ಗೋಣಿಕೊಪ್ಪ ವರದಿ, ಏ. 12: ವಿದ್ಯಾರ್ಥಿಗಳಲ್ಲಿ ಜವಾಬ್ದಾರಿಯನ್ನು ನಿಭಾಯಿಸಲು ಅವಕಾಶ ನೀಡುವ ಮೂಲಕ ನಾಯಕತ್ವ ಗುಣಗಳನ್ನು ಹೊರತರಲು ಪ್ರಾಧ್ಯಾಪಕ ವರ್ಗ ಸಹಕರಿಸಬೇಕು ಎಂದು ಮೈಸೂರು ಸಿದ್ದಾರ್ಥನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಕೆ. ಎಂ. ಪ್ರಸನ್ನಕುಮಾರ್ ಸಲಹೆ ನೀಡಿದರು.
ಇಲ್ಲಿನ ಕಾವೇರಿ ಪದವಿ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆ ಘಟಕದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಆತ್ಮಸ್ಥೈರ್ಯ ಕಳೆದುಕೊಂಡು ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪ್ರಯತ್ನಕ್ಕೆÉ ಮುಂದಾಗುತ್ತಾರೆ. ಇದನ್ನು ನಿಯಂತ್ರಿಸಲು ಪ್ರಾಧ್ಯಾಪಕ ವರ್ಗ ಅಥವಾ ಪೋಷಕರು ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಹೊರತರಲು ಯತ್ನಿಸಬೇಕು ಎಂದರು.
ಕಾವೇರಿ ಎಜುಕೇಶನ್ ಸೊಸೈಟಿ ಕಾರ್ಯದರ್ಶಿ ಕೆ.ಎಂ ಉತ್ತಪ್ಪ ಮಾತನಾಡಿ, ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದ ಸಂದರ್ಭ ಘಟಕದ ಸದಸ್ಯರು ಉತ್ತಮ ಕಾರ್ಯ ನಿರ್ವಹಿಸಿದ್ದಾರೆ. ಸೇವೆ ಸಲ್ಲಿಸಿದ ಸಂದರ್ಭ ವಿದ್ಯಾರ್ಥಿಗಳಿಗೆ ಉಂಟಾದ ಅನುಭವವನ್ನು ಪುಸ್ತಕ ರೂಪದಲ್ಲಿ ಹೊರತರುವದಾಗಿ ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಕೊಡಗು ಪ್ರೆಸ್ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಸಕಾರಾತ್ಮಕ ಕಾರ್ಯಗಳ ಕಡೆಗೆ ಗಮನ ಹರಿಸಬೇಕು ಎಂದು ಹೇಳಿದರು.
ಸಮಾರಂಭದ ಪದವಿಕಾಲೇಜು ಪ್ರಾಂಶುಪಾಲೆ ಪ್ರೊ. ಎಸ್.ಆರ್ ಉಷಾಲತಾ, ಎನ್ಎಸ್ಎಸ್ ಯೋಜನಾಧಿಕಾರಿಗಳಾದ ಎಂ.ಎನ್. ವನಿತ್ ಕುಮಾರ್ ಹಾಗೂ ಎನ್.ಪಿ ರೀತಾ ಇದ್ದರು. ಚೆನ್ನ ನಾಯಕ್ ವಾರ್ಷಿಕ ವರದಿ ವಾಚಿಸಿದರು.