ಕೂಡಿಗೆ, ಮಾ. 8: ಹೆಬ್ಬಾಲೆ ಗ್ರಾಮ ಪಂಚಾಯಿತಿ ಮಾಸಿಕ ಸಭೆ ಗ್ರಾ.ಪಂ. ಅಧ್ಯಕ್ಷೆ ಲತಾ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ತಿಪ್ಪೆಗಳನ್ನು ತೆರವುಗೊಳಿಸುವದರ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.

ಗ್ರಾಮಸ್ಥರು ಮನಬಂದಂತೆ ಪ್ರಮುಖ ರಸ್ತೆಗಳ ಸಮೀಪ ಮತ್ತು ವಾಸದ ಮನೆಗಳ ಹತ್ತಿರ ತಿಪ್ಪೆಗಳನ್ನು ಹಾಕಿರುವದರಿಂದ ಅವುಗಳನ್ನು ತೆರವುಗೊಳಿಸುವಂತೆ ಸೂಚನೆಗಳನ್ನು ನೀಡುವಂತೆ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.

ಈಗಾಗಲೇ ಮಂಜೂರಾಗಿರುವ ಬಸವ ಯೋಜನೆಯ ಮನೆಗಳನ್ನು ಅರ್ಹ ಫಲಾನುಭವಿಗಳಿಗೆ ನೀಡುವದರ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು. ಇದೇ ಸಂದರ್ಭ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಕಾಮಗಾರಿಗಳನ್ನು ಕೈಗೊಳ್ಳುವ ಬಗ್ಗೆ ಚರ್ಚೆ ನಡೆಸಲಾಯಿತು.

14ನೇ ಹಣಕಾಸಿನ ಯೋಜನೆಯಡಿಯಲ್ಲಿ ಗ್ರಾ.ಪಂ. ವ್ಯಾಪ್ತಿಯ 27 ಫಲಾನುಭವಿಗಳಿಗೆ ಸೋಲಾರ್‍ದೀಪಗಳನ್ನು ವಿತರಣೆ ಮಾಡಲಾಯಿತು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಪದ್ಮ ಸೇರಿದಂತೆ ಸರ್ವ ಸದಸ್ಯರುಗಳು ಹಾಜರಿದ್ದರು. ಈ ಸಂದರ್ಭ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಕೇಶ್ ಸಾರ್ವಜನಿಕ ಅಹವಾಲುಗಳನ್ನು ಸಭೆಗೆ ಮಂಡಿಸಿದರು.