ಗೋಣಿಕೊಪ್ಪಲು, ಮಾ. 29: ಮಾಕುಟ್ಟ ಸಮೀಪ ಮುಖ್ಯರಸ್ತೆಗೆ ಇಂದು ಅಪರಾಹ್ನ ಭಾರೀ ಗಾತ್ರದ ಮರವೊಂದು ಬಿದ್ದ ಪರಿಣಾಮ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತು.
ಮಾಕುಟ್ಟ ಪೊಲೀಸ್ ಚೆಕ್ ಪೋಸ್ಟ್ ನಿಂದ ವೀರಾಜಪೇಟೆ ಮಾರ್ಗ ಸುಮಾರು 1 ಕಿ.ಮೀ.ಅಂತರದಲ್ಲಿ ಅಪರಾಹ್ನ 4.30 ಗಂಟೆ ವೇಳೆಗೆ ಬಲಭಾಗದ ಗುಡ್ಡದ ಮೇಲಿದ್ದ ಬಳಂಜಿ ಮರ ದಿಢೀರನೆ ರಸ್ತೆಗೆ ಅಡ್ಡಲಾಗಿ ಬಿದ್ದ ಪರಿಣಾಮ ಕೊಡಗು ಕೇರಳ ರಸ್ತೆ ಸಂಚಾರ ಸ್ಥಗಿತಗೊಂಡಿತು. ವಿಷಯ ತಿಳಿದು ಬ್ರಹ್ಮಗಿರಿ ವನ್ಯಜೀವಿ ವಿಭಾಗದ ಅರಣ್ಯ ಸಿಬ್ಬಂದಿಗಳು ಮರಕೊಯ್ಯುವ ಯಂತ್ರವನ್ನು ತಂದು ರಸ್ತೆಗೆ ಬಿದ್ದ ಮರವನ್ನು ತೆರವು ಮಾಡಲು ಸಹಕರಿಸಿದರು.
ವೀರಾಜಪೇಟೆ - ಕೇರಳ ಸಂಪರ್ಕ ರಸ್ತೆಯಲ್ಲಿ ಅತ್ಯಧಿಕ ವಾಹನಗಳ ಸಂಚಾರವಿದ್ದರೂ ಮರ ಬೀಳುವ ಸಂದರ್ಭ ಯಾವದೇ ವಾಹನ ಸಿಲುಕದೆ ಅಪಾಯದಿಂದ ಪಾರಾಗಿರುವದು ನಿಟ್ಟುಸಿರುಬಿಡುವಂತಾಗಿದೆ.
ಫ್ಲೈವುಡ್‍ಗೆ ಅಧಿಕವಾಗಿ ಬಳಸುವ ಬಳಂಜಿ ಮರದ ಬುಡದ ಮೇಲ್ಭಾಗ ಟೊಳ್ಳಾದ ಹಿನ್ನೆಲೆ ಇಂದು ಯಾವದೇ ಗಾಳಿ ಮಳೆ ಇಲ್ಲದಿದ್ದರೂ ಮುರಿದು ಬೀಳಲು ಕಾರಣವಾಗಿದೆ.
10 ಕ್ಕೂ ಅಧಿಕ ಸರ್ಕಾರಿ ಹಾಗೂ ಖಾಸಗಿ ಬಸ್ಸುಗಳು, ನೂರಾರು ಚತುಷ್ಚಕ್ರ ವಾಹನಗಳು ಮರ ತೆರವುಗೊಳ್ಳುವವರೆಗೆ ಕಾಯಬೇಕಾಯಿತು.
ಮಾಕುಟ್ಟ ಪೊಲೀಸರು ಅರಣ್ಯ, ಪ್ರಯಾಣಿಕರು ಮರವನ್ನು ತೆರವುಗೊಳಿಸುವಲ್ಲಿ ಸಹಕರಿಸಿದರು.