ಮಡಿಕೇರಿ, ಏ. 12: ಶುಕ್ರವಾರದ ಸಂತೆ ದಿನವಾದ ಇಂದು ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಬಿ.ಜೆ.ಪಿ.ಯ ಶಾಸಕದ್ವಯರು, ಪಕ್ಷದ ಕಾರ್ಯಕರ್ತರು ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ ಪರವಾಗಿ ಬಿರುಸಿನ ಮತ ಬೇಟೆ ನಡೆಸಿದರು.

ಬೆಳಿಗ್ಗೆ ಶಾಸಕರುಗಳಾದ ಎಂ.ಪಿ. ಅಪ್ಪಚ್ಚು ರಂಜನ್, ಎಂ.ಪಿ. ಸುನಿಲ್ ಸುಬ್ರಮಣಿ ಹಾಗೂ ಬಿ.ಜೆ.ಪಿ. ಜಿಲ್ಲಾಧ್ಯಕ್ಷ ಬಿ.ಬಿ. ಭಾರತೀಶ್ ಸಹಿತ ಇತರ ಮುಖಂಡರು ಕಾರ್ಯಕರ್ತ ರೊಡಗೂಡಿ ಬನ್ನಿಮಂಟಪ ಬಳಿಯಿಂದ ಮತ ಪ್ರಚಾರ ನಡೆಸಿದರು.

ಮುಂದೆ ಶ್ರೀ ಚೌಡೇಶ್ವರಿ ದೇಗುಲ ಎದುರು ವಿಶೇಷ ಪ್ರಾರ್ಥನೆ ಬಳಿಕ ಸಾರ್ವಜನಿಕರಿಗೆ ಮೋದಿ ಭಾವಚಿತ್ರ ಸಹಿತ ಪಕ್ಷದ ಪ್ರಣಾಳಿಕೆ, ಸಂಕಲ್ಪ ಪತ್ರಗಳನ್ನು ಹಂಚಿ, ಬಿ.ಜೆ.ಪಿ. ಅಭ್ಯರ್ಥಿ ಪರ ಮತಯಾಚಿಸಿದರು. ಸಂತೆ ಮಾರುಕಟ್ಟೆಯ ಸಂಕೀರ್ಣದೊಳಗೆ ಪ್ರತಿಯೊಬ್ಬ ವ್ಯಾಪಾರಿ ಹಾಗೂ ಗ್ರಾಹಕರಲ್ಲಿ ಕಾರ್ಯಕರ್ತರ ಗುಂಪು ಮತ ಪ್ರಚಾರ ನಡೆಸಿತು.

ಈ ಸಂದರ್ಭ ಮಾತನಾಡಿದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಭಾರತದಲ್ಲಿ ಎಲ್ಲಾ ಸಮುದಾಯದ ಅಭಿವೃದ್ಧಿಗಾಗಿ ರೂಪಿಸಿರುವ ಯೋಜನೆಗಳಿಂದ, ಜನರು ಮತ್ತೊಮ್ಮೆ ಪಕ್ಷವನ್ನು ಬೆಂಬಲಿಸಿ, ಆಶೀರ್ವದಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಂತ್ರಿ ನಿರೀಕ್ಷೆ: ದ್ವಿತೀಯ ಬಾರಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿ.ಜೆ.ಪಿ. ಅಧಿಕಾರಕ್ಕೆ ಬರುವದರೊಂದಿಗೆ 300ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ ಮೇಲ್ಮನೆ ಸದಸ್ಯ ಸುನಿಲ್ ಸುಬ್ರಮಣಿ, ಪ್ರತಾಪ್ ಸಿಂಹ ಕೂಡ ಮೋದಿ ಸಂಪುಟದಲ್ಲಿ ಮಂತ್ರಿಯಾಗಲಿದ್ದಾರೆ ಎಂಬ ನಿರೀಕ್ಷೆ ಹೊರಗೆಡವಿದರು.

ಬಿ.ಜೆ.ಪಿ. ಜಿಲ್ಲಾಧ್ಯಕ್ಷ ಬಿ.ಬಿ. ಭಾರತೀಶ್ ಮಾತನಾಡಿ, ‘ಮತ್ತೊಮ್ಮೆ ಮೋದಿ ಸರಕಾರ’ ಘೋಷಣೆಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಕೊಡಗು-ಮೈಸೂರು ಸಹಿತ ರಾಜ್ಯದಲ್ಲಿ ಅತ್ಯಧಿಕ ಸ್ಥಾನಗಳಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲವಿನೊಂದಿಗೆ ದೇಶದಲ್ಲಿ ಮೋದಿ ಅವರಿಗೆ ಬೆಂಬಲಿಸುವ ವಿಶ್ವಾಸದ ನುಡಿಯಾಡಿದರು.

ಬಿ.ಜೆ.ಪಿ. ಮುಖಂಡರಾದ ವಿ.ಕೆ. ಲೋಕೇಶ್‍ಕುಮಾರ್, ಬಿ.ಕೆ. ಅರುಣ್‍ಕುಮಾರ್, ಶಜಿಲ್ ಕೃಷ್ಣ, ಮಹೇಶ್ ಜೈನಿ, ಟಿ.ಎಸ್. ಪ್ರಕಾಶ್, ಮನು ಮಂಜುನಾಥ್, ಅನಿತಾ ಪೂವಯ್ಯ, ಪಿ.ಡಿ. ಪೊನ್ನಪ್ಪ ಸೇರಿದಂತೆ ನಗರ ಬಿ.ಜೆ.ಪಿ. ಪದಾಧಿಕಾರಿಗಳು, ನಗರಸಭೆ ಮಾಜಿ ಸದಸ್ಯರು, ಮಹಿಳಾ ಪ್ರತಿನಿಧಿಗಳು ಪಾಲ್ಗೊಂಡಿದ್ದರು.