ವೀರಾಜಪೇಟೆ, ಮಾ. 29: “ಸೇನೆಯು ಶತ್ರುಗಳ ವಿರುದ್ಧ ಹೋರಾಡುವದು ಮಾತ್ರವಲ್ಲ, ರಾಷ್ಟ್ರಗಳಲ್ಲಿ ಶಾಂತಿಯನ್ನು ಸ್ಥಾಪಿಸುವ ಕೆಲಸವನ್ನೂ ಮಾಡುತ್ತದೆ ಎಂದು ಪತ್ರಿಕಾ ಅಂಕಣಕಾರ ಮಾಣಿಯಪಂಡ ಸಂತೋಷ್ ತಮ್ಮಯ್ಯ ಹೇಳಿದ್ದಾರೆ. ಕಾವೇರಿ ಕಾಲೇಜಿನ ಆಂತರಿಕ ಗುಣಮಟ್ಟ ನಿರ್ವಹಣಾ ಸಮಿತಿಯು ಏರ್ಪಡಿಸಿದ್ದ ಕಾರ್ಯಕ್ರಮ ವೊಂದರಲ್ಲಿ “ಕೊಡಗಿನ ಯೋಧರು-ಒಂದು ಚಿಂತನೆ” ಎಂಬ ವಿಷಯದಲ್ಲಿ ಸಂತೋಷ್ ತಮ್ಮಯ್ಯ ಮಾತನಾಡುತ್ತಾ ವಿಶ್ವ ರಾಷ್ಟ್ರಗಳಲ್ಲಿ ಶಾಂತಿ ನೆಲೆಸಲು ಭಾರತೀಯ ಸೇನೆಯು ಮಹತ್ತರ ಕೊಡುಗೆಗಳನ್ನು ನೀಡಿದೆ. ಸೇನೆಯಲ್ಲಿರುವವರು ದೇಶ ರಕ್ಷಣೆಯನ್ನು ತಪಸ್ಸಾಗಿ ಸ್ವೀಕರಿಸಿ ತಮ್ಮ ಬದುಕನ್ನು ಬದಿಗೊತ್ತುವದರ ಮೂಲಕ ಇತರರ ಬದುಕನ್ನು ಸಂರಕ್ಷಿಸುತ್ತಾರೆ. ದೇಶವನ್ನು ಪ್ರೀತಿಸುವದು ಎಂದರೆ ಸೇನೆಯನ್ನು ಪ್ರೀತಿಸುವದು ಎಂದು ಅರ್ಥ. ಯೋಧರು ಭೂಮಿಯ ಪುತ್ರರು ಎಂಬ ಅರ್ಥದಲ್ಲಿ ಕೊಡಗಿನ ಜನತೆ ಹೆಮ್ಮೆ ಪಡಬೇಕು. ಯುವಕರು ಸೇನೆಗೆ ಸೇರುವದರೊಂದಿಗೆ ದೇಶವನ್ನು ಪ್ರೀತಿಸಬೇಕು. ವರ್ಷಗಳ ಇತಿಹಾಸವಿರುವ ಭಾರತೀಯ ಸೇನೆ ತ್ಯಾಗ, ಸಮರ್ಪಣೆ ಮತ್ತು ಬಲಿದಾನದ ಪರ್ಯಾಯ ಶಬ್ಧವಾಗಿದೆ. ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಗೆ ಚ್ಯುತಿಬಾರದೆ ಉಳಿದಿರುವದಕ್ಕೆ ಸೇನೆಯ ಕೊಡುಗೆ ಬಹಳಷ್ಟಿದೆ. ಈ ಅರ್ಥದಲ್ಲಿ ನಾವು ಸೇನೆಯನ್ನು ಗೌರವಿಸಬೇಕು. ಸೇನೆಯ ಸಾಧನೆಯೆಂಬುದು ಸರಕಾರದ ಸಾಧನೆಯಲ್ಲ. ಬದಲಾಗಿ ಅದು ದೇಶದ ಸಾಧನೆ. ವಿಶ್ವ ಶಾಂತಿಯೇ ಗರಿಷ್ಠ ಧ್ಯೇಯವನ್ನಾ ಗಿಟ್ಟುಕೊಂಡಿರುವ ಭಾರತೀಯ ಸೇನೆಯು ರಣೋತ್ಸಾಹಿಯೂ ಅಲ್ಲ ಹೇಡಿಯೂ ಅಲ್ಲ ಎಂದರು. ಕಾವೇರಿ ಕಾಲೇಜು ಪ್ರಾಂಶುಪಾಲೆ ಇಟ್ಟಿರ ಕಮಲಾಕ್ಷಿ ಬಿದ್ದಪ್ಪ ವೇದಿಕೆಯಲ್ಲಿದ್ದರು.