ಗೋಣಿಕೊಪ್ಪ ವರದಿ, ಮಾ. 29 : ಮಾಯಮುಡಿ ಗ್ರಾಮದಲ್ಲಿ ತೋಟದಿಂದ ಮತ್ತೊಂದು ತೋಟಕ್ಕೆ ನುಗ್ಗಿ ಮರೆಯಾಗಲು ಯತ್ನಿಸುತ್ತಿದ್ದ ಹೆಬ್ಬಾವನ್ನು ಉರಗ ಪ್ರೇಮಿಗಳು ರಕ್ಷಿಸಿದ್ದಾರೆ.
ಮಾಯಮುಡಿ ಗ್ರಾಮದ ಕಾಫಿ ಬೆಳೆಗಾರ ಚೆಪ್ಪುಡೀರ ಸುಬಿನ್ ಸುಬ್ಬಯ್ಯ ಅವರ ತೋಟದಲ್ಲಿ ಗುರುವಾರ ತಡ ರಾತ್ರಿ ಕಾಣಿಸಿಕೊಂಡಿದ್ದ ಸುಮಾರು 15 ಅಡಿ ಉದ್ದದ ಹೆಬ್ಬಾವನ್ನು ಉರಗ ಪ್ರೇಮಿ ತೀತೀರ ಅಭಿಷೇಕ್ ಹಾಗೂ ಭಾವೆ ಹಿಡಿದು ರಕ್ಷಣೆ ಮಾಡಿ ಮತ್ತಿಗೋಡು ಅರಣ್ಯಕ್ಕೆ ಬಿಟ್ಟರು.
ಬೆಳೆಗಾರ ಸುಬಿನ್ ಸುಬ್ಬಯ್ಯ ತೋಟಕ್ಕೆ ನೀರು ಹಾಯಿಸಲು ಗದ್ದೆಯಲ್ಲಿನ ಕೆರೆಗೆ ತೆರಳುತ್ತಿದ್ದಾಗ ಹಾವು ತೋಟದಿಂದ ಮತ್ತೊಂದು ತೋಟಕ್ಕೆ ತೆರಳುತ್ತಿರುವದು ಗೋಚರಿಸಿದೆ. ನಂತರ ಗ್ರಾಮಸ್ಥರ ಸಹಾಯದಿಂದ ಉರಗ ಪ್ರೇಮಿಗಳನ್ನು ಕರೆದು ರಕ್ಷಣೆ ಮಾಡಿದರು. ಅರಣ್ಯ ಇಲಾಖೆಗೆ ಮಾಹಿತಿ ನೀಡಿ, ಮತ್ತಿಗೋಡು ಅರಣ್ಯಕ್ಕೆ ಬಿಡಲಾಯಿತು.
ಸುಮಾರು 15 ಅಡಿ ಉದ್ದವಿದ್ದ ಹಾವು ಸುಮಾರು 28 ಕೆ.ಜಿ. ತೂಕವಿತ್ತು. ಮೈಯಲ್ಲಿನ ಚಿಹ್ನೆಗಳು ಹೆಣ್ಣು ಹಾವು ಎಂದು ಗುರುತಿಸುವಂತಿದೆ. ಇಂಡಿಯನ್ ರಾಕ್ ಪೈಥಾನ್ ಎಂದು ಹಾವು ರಕ್ಷಣೆ ಮಾಡಿದ ಉರಗ ಪ್ರೇಮಿ ತೀತಿರ ಅಭಿಷೇಕ್ ಮಾಹಿತಿ ನೀಡಿದ್ದಾರೆ.
-ಸುದ್ದಿಪುತ್ರ