಾಸ್ಕರ್, ಗಾಯನದಲ್ಲಿ ಶಶಿಧರ ಮಾವಿನಕಟ್ಟೆ, ಗಿರಿಜಾ ಎಂ.ವಿ., ಪೂರ್ಣಿಮಾ ಮಡಪ್ಪಾಡಿ, ಮಮತಾ ಪಡ್ಡಂಬೈಲ್, ಕೆ.ಯನ್. ಪುಂಡರೀಕ, ಕುಂಚದಲ್ಲಿ ಪ್ರಸನ್ನ ಐವರ್ನಾಡು, ಶ್ರೀಹರಿ ಪೈಂದೋಡಿ, ವಸಂತ, ಕನ್ನಿಕಾ ಡಿ.ಅಂಬೆಕಲ್ಲು, ಮನ್ವಿತ್ ಯು.ಎಸ್ ಭಾಗವಹಿಸಿದರು. ಅಕಾಡೆಮಿ ಸದಸ್ಯ ಬಾರಿಯಂಡ ಜೋಯಪ್ಪ ಸ್ವಾಗತಿಸಿ, ರೇಣುಕಾ ಸದಾನಂದ ವಂದಿಸಿದರು. ಲೀಲಾ ದಾಮೋದರ ನಿರ್ವಹಿಸಿದರು. ಕಾವ್ಯಗಾನ ಕುಂಚದಲ್ಲಿ 5 ಮಂದಿ ಕವಿಗಳ ಕಾವ್ಯ ವಾಚಿಸಿ, ಅದನ್ನು ಗಾಯಕರು ಹಾಡಿ, ಚಿತ್ರಗಾರರು ಚಿತ್ರವನ್ನು ಬಿಡಿಸಿದರು.
ಸಮಾರೋಪ ಸಾಧಕರಿಗೆ ಸನ್ಮಾನ
ಬಹುತ್ವದ ಮುಖವನ್ನು ಯಾವಾಗ ಆರಾಧಿಸುತ್ತೇವೆಯೋ ಅಂತಹ ಸಂದರ್ಭದಲ್ಲಿ ಸಮಾಜ ಬಲಿಷ್ಠವಾಗುತ್ತದೆ. ಅಂತಹ ಸಮಾಜದಿಂದ ದೇಶವು ಬಲಿಷ್ಠ ಗೊಳ್ಳುತ್ತದೆ ಎಂದು ಸಾಹಿತಿ ವಿಶ್ರಾಂತ ಪ್ರಿನ್ಸಿಪಾಲ್ ಪ್ರೊ. ಕೆ.ಇ. ರಾಧಾಕೃಷ್ಣ ಹೇಳಿದರು. ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಸಮಾರೋಪ ಭಾಷಣ ಮಾಡಿದರು. ಭಾಷೆ ಬೆಳೆಯುವದು ಮಡಿವಂತಿಕೆ ಯಿಂದಲ್ಲ, ಸಹೃದಯತೆಯಿಂದ. ಸಾಹಿತ್ಯವೆಂದರೆ ಸುಡುವ ಸಂಸ್ಕøತಿಯಲ್ಲ, ನೆಡುವ, ಕೊಡುವ, ಕೂಡುವ ಸಂಸ್ಕøತಿ ಎಂದು ರಾಧಾಕೃಷ್ಣ ಹೇಳಿದರು.
ಅಕಾಡೆಮಿ ಅಧ್ಯಕ್ಷ ಪಿ.ಸಿ. ಜಯರಾಮ್ ಅಧ್ಯಕ್ಷತೆ ವಹಿಸಿದ್ದರು. ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾ. ಕೆ.ವಿ. ಚಿದಾನಂದ ಸಾಧಕರನ್ನು ಸನ್ಮಾನಿಸಿದರು. ಮುಖ್ಯ ಅತಿಥಿಗಳಾಗಿ ವೀರಾಜಪೇಟೆ ಕ್ಷೇತ್ರ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಭಾಷೆ ಉಳಿವಿಗೆ ಒತ್ತು ಕೊಡುವ ಅಗತ್ಯತೆ ಇದೆ. ನಾವು ನಮ್ಮ ತನವನ್ನು ಉಳಿಸಿ, ಬೇರೆಯವರಿಗೆ ಗೌರವ ಕೊಡುವ ಸಂಸ್ಕಾರವನ್ನು ಉಳಿಸಿಕೊಳ್ಳಬೇಕಾಗಿದೆ ಎಂದರು.
10 ಮಂದಿಗೆ ಸನ್ಮಾನ: ಸಮಾರಂಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ 10 ಮಂದಿ ಸಾಧಕರಾದ ಸಮಾಜ ಸೇವೆಗಾಗಿ ಪಡ್ಡಂಬೈಲು ವೆಂಕಟ್ರಮಣ ಗೌಡ, ಸಹಕಾರಿ ಸೇವೆಗಾಗಿ ಜಾಕೆ ಮಾಧವ ಗೌಡ, ಆಡಳಿತ ಸೇವೆಗಾಗಿ ಗೊಪಾಲಕೃಷ್ಣ ಕಣ್ಕಲ್, ಕೃಷಿ ಯಲ್ಲಿ ಗಂಗಯ್ಯ ಗೌಡ ಪೂಂಬಾಡಿ, ಕ್ರಿಡೆಯಲ್ಲಿ ಬಾಲಕೃಷ್ಣ ಗೌಡ ಕುದ್ವ, ಸಾಹಿತ್ಯ ಕೃಷಿಗಾಗಿ ದಂಬೆಕೋಡಿ ಸುಶೀಲ ಸುಬ್ರಹ್ಮಣಿ, ಪತ್ರಿಕೋದ್ಯಮದಲ್ಲಿ ಡಾ. ಯು.ಪಿ. ಶಿವಾನಂದ, ಉದ್ಯಮದಲ್ಲಿ ರಾಜೇಶ್ ತೇನನ ಭಾಗಮಂಡಲ, ಶಿಕ್ಷಣ ಸೇವೆಗಾಗಿ ಗಣೇಶ್ ನಾಯರ್ ಸುಬ್ರಮಣ್ಯ, ಸಾಂಸ್ಕøತಿಕ ಕ್ಷೇತ್ರದಲ್ಲಿ ಧನಂಜಯ ಅಮೆಚೂರುರನ್ನು ಸನ್ಮಾನಿಸಲಾಯಿತು. ಎಲಿಮಲೆ ಸರಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಚಂದ್ರಶೇಖರ ಪೇರಾಲು ಅಭಿನಂದನಾ ಭಾಷಣಮಾಡಿದರು.
ವೇದಿಕೆಯಲ್ಲಿ ಅರೆಭಾಷೆ ಸಾಹಿತ್ಯ ಸಮ್ಮೇಳನಾಧ್ಯಕ್ಷ ಕೆ.ಆರ್. ಗಂಗಾಧರ, ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ದಿನೇಶ್ ಮಡಪ್ಪಾಡಿ, ಪ್ರಧಾನ ಕಾರ್ಯದರ್ಶಿ ವೀರಪ್ಪ ಗೌಡ ಕಣ್ಕಲ್, ಕೋಶಾಧಿಕಾರಿ ಎ.ವಿ. ತೀರ್ಥರಾಮ, ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಮೋಹನ್ ರಾಂ ಸುಳ್ಳಿ, ಪ್ರಧಾನ ಕಾರ್ಯದರ್ಶಿ ದೊಡ್ಡಣ್ಣ ಬರೆಮೇಲು, ಕೋಶಾಧಿಕಾರಿ ತೇಜಪ್ರಸಾದ ಅಮಚೂರು, ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಚಂದ್ರಹಾಸ ರೈ, ಅಕಾಡೆಮಿ ಸದಸ್ಯರಾದ ಬಾರಿಯಂಡ ಜೋಯಪ್ಪ, ದಿನೇಶ್ ಹಾಲೆಮಜಲು, ಯತೀಶ್ ಕುಮಾರ್ ಬಾನಡ್ಕ, ಕೆ.ಟಿ. ವಿಶ್ವನಾಥ, ಕಡ್ಲೇರ ತುಳಸಿ ಮೋಹನ್, ಎ.ಕೆ. ಹಿಮಕರ, ದೇವರಾಜ್ ಬೇಕಲ್, ಚಿದಾನಂದ ಬೈಲಾಡಿ, ಸುರೇಶ್ ಎಂ.ಹೆಚ್., ತಿರುಮಲೇಶ್ವರಿ ಮತ್ತಿತರರು ಉಪಸ್ಥಿತರಿದ್ದರು. ಜಯರಾಮ ದೇರಪ್ಪಜ್ಜನಮನೆ ನಿರೂಪಿಸಿದರು.
ಬಳಿಕ ಸಾಂಸ್ಕøತಿಕ ವೈವಿಧ್ಯ, ಅರೆಭಾಷೆ ಸಾಂಸ್ಕøತಿಕ ವೈಭವ ಮತ್ತು ಕುಡೆಕಲ್ ಸಂತೋಷ್ ನಿರ್ದೇಶನದ ಕಲಾಬಳಗ ಮಡಿಕೇರಿ ಇವರಿಂದ ವೀರಚರಿತ್ರೆ ರೂಪಕ ಮೂಡಿಬಂದು ಕಲಾಸಕ್ತರ ಮೆಚ್ಚಿಗೆಗೆ ಪಾತ್ರವಾಯಿತು. ರೂಪಕದಲ್ಲಿನ 20 ಮಂದಿ ಕಲಾವಿದರು ಭಾಗವಹಿಸಿದ್ದರು.