ಸೋಮವಾರಪೇಟೆ, ಏ. 12: ಇಲ್ಲಿನ ಸರ್ಕಾರಿ ಆಸ್ಪತ್ರೆಯ ವೈದ್ಯರ ವಸತಿ ಗೃಹದ ಹಿಂಭಾಗ, ನಿರ್ಮಾಣವಾಗುತ್ತಿರುವ ತಡೆಗೋಡೆ ಕಾಮಗಾರಿ ಕಳಪೆಯಾಗಿದ್ದು, ಗುಣಮಟ್ಟದ ಕಾಮಗಾರಿ ನಿರ್ವಹಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆಯ ನಗರ ಘಟಕದ ಪದಾಧಿಕಾರಿಗಳು ಒತ್ತಾಯಿಸಿದರು. ಆಸ್ಪತ್ರೆಯ ಮುಂಭಾಗದಲ್ಲಿರುವ ವೈದ್ಯರ ವಸತಿ ಗೃಹಕ್ಕೆ ಮುಖ್ಯರಸ್ತೆಯ ಬದಿಯಲ್ಲಿ ತಡೆಗೋಡೆ ನಿರ್ಮಿಸಲಾಗುತ್ತಿದ್ದು, 9.5 ಲಕ್ಷದ ಕಾಮಗಾರಿ ಕಳಪೆಯಾಗಿದೆ ಎಂದು ಕರವೇ ನಗರ ಘಟಕದ ಅಧ್ಯಕ್ಷ ಮಂಜುನಾಥ್ ಆರೋಪಿಸಿದರು.
ಕಾಮಗಾರಿಗೆ ತಡೆ ಒಡ್ಡಿದ ಕಾರ್ಯಕರ್ತರು ಗುತ್ತಿಗೆದಾರ ಮತ್ತು ಅಭಿಯಂತರ ಸ್ಥಳಕ್ಕೆ ಆಗಮಿಸಬೇಕೆಂದು ಪಟ್ಟು ಹಿಡಿದರು. ತಡೆಗೋಡೆ ಕಾಮಗಾರಿಗೆ ಬಳಸಲ್ಪಡುತ್ತಿರುವ ಪರಿಕರಗಳನ್ನು ಮುಖ್ಯರಸ್ತೆಯ ಮೇಲೆಯೇ ಹಾಕಿರುವದರಿಂದ ವಾಹನಗಳ ಸಂಚಾರಕ್ಕೂ ಅಡಚಣೆಯಾಗಿದೆ.
ಇದರೊಂದಿಗೆ ಕಾಮಗಾರಿಯೂ ನಿಧಾನ ಗತಿಯಲ್ಲಿ ಸಾಗುತ್ತಿದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದರು. ನಂತರ ಸ್ಥಳಕ್ಕಾಗಮಿಸಿದ ಗುತ್ತಿಗೆದಾರ ಮಹೇಂದ್ರ, ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡುವ ಮೂಲಕ ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸುವ ಭರವಸೆ ನೀಡಿದರು. ಈ ಸಂದರ್ಭ ಕರವೇ ಪದಾಧಿಕಾರಿಗಳು ಉಪಸ್ಥಿತರಿದ್ದರು.