ಮಡಿಕೇರಿ, ಮಾ. 29: ಏಪ್ರಿಲ್ 4ರಂದು ನಡೆಯಲಿರುವ ಚುನಾವಣೆಯಲ್ಲಿ ಕೊಡಗಿನ ಪ್ರತಿಷ್ಠಿತ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಆಡಳಿತ ಮಂಡಳಿಯ 13 ಸ್ಥಾನಗಳಿಗೆ 22 ಮಂದಿ ಸ್ಪರ್ಧಾ ಕಣದಲ್ಲಿದ್ದು, ಬಿಜೆಪಿ ಬೆಂಬಲಿಗರಿಗೆ ಬಂಡಾಯದ ಬಿಸಿ ಕಾಡುವಂತಾಗಿದೆ.
ಈ ಪಕ್ಷ ಬೆಂಬಲದೊಂದಿಗೆ ಹಾಲೀ ಆಡಳಿತ ಮಂಡಳಿಯ ಅಧ್ಯಕ್ಷ ಬಿ.ಡಿ. ಮಂಜುನಾಥ್, ಉಪಾಧ್ಯಕ್ಷ ಕೆ.ಎಸ್. ಹರೀಶ್ ಪೂವಯ್ಯ ಸೇರಿದಂತೆ ಮಡಿಕೇರಿ ತಾಲೂಕಿನಿಂದ ತಳೂರು ಎ. ಕಿಶೋರ್‍ಕುಮಾರ್, ಕೋಡಿರ ಪ್ರಸನ್ನ ತಮ್ಮಯ್ಯ ಸ್ಪರ್ಧೆಯಲ್ಲಿದ್ದಾರೆ. ಇಲ್ಲಿ ಮುದ್ದಂಡ ಬಿ. ದೇವಯ್ಯ ಹಾಗೂ ಕಿಮ್ಮುಡಿರ ಎ. ಜಗದೀಶ್ ಬಂಡಾಯವಾಗಿ ಕಣದಲ್ಲಿದ್ದಾರೆ.
ಇನ್ನು ಮೈತ್ತಿ ಬಣದಿಂದ ಕೊಕ್ಕಲೆರ ಬಿ. ತಿಮ್ಮಯ್ಯ ಹಾಗೂ ಹೊಸೂರು ಜೆ. ಸತೀಶ್‍ಕುಮಾರ್ ಸ್ಪರ್ಧೆಯಲ್ಲಿದ್ದಾರೆ.
ವೀರಾಜಪೇಟೆ ತಾಲೂಕಿನಿಂದ ಬಿಜೆಪಿ ಬೆಂಬಲಿತರಾಗಿ ಪಟ್ರಪಂಡ ರಘು ನಾಣಯ್ಯ, ಕೊಡಂದೇರ ಬಾಂಡ್ ಗಣಪತಿ, ಹೊಟ್ಟೆಂಗಡ ರಮೇಶ್ ಸ್ಪರ್ದೆಯಲ್ಲಿದ್ದು, ಮಾತಂಡ ಸಿ. ಸೋಮಯ್ಯ ಪ್ರತಿಸ್ಪರ್ಧೆಯಲ್ಲಿದ್ದಾರೆ.
ಸೋಮವಾರಪೇಟೆ ತಾಲೂಕಿನಿಂದ ಹಾಲೀ ಅಧ್ಯಕ್ಷರ ಸಹಿತ ಎಸ್.ಬಿ. ಭರತ್‍ಕುಮಾರ್, ಬಲ್ಲಾರಂಡ ಮಣಿ ಉತ್ತಪ್ಪ ಕಣದಲ್ಲಿದ್ದಾರೆ. ಎದುರಾಳಿ ಬಿ.ಕೆ. ಚಿಣ್ಣಪ್ಪ ಸ್ಪರ್ಧೆಯೊಡ್ಡಿದ್ದಾರೆ.
ಜಿಲ್ಲಾ ಸಹಕಾರ ದವಸ ಭಂಡಾರಗಳ ಪ್ರತಿನಿಧಿಯಾಗಿ ಕೆ.ಎಂ. ಸುಬ್ರಮಣಿ ಅವಿರೋಧ ಆಯ್ಕೆಯೊಂದಿಗೆ, ಜಿಲ್ಲಾ ಪಟ್ಟಣ ಬ್ಯಾಂಕ್‍ಗಳ ಪ್ರತಿನಿಧಿಯಾಗಿ ಕನ್ನಂಡ ಎ. ಸಂಪತ್ ಹಾಗೂ ಟಿ.ಆರ್. ಶರವಣಕುಮಾರ್ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಅಂತೆಯೇ ಮಹಿಳಾ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಉಷಾ ತೇಜಸ್ವಿ ಹಾಗೂ ಬಂಡಾಯವಾಗಿ ಲೀಲಾ ಮೇದಪ್ಪ ನಡುವೆ ಹಣಾಹಣಿ ಏರ್ಪಟ್ಟಿದೆ.
ಇತ್ತ ಜಿಲ್ಲೆಯ ಇನ್ನಿತರ ಸಹಕಾರ ಸಂಘಗಳ ಕ್ಷೇತ್ರದ ಒಂದು ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ಕೆ.ಎಂ. ಸೋಮಯ್ಯ ಎದುರು ಅದೇ ಪಕ್ಷದ ಪ್ರಮುಖ ಎ.ಕೆ. ಮನುಮುತ್ತಪ್ಪ ಕಣದಲ್ಲಿದ್ದು, ಅಚ್ಚರಿ ಮೂಡಿಸಿದ್ದಾರೆ.