ಮಡಿಕೇರಿ, ಮಾ. 29: ಭಾರತ ಚುನಾವಣಾ ಆಯೋಗ, ಮತದಾರರ ವ್ಯವಸ್ಥಿತ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿ (ಸ್ವೀಪ್) ವತಿಯಿಂದ ಮತದಾನದ ಮಹತ್ವ ಕುರಿತು ಬೀದಿ ನಾಟಕ ಕಾರ್ಯಕ್ರಮಕ್ಕೆ ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಜಿ.ಪಂ. ಸಿಇಒ ಕೆ. ಲಕ್ಷ್ಮಿಪ್ರಿಯಾ ನಗಾರಿ ಬಾರಿಸುವ ಮೂಲಕ ಚಾಲನೆ ನೀಡಿದರು.

ನಗರದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಆವರಣದಲ್ಲಿ ಮತದಾನ ಜಾಗೃತಿ ಕುರಿತು ನಡೆದ ಬೀದಿ ನಾಟಕಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮತದಾರರ ಗುರುತಿನ ಚೀಟಿ ಪಡೆದ ಪ್ರತಿಯೊಬ್ಬರೂ ತಪ್ಪದೇ ಮತ ಚಲಾಯಿಸಿ ಪ್ರಜಾಪ್ರಭುತ್ವ ಬಲಪಡಿಸಲು ಕೋರಿದರು.

ಚುನಾವಣಾ ಆಯೋಗ ಮತದಾರರ ವ್ಯವಸ್ಥಿತ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿ ವತಿಯಿಂದ ಶೇಕಡವಾರು ಮತದಾನ ಹೆಚ್ಚಳ ಮಾಡುವ ನಿಟ್ಟಿನಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಆಯೋಜಿಸಿದೆ ಎಂದು ತಿಳಿಸಿದರು.

ವಾರ್ತಾಧಿಕಾರಿ ಚಿನ್ನಸ್ವಾಮಿ ಮಾತನಾಡಿ, ಜಿಲ್ಲೆಯ ಮೂರು ತಾಲೂಕಿನ ವಿವಿಧ ಗ್ರಾಮಗಳಲ್ಲಿ 15 ದಿನಗಳ ಕಾಲ ಲೋಕಸಭಾ ಚುನಾವಣೆ ಸಂಬಂಧ ಮತದಾರರಲ್ಲಿ ಮತದಾನದ ಮಹತ್ವ ಕುರಿತು ಬೀದಿ ನಾಟಕ ಕಾರ್ಯಕ್ರಮ ನಡೆಯಲಿದೆ ಎಂದರು.

ಮತಗಟ್ಟೆಗೆ ತೆರಳಿ ತಪ್ಪದೆ ಮತ ಚಲಾಯಿಸಿ, ರಜೆ ಇದೆ ಎಂದು ಪ್ರವಾಸಕ್ಕೆ ತೆರಳಬೇಡಿ, ಶೇಕಡವಾರು ಮತದಾನವಾಗಲು ಅರ್ಹರೆಲ್ಲರೂ ಮತ ಚಲಾಯಿಸುವಂತಾಗಬೇಕು ಎಂಬ ಸಂದೇಶವನ್ನು ಬೀದಿ ನಾಟಕದಲ್ಲಿ ಸಾರಲಾಯಿತು.