ಮಡಿಕೇರಿ, ಮಾ. 28: ಫೆಡರೇಷನ್ ಆಫ್ ಕೊಡವ ಸಮಾಜದ ಪೊಮ್ಮಕ್ಕಡ ಕೂಟದ ವಾರ್ಷಿಕ ಮಹಾಸಭೆ ಏ. 30 ರಂದು ನಡೆಯಲಿದ್ದು, ಇದಕ್ಕೆ ಪೂರ್ವಭಾವಿಯಾಗಿ ಸಮಾಲೋಚನಾ ಸಭೆ ಬಾಳುಗೋಡುವಿನ ಕೊಡವ ಸಮಾಜದಲ್ಲಿ ನಡೆಯಿತು. ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಕೊಡವ ಸಮಾಜಗಳ ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ, ಪೊಮ್ಮಕ್ಕಡ ಕೂಟದ ಕಾರ್ಯಕ್ರಮಗಳಿಗೆ ಅಗತ್ಯ ಸಹಕಾರ ನೀಡುವದಾಗಿ ತಿಳಿಸಿದರು. ವಾರ್ಷಿಕ ಆಯವ್ಯಯದ ಬಗ್ಗೆ ಚರ್ಚಿಸಿದ ಅವರು ಅಗತ್ಯ ಸಲಹೆ, ಸೂಚನೆಗಳನ್ನು ನೀಡಿದರು. ಪ್ರತಿವರ್ಷ ಕೂಟ ನಡೆಸಿಕೊಂಡು ಬರುತ್ತಿರುವ ವಿಭಿನ್ನ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಚೆರಿಯಪಂಡ ಇಮ್ಮಿ ಉತ್ತಪ್ಪ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಗೌರವ ಕಾರ್ಯದರ್ಶಿ ವಾಟೇರಿರ ಶಂಕರಿ ಪೂವಯ್ಯ, ಖಜಾಂಚಿ ಕಳ್ಳಿಚಂಡ ಶಾಲಿನಿ ಕಾರ್ಯಪ್ಪ, ಕಾರ್ಯದರ್ಶಿ ಬೊಪ್ಪಂಡ ಬೊಳ್ಳಮ್ಮ ನಾಣಯ್ಯ, ಸಹಕಾರ್ಯದರ್ಶಿ ಸಣ್ಣುವಂಡ ಅನಿತಾ ಕಾವೇರಪ್ಪ ಹಾಗೂ ಒಕ್ಕೂಟದ ನಿರ್ದೇಶಕಿಯರು ಸಭೆಯಲ್ಲಿ ಉಪಸ್ಥಿತರಿದ್ದರು.