ನಾಪೋಕ್ಲು, ಏ. 13: ಪಾರಾಣೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬಾವಲಿ ಗ್ರಾಮದಲ್ಲಿ ಅಕ್ರಮ ಮದ್ಯಮಾರಾಟ ದಂಧೆ ಮಿತಿಮೀರಿದ್ದು, ಇದರಿಂದಾಗಿ ಗ್ರಾಮದಲ್ಲಿ ಅಶಾಂತಿಯ ವಾತಾವರಣ ಸೃಷ್ಟಿಯಾಗಿದೆ ಎಂದು ಆರೋಪಿಸಿ ಬಾವಲಿ ಗ್ರಾಮದ ಮಹಿಳಾ ಸಂಘಗಳು, ವಿವಿಧ ಸಂಘಸಂಸ್ಥೆಗಳು ಹಾಗೂ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.ಬಾವಲಿ ಗ್ರಾಮದ ಅಂಗನವಾಡಿ ಕೇಂದ್ರದ ಜಂಕ್ಷನ್‍ನಲ್ಲಿ ಸಮಾವೇಶಗೊಂಡ ಮಹಿಳಾ ಸಂಘಗಳ ಪ್ರಮುಖರು ಹಾಗೂ ಗ್ರಾಮಸ್ಥರು ಅಕ್ರಮ ಮದ್ಯ ಮಾರಾಟದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ದಂಧೆ ಎಲ್ಲೆ ಮೀರಿದ್ದು, ದುಪ್ಪಟ್ಟು ದರಕ್ಕೆ ಮದ್ಯ ಮಾರಾಟ ಮಾಡಲಾಗುತ್ತಿದೆ. ಮದ್ಯ ಸೇವನೆಯಿಂದಾಗಿ ಕೂಲಿ ಕಾರ್ಮಿಕರು ಕೆಲಸಕ್ಕೆ ತೆರಳದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಇವರ ಕುಟುಂಬಸ್ಥರು ಸಂಕಷ್ಟವನ್ನು ಎದುರಿಸುವಂತಾಗಿದೆ. ಅಕ್ರಮ ಮದ್ಯ ಮಾರಾಟದಿಂದಾಗಿ ಗ್ರಾಮದಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚುತ್ತಿವೆ ಎಂದು ಆತಂಕ
(ಮೊದಲ ಪುಟದಿಂದ) ವ್ಯಕ್ತಪಡಿಸಿದರಲ್ಲದೆ, ಗ್ರಾಮದಲ್ಲಿ ಶಾಂತಿ, ನೆಮ್ಮದಿಗೆ ಧಕ್ಕೆ ತಂದೊಡ್ಡಿರುವ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಲು ಅಧಿಕಾರಿಗಳು ಕೂಡಲೇ ಮುಂದಾಗುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.
ಈ ಸಂದರ್ಭ ಮಾತನಾಡಿದ ಗ್ರಾಮದ ಪ್ರಮುಖರು, ಈ ಹಿಂದೆ ಪಾರಾಣೆಯಲ್ಲಿ ಎಂಎಸ್‍ಐಎಲ್ ಮದ್ಯಮಾರಾಟದ ಮಳಿಗೆ ಇದ್ದ ಸಂದರ್ಭ ಗ್ರಾಮದಲ್ಲಿ ಅಕ್ರಮ ಮದ್ಯಮಾರಾಟಕ್ಕೆ ಕಡಿವಾಣ ಬಿದ್ದಿತ್ತು. ಅಬಕಾರಿ ಅಧಿಕಾರಿಗಳು ಎಂಎಸ್‍ಐಎಲ್ ಮದ್ಯಮಾರಾಟ ಮಳಿಗೆಯನ್ನು ತೆರೆಯುವ ಮೂಲಕ ಅಕ್ರಮ ಮದ್ಯಮಾರಾಟಕ್ಕೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ಕುಟ್ಟನ ಬೆಳ್ಯಪ್ಪ, ಮುಕ್ಕಾಟಿರ ಹರೀಶ್, ಕನ್ನಂಡ ಅಪ್ಪಣ್ಣ, ಕನ್ನಂಡ ಬೋಪಣ್ಣ, ದೇವಣೀರ ಅಜಿತ್, ದೇವಣೀರ ಅಚ್ಚಪ್ಪ, ಎಳ್ತಂಡ ದೇವಯ್ಯ, ಎಳ್ತಂಡ ದಿನೇಶ್, ಬಾಚಮಂಡ ತಮ್ಮಯ್ಯ, ನಾಳಿಯಂಡ ರಮೇಶ್, ಪೊಯ್ಯಟೀರ ಲತಾ ಕರುಂಬಯ್ಯ, ಕನ್ನಂಡ ಸರಾ, ರೋಹಿಣಿ, ಬೀನಾ, ಅಪ್ಪನೆರವಂಡ ನಯನ, ಎಳ್ತಂಡ ಸುಮಿ, ಎಳ್ತಂಡ ಭಾಗಿರಥಿ, ಜಾಜಿ, ರಾಮು ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.