ಕೊಡಗಿನ ಬಹುತೇಕ ಸರ್ಕಾರಿ ಕನ್ನಡ ಶಾಲೆಗಳ ಕಟ್ಟಡ ಚಿಂತಾಜನಕ ಸ್ಥಿತಿಯಲ್ಲಿಯೇ ಇವೆ. ಸ್ವಾತಂತ್ರ್ಯ ಪೂರ್ವದಲ್ಲಿ ನಿರ್ಮಾಣವಾದ ಹಲವು ಕನ್ನಡ ಶಾಲೆಗಳಲ್ಲಿಯೇ ಇಂದಿಗೂ ಪಾಠ ಮಾಡುವ ಪರಿಪಾಠ ಮುಂದುವರಿದಿದೆ. ಮಣ್ಣಿನ ಗೋಡೆ, ಮಣ್ಣಿನ ಇಟ್ಟಿಗೆ, ಶಿಥಿಲಾವಸ್ಥೆ ತಲುಪಿರುವ ಮೇಲ್ಛಾವಣಿ, ಹೆಂಚುಗಳು, ಸುಣ್ಣ ಬಣ್ಣ ಕಾಣದ ಗೋಡೆಗಳು, ಕಿತ್ತುಹೋಗಿರುವ ನೆಲ.. ಇತ್ಯಾದಿ ಇತ್ಯಾದಿಗಳನ್ನು ಇಂದಿಗೂ ನೋಡಬಹುದಾಗಿದೆ. ನಂತರ ಜಿಲ್ಲಾ ಪರಿಷತ್, ಜಿಲ್ಲಾ ಪಂಚಾಯತ್ ಮೂಲಕ ನಿರ್ಮಾಣವಾದ ಹಲವಷ್ಟು ಶಾಲಾ ಕೊಠಡಿಗಳು ಕಳಪೆ ಕಾಮಗಾರಿಯಿಂದಾಗಿ ಶಿಥಿಲಾವಸ್ಥೆಗೆ ತಲುಪಿದೆ! ಐಟಿಡಿಪಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಿರ್ಮಾಣಗೊಂಡ ಪರಿಶಿಷ್ಟ ಜಾತಿ-ಪಂಗಡಗಳ ವಿದ್ಯಾರ್ಥಿಗಳಿಗಾಗಿ ನಿರ್ಮಾಣಗೊಂಡ ಏಕಲವ್ಯ ವಸತಿ ಶಾಲೆ, ಮೊರಾರ್ಜಿ ದೇಸಾಯಿ ವಸತಿ ಶಾಲೆ, ಆಶ್ರಮ ಶಾಲೆಗಳ ಅಭಿವೃದ್ಧಿಗೆ ಸರ್ಕಾರವು ಕೋಟಿಗಟ್ಟಲೆ ಅನುದಾನ ಬಿಡುಗಡೆ ಮಾಡಿದ್ದರೂ, ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಕಟ್ಟಡ ಸಂಕೀರ್ಣಕ್ಕೆ ಅನುದಾನ ಬಿಡುಗಡೆ ಮಾಡಿರುವದು ಕಡಿಮೆಯೇ! ಮಾಡಿದ್ದರೂ ಕಳಪೆ ಕಾಮಗಾರಿಯಿಂದಾಗಿ ಸ್ವಾತಂತ್ರ್ಯಪೂರ್ವದ ಮಣ್ಣಿನ ಇಟ್ಟಿಗೆ ಗೋಡೆಗಳಿಗಿಂತಲೂ ಮೊದಲಿಗೆ ಈಚೆಗೆ ನಿರ್ಮಾಣಗೊಂಡ ಶಾಲಾ ಕೊಠಡಿಗಳು ಕುಸಿಯುತ್ತಿರುವದು ಹಲವಷ್ಟು ಶಾಲೆಗಳಲ್ಲಿ ಈಗಲೂ ನೋಡಬಹುದಾಗಿದೆ. ಈ ನಿಟ್ಟಿನಲ್ಲಿ ಅವಲೋಕಿಸಿದಾಗ ಕೊಡಗಿನಲ್ಲಿ ಪ್ರಪ್ರಥಮ ಬಾರಿಗೆ ಬೆಂಗಳೂರಿನ ಕಂಪನಿಯೊಂದು ಮಡಿಕೇರಿಯಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಸುಂದರವಾಗಿ ಕಟ್ಟಿಕೊಟ್ಟಿದೆ. ಈ ಬಗ್ಗೆ ಬೆಳಕು ಚೆಲ್ಲುವ ಯತ್ನವನ್ನು ‘ಶಕ್ತಿ’ ಇಲ್ಲಿ ಮಾಡಿದೆ.
ಮಡಿಕೇರಿಯ ಸೆಂಟ್ರಲ್ ಶಾಲೆಯ ಇತಿಹಾಸವೇ ರೋಚಕ : ಕವಿ ಪಂಜೆ ಮಂಗೇಶರಾವ್‍ರವರು 1924 ರಿಂದ 1927 ರವರೆಗೆ ಇಲ್ಲಿ ಮುಖ್ಯೋಪಾಧ್ಯಾಯರಾಗಿ ಕಾರ್ಯನಿರ್ವಹಿಸಿದ್ದರು. 1855 ರಿಂದ ರೆವರೆಂಡ್ ಎಚ್. ಮೂಗ್ಲಿಂಗ್ ಮುಖ್ಯೋಪಾಧ್ಯಾಯರಾಗುವ ಮೂಲಕ 1924 ರವರೆಗೆ ಮುಖ್ಯ ಶಿಕ್ಷಕರಾಗಿದ್ದ ಡಬ್ಲ್ಯು.ಬಿ. ಬ್ರಿಯರ್ಲಿವರೆಗೆ ಸುಮಾರು 18 ಮಂದಿ ಬ್ರಿಟೀಷರೇ ಮುಖ್ಯೋಪಾಧ್ಯಾಯರಾಗಿ ಕಾರ್ಯನಿರ್ವಹಿಸಿರುವದು ಸೆಂಟ್ರಲ್ ಶಾಲೆಯ ವಿಶೇಷ.
ಖ್ಯಾತ ಬರಹಗಾರರು, ಅಕಾಡೆಮಿ ಅಧ್ಯಕ್ಷರುಗಳು, ರಾಜಕಾರಣಿಗಳು, ಹಲವು ಯೋಧರು, ಉದ್ಯಮಿಗಳು, ಪತ್ರಕರ್ತರು, ಗೌರವಾನ್ವಿತ ಹುದ್ದೆ ಯಲ್ಲಿರುವ ಅಧಿಕಾರಿಗಳು, ಸ್ವಾತಂತ್ರ್ಯ ಹೋರಾಟಗಾರರು ಈ ಕನ್ನಡ ಶಾಲೆಯ ವಿದ್ಯಾರ್ಥಿಗಳಾಗಿ ದ್ದರು ಎಂದು ಚುಟುಕಾಗಿ ಹೇಳಬೇಕಾಗು ತ್ತದೆ. 1855ನೇ ಇಸವಿಯಲ್ಲಿ ಆರಂಭಗೊಂಡ ಮಡಿಕೇರಿ ‘ಸೆಂಟ್ರಲ್ ಶಾಲೆ’ಬರೋಬ್ಬರಿ 164 ವರ್ಷಗಳನ್ನು ಪೂರೈಸಿದೆ. ಇದೀಗ ಸರ್ಕಾರದ ಅಧೀನದಲ್ಲಿರುವ ಸರ್ವೆ ನಂ.308/1 ರಲ್ಲಿ ಸುಮಾರು 7.37 ಎಕರೆ ಜಾಗದಲ್ಲಿ ಸರ್ಕಾರಿ ಪ.ಪೂ.ಕಾಲೇಜು, ಸರ್ಕಾರಿ ಪ್ರೌಢಶಾಲೆ, ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆ, ಬಿ.ಎ., ಬಿ.ಕಾಂ. ಪದವಿ ಕಾಲೇಜು ಒಳಗೊಂಡಂತೆ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಇಂದಿಗೂ ಜ್ಞಾನಾರ್ಜನೆ ಮಾಡುತ್ತಿರುವದು ಈ ‘ಸೆಂಟ್ರಲ್ ಸ್ಕೂಲ್’ ಹೆಗ್ಗಳಿಕೆ. ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯೂ ಇದೇ ಜಾಗದಲ್ಲಿದೆ. ಒಟ್ಟಿನಲ್ಲಿ ‘ಮ್ಯಾನ್ಸ್ ಕಾಂಪೌಂಡ್’ ಆಸ್ತಿ ಪಾಸ್ತಿ’ ಇದೇ ಶಾಲೆಗೆ ಸೇರಿದ ಸರ್ಕಾರಿ ಆಸ್ತಿಯಾಗಿದೆ. 1957 ರಲ್ಲಿ ಸೆಂಟ್ರಲ್ ಶಾಲೆಯ ಆಡಳಿತದಲ್ಲಿದ್ದ ಪ್ರಾಥಮಿಕ ಶಾಲೆ ಪ್ರತ್ಯೇಕ ಅಸ್ತಿತ್ವದೊಂದಿಗೆ ಸರ್ಕಾರಿ ಪ್ರಾಥಮಿಕ ಶಾಲೆಯಾಗಿ ಪರಿವರ್ತನೆಯಾಗಿದ್ದು, ಇದೀಗ ‘ಉನ್ನತೀಕರಿಸಿದ ಕನ್ನಡ ಮಾಧ್ಯಮ ಮಾದರಿ ಪ್ರಾಥಮಿಕ ಶಾಲೆ’ಯಾಗಿ ಮೇಲ್ದರ್ಜೆಗೆ ಏರಿಸಲಾಗಿದೆ.
ಒಂದನೇ ತರಗತಿಯಿಂದ ಎಂಟನೇ ತರಗತಿವರೆಗೆ ಸುಮಾರು 256 ವಿದ್ಯಾರ್ಥಿಗಳು ಪ್ರಸ್ತುತ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದು, ಬ್ರಿಟೀಷರ ಕಾಲದ 10 ಕೊಠಡಿಗಳಲ್ಲಿ ಶಿಕ್ಷಣ ನೀಡಲಾಗುತ್ತಿತ್ತು. ಇದೀಗ 6ನೇ ತರಗತಿಯಿಂದ ಆಂಗ್ಲ ಮಾಧ್ಯಮ ಶಾಲೆಯನ್ನೂ ಆರಂಭಿಸಿರುವದು ಹೆಗ್ಗಳಿಕೆ. ಮುಖ್ಯಶಿಕ್ಷಕರಾದ ಬಿ.ಶಿವರಾಮ್, ಚಿತ್ರಕಲಾ ಶಿಕ್ಷಕರು, ದೈಹಿಕ ಶಿಕ್ಷಕರು, ಇಬ್ಬರು ಅತಿಥಿ ಶಿಕ್ಷಕರು ಒಳಗೊಂಡಂತೆ ಒಟ್ಟು 8 ಶಿಕ್ಷಕರು ಇದೀಗ ಕಾರ್ಯನಿರ್ವಹಿಸುತ್ತಿದ್ದು, ಇನ್ನೂ 3 ಶಿಕ್ಷಕರ ಹುದ್ದೆ ಖಾಲಿ ಇದೆ ಎನ್ನಲಾಗಿದೆ.
ಜಿಲ್ಲಾಧಿಕಾರಿ ಡಿಸೋಜಾ ಪ್ರಯತ್ನ : ಇತ್ತೀಚೆಗೆ ವರ್ಗಾವಣೆಗೊಂಡಿದ್ದ ಜಿಲ್ಲಾಧಿಕಾರಿ ರಿಚರ್ಡ್‍ವಿನ್ಸೆಂಟ್ ಡಿಸೋಜಾ ಅವರ ವಿಶೇಷ ಪ್ರಯತ್ನದಿಂದಾಗಿ ಮಡಿಕೇರಿ ಸರ್ಕಾರಿ ಕನ್ನಡ ಶಾಲೆ ರೂ.2.50ಕೋಟಿ ವೆಚ್ಚದಲ್ಲಿ ಪುನರ್‍ನಿರ್ಮಾಣಗೊಳ್ಳಲು ಕಾರಣವಾಗಿದೆ ಎನ್ನಲಾಗುತ್ತಿದೆ. ಸರ್ಕಾರಿ ಅನುದಾನವಿಲ್ಲದೆ ಕಂಪೆನಿಯೊಂದರ ವಿಶೇಷ ಅನುದಾನ, ಕಾಳಜಿಯೊಂದಿಗೆ ನಿರ್ಮಾಣವಾದ ಜಿಲ್ಲೆಯ ಪ್ರಪ್ರಥಮ ಸರ್ಕಾರಿ ಕನ್ನಡ ಶಾಲೆ ಇದಾಗಿದೆ. ಜನರಲ್ ತಿಮ್ಮಯ್ಯ ಮೈದಾನವೇ ಈ ಶಾಲೆಯ ಆಟದ ಮೈದಾನ. ಸುಮಾರು 12 ನೂತನ, ಸುಸಜ್ಜಿತ ಶಾಲಾ ಕೊಠಡಿ ನಿರ್ಮಾಣವಾಗಿದ್ದು ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗಾಗಿ ‘ಹೈಟೆಕ್’ ಶೌಚಾಲಯ ನಿರ್ಮಾಣವಾಗಿದೆ. ಆಧುನಿಕ ಪಾಕಶಾಲೆ, ದಾಸ್ತಾನು ಕೊಠಡಿ, ಕ್ರೀಡಾ ಸಾಮಗ್ರಿ ದಾಸ್ತಾನು ಕೊಠಡಿ, ಪ್ರಯೋಗಾಲಯ ಕೊಠಡಿ, ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರ ಕೊಠಡಿಯನ್ನು ವ್ಯವಸ್ಥೆ ಮಾಡಿಕೊಳ್ಳಲು ಅನುಕೂಲಕರವಾಗಿ ನಿರ್ಮಾಣ ಮಾಡಲಾಗಿದೆ. ಸುಮಾರು ರೂ. 2.25 ಕೋಟಿ ವೆಚ್ಚದಲ್ಲಿ ಶಾಲಾ ಕಟ್ಟಡ ಸಮುಚ್ಚಯ ನಿರ್ಮಿಸಲಾಗಿದೆ. ರೂ. 25 ಲಕ್ಷ ವೆಚ್ಚದಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಅಗತ್ಯವಾದ ಗುಣಮಟ್ಟದ ಪೀಠೋಪಕರಣಗಳನ್ನೂ ಬೆಂಗಳೂರು ಭಾರತ್ ಎಲೆಕ್ಟಾನಿಕ್ಸ್ ಕಂಪೆನಿ ಒದಗಿಸಿರುವದು ಗಮನಾರ್ಹ.
ಬಿಇಎಲ್ ಕಂಪೆನಿಯ ಕಾರ್ಯಪಾಲಕ ಅಭಿಯಂತರ ಗರ್ಗ್ ಅವರ ಉಸ್ತುವಾರಿಯಲ್ಲಿ ಕಾರ್ಕಳದ ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿಯನ್ನು 2016 ನೇ ಡಿಸೆಂಬರ್ ತಿಂಗಳಿನಲ್ಲಿ ಆರಂಭಿಸಿ ಇದೀಗ ಮುಕ್ತಾಯದ ಹಂತ ತಲುಪಿದೆ. ಒಂದಷ್ಟು ‘ಪೈಟಿಂಗ್’ ಕೆಲಸ, ಪಾಕ ಶಾಲೆಯ ಕೆಲವು ಕಾಮಗಾರಿ ಬಾಕಿ ಇದೆ. ಶಾಲೆಗೆ ಉತ್ತಮ ನೀರುಣಿಸುವ ಕೊಳವೆ ಬಾವಿ ವ್ಯವಸ್ಥೆ ಹಾಗೂ 3 ಫೇಸ್ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ.
ನೂತನ ಕೊಠಡಿಗಳಲ್ಲಿ ನೆರೆಸಂತ್ರಸ್ತರ ಪರಿಹಾರ ಸಾಮಗ್ರಿ ದಾಸ್ತಾನು : ಕೊಡಗು ಜಲಪ್ರಳಯದ ಹಿನ್ನೆಲೆ ಇದೀಗ ವರ್ಗಾವಣೆಗೊಂಡಿರುವ ಜಿಲ್ಲಾಧಿಕಾರಿ ಶ್ರೀವಿದ್ಯಾ ಅವರು ಸಾಗರೋಪಾದಿಯಲ್ಲಿ ಹರಿದು ಬಂದಿದ್ದ ನೆರೆಸಂತ್ರಸ್ತರ ಪರಿಹಾರ ಸಾಮಗ್ರಿಗಳನ್ನು ಸದರಿ ಶಾಲಾ ಕಟ್ಟಡದ ನೂತನ ಕೊಠಡಿಗಳಲ್ಲಿ ದಾಸ್ತಾನಿರಿಸಿದ್ದರು. ಇದೀಗ ಕೊಠಡಿಗಳನ್ನು ತೆರವು ಮಾಡಬೇಕಾಗಿದ್ದು, ಈ ಕುರಿತು ನೂತನ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರನ್ನು ‘ಶಕ್ತಿ’ ಪರವಾಗಿ ಮಾಹಿತಿ ಬಯಸಿದಾಗ ಇನ್ನೆರಡು ವಾರಗಳಲ್ಲಿ ಪರಿಹಾರ ಸಾಮಗ್ರಿಗಳನ್ನು ಬೇರೆಡೆಗೆ ವರ್ಗಾಯಿಸಲಾಗುವದು ಎಂದರು. ಬೆಂಗಳೂರು ಬಿಇಎಲ್ ಸಂಸ್ಥೆಯು ನೂತನ ಕಟ್ಟಡವನ್ನು ಜಿಲ್ಲಾಧಿಕಾರಿಗಳಿಗೆ ಶೀಘ್ರದಲ್ಲಿಯೇ ಹಸ್ತಾಂತರಿಸಲಿದ್ದು, ಶಾಲಾ ಆವರಣ ದಲ್ಲಿಯೇ ಹಸ್ತಾಂತರ ಕಾರ್ಯಕ್ರಮವನ್ನು ಶಾಲಾ ಆಡಳಿತ ಮಂಡಳಿ ಹಮ್ಮಿಕೊಳ್ಳಲಿದೆ ಎಂದು ಮುಖ್ಯೋಪಾಧ್ಯಾಯ ಬಿ. ಶಿವರಾಮ್ ತಿಳಿಸಿದ್ದಾರೆ.
ನೂತನ ಶಾಲಾ ಕಾಮಗಾರಿಯಲ್ಲಿ ಮಧ್ಯಾಹ್ನದ ಬಿಸಿ ಊಟ ಪ್ರಕ್ರಿಯೆಯ ಭೋಜನಾಲಯ ಅಡಕಗೊಂಡಿಲ್ಲ. ಇದನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಅಥವಾ ಜಿಲ್ಲಾಡಳಿತ ಪೂರಕ ಸ್ಪಂದನೆಯೊಂದಿಗೆ ಕಟ್ಟಿಕೊಡಲು ಅವಕಾಶವಿದೆ. ಇನ್ನೂ ಕೆಲವೊಂದು ಅಗತ್ಯ ಕಾಮಗಾರಿ ಆಗಬೇಕಾಗಿದೆ. ಉದ್ದೇಶಿತ ಶಾಲೆಯ ಅಡಿಪಾಯ ಭದ್ರವಾಗಿದ್ದು ಇನ್ನೂ ಎರಡಂತಸ್ತಿನ ಕಟ್ಟಡ ಕಟ್ಟಲು ಅವಕಾಶವಿದೆ. ಶಾಲೆಗೆ ಸೂಕ್ತ ಸಭಾಂಗಣದ ಅವಶ್ಯಕತೆಯೂ ಕಂಡುಬಂದಿದೆ. ಒಟ್ಟಿನಲ್ಲಿ ಜಿಲ್ಲೆಯಲ್ಲಿಯೇ ಪ್ರಪ್ರಥಮ ರೂ.2.50 ಕೋಟಿ ವೆಚ್ಚದ ಸುಂದರ ಕನ್ನಡ ಪ್ರಾಥಮಿಕ ಶಾಲಾ ಕಟ್ಟಡ ಸಮುಚ್ಛಯವನ್ನು ಕಣ್ತುಂಬಿಕೊಳ್ಳಬಹುದಾಗಿದೆ.
?ಟಿ. ಎಲ್. ಶ್ರೀನಿವಾಸ್
ಗೋಣಿಕೊಪ್ಪಲು.