ಜಗತ್ತಿನ ಅತೀ ಸೂಕ್ಷ್ಮ ಅಲ್ಪಸಂಖ್ಯಾತ ಜನಾಂಗವೊಂದು, ಎಲ್ಲಾ ಸಾಮಾಜಿಕ ಹಾಗೂ ಸಾಂಸ್ಕøತಿಕ ಆಕ್ರಮಣದ ಹೊಡೆತಗಳ ಹೊರತಾಗಿಯೂ ತನ್ನದೇ ಆದ ಪಂಚಾಂಗವನ್ನು ತಲಾಂತರಗಳಿಂದ ಅನುಸರಿಸಿಕೊಂಡು ಬರುತ್ತಿದೆಯೆಂದರೆ ಅಚ್ಚರಿಯೆನಿಸಬಹುದು. ಹೌದು ಕೊಡವ ಜನಾಂಗವು ಇಂದಿಗೂ ತನ್ನದೇ ಆದ ಕ್ಯಾಲೆಂಡರನ್ನು ಅನುಸರಿಸುತ್ತಿದೆ. ಇಂದಿಗೂ ಕೊಡವರ ಬಹುತೇಕ ಹಿರಿಯರು ಕೊಡವ ಪಂಚಾಂಗ ಪಾರಿಭಾಷೆಯಲ್ಲೇ ಬಳಸುತ್ತಿರುವದೂ ಇದೆ. ಕೊಡವರ ಎಲ್ಲಾ ಹಬ್ಬಗಳೂ ಸಹ ಕೊಡವ ಪಂಚಾಂಗದ ಪರಿಭಾಷೆಯಲ್ಲೆ ಕರೆಯಲ್ಪಡುತ್ತಿರುವದೂ ಸಹ ಇದೆ. ಉದಾ: ಎಡಮ್ಯಾರ್ ಒಂದ್, ಕಕ್ಕಡ 18, ಕನ್ಯಾರ್ 18, ತೊಲ್ಯಾರ್ ಚಂಗ್ರಾಂದಿ, ಹೀಗೆ ಸಾಗುತ್ತದೆ. ಈ ಕ್ಯಾಲೆಂಡರಿನ ಇತಿಹಾಸವೇ ಬಲು ರೋಚಕ.

ಒಂದು ಅಂದಾಜಿನಂತೆ ಸುಮಾರು 10 ಸಾವಿರ ವರ್ಷಗಳ ಹಿಂದೆ ಈ ಭೂಲೋಕದಲ್ಲಿ ಕ್ಯಾಲೆಂಡರ್ ತಯಾರಿ ಆಯಿತೆಂದು ಹೇಳಲಾಗುತ್ತಿದೆ. ಸೂರ್ಯ ಚಂದ್ರರ ಚಲನೆಗನುಗುಣವಾಗಿ ರಾತ್ರಿ ಹಗಲೆನ್ನುವ ಲೆಕ್ಕಾಚಾರ ವನ್ನಿಟ್ಟುಕೊಂಡು ಈ ಕ್ಯಾಲೆಂಡರನ್ನು ಅವಿಷ್ಕರಿಸಲಾಯಿತೆನ್ನುತ್ತದೆ ಇತಿಹಾಸ. ಪ್ರಾದೇಶಿಕ ಅನುಕೂಲತೆಗನುಗುಣವಾಗಿ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಒಂದು ಲೆಕ್ಕವಾದರೆ, ಚಂದ್ರ ಹುಟ್ಟಿ ಮುಳುಗುವದರ ಆಧಾರದಲ್ಲಿ ಮತ್ತೊಂದು ಲೆಕ್ಕಾಚಾರದ ಮೇಲೆ ಬೇರೆ ಬೇರೆ ಕ್ಯಾಲೆಂಡರುಗಳು ಹುಟ್ಟಿಕೊಂಡವು. ಕುತೂಹಲಕರ ವಿಷಯವೆಂದರೆ ಈ ಕ್ಯಾಲೆಂಡರಿನ ಹುಟ್ಟಿಗೆ ಕಾರಣವಾಗಿದ್ದ ಅಂಶ ಮಾತ್ರ ಕೃಷಿ ಎನ್ನುವದು. ಕೃಷಿಯ ಆರಂಭ ಹಾಗೂ ಕೊಯ್ಲಿನ ಸಮಯವನ್ನು ಅಂದಾಜಿಸಲು ಈ ಕ್ಯಾಲೆಂಡರಿನ ಅವಿಷ್ಕಾರ ವಾಯಿತು ಎನ್ನುತ್ತದೆ ಇತಿಹಾಸ.

ಇದೀಗ ನಮ್ಮೆಲ್ಲರ ನಾಲಗೆಯ ತುದಿಯಲ್ಲಿ ಹೊರಳುತ್ತಿರುವ ಜನವರಿಯಿಂದ ಡಿಸೆಂಬರ್‍ವರೆಗಿನ 12 ತಿಂಗಳುಗಳನ್ನೊಳಗೊಂಡ ಕ್ಯಾಲೆಂಡರನ್ನು ‘ಗ್ರೆಗೋರಿಯನ್ ಕ್ಯಾಲೆಂಡರ್’ ಎನ್ನಲಾಗುತ್ತದೆ. ಇಂದು ಪ್ರಪಂಚದಾತ್ಯಂತ ಸಾಮಾನ್ಯ ಬಳಕೆಯಲ್ಲಿರುವ ಈ ಕ್ಯಾಲೆಂಡರನ್ನು 13ನೇ ಪೋಪ್ ಗ್ರೆಗೋರಿ 1582ನೇ ಇಸವಿ ಅಕ್ಟೋಬರ್‍ನಲ್ಲಿ ಜಗತ್ತಿಗೆ ಪರಿಚಯಿಸಿ ದರು. ಆನಂತರ ಬ್ರಿಟೀಷರಾದಿಯಾಗಿ ಎಲ್ಲರೂ ಇದೇ ಕ್ಯಾಲೆಂಡರನ್ನು ಬಳಸುವಂತಾಗಿ, ಇಂದು ಜಗತ್ತು ಸಮಾನ್ಯವಾಗಿ ಇದೇ ಕ್ಯಾಲೆಂಡರನ್ನು ಒಪ್ಪಿಕೊಂಡು ಬಳಸುತ್ತಿದೆ. ಹಾಗೆಯೇ ನಮ್ಮ ದೇಶದ ಕ್ಯಾಲೆಂಡರ್‍ಅನ್ನು ಶಕಾ ಪಂಚಾಂಗ ಎನ್ನಲಾಗುತ್ತದೆ. ಇದನ್ನು 23 ಮಾರ್ಚ್ 1957 ರಂದು ಒಪ್ಪಿ ಅನುಮೋದಿಸಲಾಯಿತು. ಇದಕ್ಕೆ ಹೊಸ ರೂಪ ನೀಡಿ, ಹಿಂದೂ ಕ್ಯಾಲೆಂಡರ್, ಸೌರಮಾನ ಚಂದ್ರಮಾನ ಕ್ಯಾಲೆಂಡರ್ ಸಮ್ಮಿಲನದೊಂದಿಗೆ ನೂತನ ಕ್ಯಾಲೆಂಡರ್ ಆಗಿ ಪರಿಚಯಿಸಲಾಯಿತು. ಇದನ್ನು ವಿಕ್ರಮಿ (ಬಿಕ್ರಮಿ) ಕ್ಯಾಲೆಂಡರ್ ಎಂದು ಕರೆಯಲಾಯಿತು. ಹಾಗೆಯೇ ನಮ್ಮ ದೇಶದಲ್ಲಿ ಪ್ರಾದೇಶಿಕವಾಗಿ ಬಂಗಾಳ ಕ್ಯಾಲೆಂಡರ್, ತಮಿಳ್ ಕ್ಯಾಲೆಂಡರ್, ಮಲೆಯಾಳ ಕ್ಯಾಲೆಂಡರ್ ಮುಂತಾದ ಬೇರೆ ಬೇರೆ ಪದ್ಧತಿಯ ಕ್ಯಾಲೆಂಡರ್‍ಗಳಿವೆ. ಇದರಂತೆ ತಮಿಳಿನ ಹೊಸ ವರ್ಷಾರಂಭ ವಸಂತ ಋತುವಿನಲ್ಲಾದರೆ ಮಲೆಯಾಳಂ ವರ್ಷಾರಂಬ ಶರತ್ ಋತುವಿನಲ್ಲಾಗುತ್ತದೆ. ಹಾಗೆಯೇ ಚಳಿಗಾಲದ ಅಂತ್ಯ ಮಳೆಗಾಲದ ಪ್ರಾರಂಭ ಎನ್ನುವಂತೆ ಕೊಡವರ ಹೊಸವರ್ಷ ಬರುತ್ತದೆ. ಇದನ್ನು ಕೊಡವರು ಮೀನ್ಯಾರ್ ಚಂಗ್ರಾಂದಿ (ಸಂಕ್ರಮಣ) ಎಂದು ಕರೆದರೆ, ಕೇರಳಿಗರು ಇದನ್ನು ಬಿಸು (ವಿಸು) ಎಂದು ಕರೆಯುತ್ತಾರೆ. ಎಂದರೆ ಕೊಡವರ ಕಡೇ ತಿಂಗಳು ಮೀನ್ಯಾರ್ (ಮೀನ ಮಾಸ) ಕಳೆದು ಎಡಮ್ಯಾರ್ (ಮೇಷ ಮಾಸ) ತಿಂಗಳ ಒಂದನೇ ತಾರೀಕು ಎಡಮ್ಯಾರ್ ಒಂದನ್ನು ಕೊಡವರು ಹೊಸ ವರ್ಷವನ್ನಾಗಿ ಆಚರಿಸುತ್ತಾರೆ. ಇದು ಕೊಡವರಿಗೆ ಅತ್ಯಂತ ಪವಿತ್ರವಾದ ದಿನ. ಕೊಡವರಂತೆಯೇ ಎಡಮ್ಯಾರ್ ಒಂದು ಅಂದರೆ ಗ್ರೆಗೋರಿಯನ್ ಕ್ಯಾಲೆಂಡರಿನ ಏಪ್ರಿಲ್ 13, 14, 15 ರಂದು ದೇಶದ ಹಲವು ಕಡೆಗಳಲ್ಲಿಯೂ ಹೊಸ ವರ್ಷವನ್ನಾಗಿ ಆಚರಿಸುತ್ತಾರೆ. ಉತ್ತರ ಭಾರತದ ಹಲವೆಡೆ ಈ ದಿನವನ್ನು ‘ವೈಸಾಕಿ’ ಎಂದೂ, ಅಸ್ಸಾಂನಲ್ಲಿ ರೋಂಗಾಲಿ ಬಿಹು, ತಮಿಳುನಾಡಿ ನಲ್ಲಿ ‘ತಮಿಳ್ ಪುತ್ತಾಂಡ್’, ಕೇರಳದಲ್ಲಿ ‘ವಿಶು’, ಒಡಿಶಾದಲ್ಲಿ ‘ಬಿಹುವಾ ಸಂಕ್ರಾಂತಿ’, ಬಂಗಾಳದಲ್ಲಿ ‘ಪೊಯಿಲಾಬೊಯಿಶಾಖ್’, ಬಿಹಾರದ ಮಿಥಿಲಾ ಪ್ರಾಂತ್ಯದಲ್ಲಿ ‘ಜುಡ್‍ಶೀತಲ್’, ಹಾಗೂ ಗುಜರಾತದಲ್ಲಿ ‘ಬೇಸ್ಟುವರಾಸ್’ ಎಂದು ಈ ದಿನ ಹೊಸ ವರ್ಷವನ್ನು ಆಚರಿಸಲಾಗುತ್ತದೆ. ಹಾಗೆಯೇ ಮಾರ್ಚ್ 21 ರಂದು ಜೊರಾಷ್ಟ್ರಿಯನ್ ಜನಾಂಗ ಹಾಗೂ ಆಗಸ್ಟ್ 17, 18, 19 ರಂದು ಪಾರ್ಸಿ ಜನಾಂಗ ‘ನೌರುಝ್’ ಎಂದು ಸೌರಮಾನ ಪಂಚಾಂಗದಂತೆ ಹೊಸ ವರ್ಷ ಆಚರಣೆಯನ್ನು ಮಾಡುತ್ತಾರೆ. ಹಾಗೆಯೇ ಮಾರ್ಚ್ ಏಪ್ರಿಲ್ ತಿಂಗಳಲ್ಲಿ ಕರ್ನಾಟಕ, ಆಂಧ್ರ, ತೆಲಂಗಾಣದಲ್ಲಿ ‘ಯುಗಾದಿ’ ಆಚರಣೆಯಲ್ಲಿದೆ, ಮಹಾರಾಷ್ಟ್ರ, ಗೋವಾ, ಕೊಂಕಣದಲ್ಲಿ ‘ಗುಡಿ ಪಡುವಾ’ ಅಥವಾ ‘ಸಂಸಾರ್ ಪಡುವೊ’, ಮಣಿಪುರದಲ್ಲಿ ‘ಚೆಯಿರವೊಬ’, ಕಾಶ್ಮೀರದಲ್ಲಿ ‘ನವ್ರೆಹ್’, ಜಮ್ಮುವಿನಲ್ಲಿ’ ನವ್‍ರಾತ್ರ’ ಹಾಗೂ ಸಿಂದ್ ಪ್ರಾಂತ್ಯದಲ್ಲಿ ‘ಚೆಟಿಚಂದ್’, ಎಂದು ಬೇರೆ ಬೇರೆ ಕಡೆಗಳಲ್ಲಿ ಸಾಂಪ್ರದಾಯಿಕವಾಗಿ ಹೊಸ ವರ್ಷಾಚರಣೆಯನ್ನು ಸಂಭ್ರಮದಿಂದ ಅರ್ಥಪೂರ್ಣವಾಗಿ ಆಚರಿಸುವ ಸಂಪ್ರದಾಯ ನಮ್ಮ ದೇಶದಲ್ಲಿದೆ.

ಬದುಕಿನ ಆರಂಭ: ‘ಎಡಮ್ಯಾರ್ ಒಂದ್’ ಕೊಡವರಿಗೆ ಕೇವಲ ಹೊಸ ವರ್ಷಾಚರಣೆ ಮಾತ್ರವಲ್ಲ ಅದು ಬದುಕಿನ ಆರಂಭ. ಕೊಡವಾಮೆ ಅಂದರೆ ಅದರಲ್ಲಿ ಕೃಷಿ ಬದುಕು ಹೌದು ಹಾಗೆಯೇ ಕೃಷಿ ಕೊಡವರ ಸಂಸ್ಕøತಿಯೂ ಹೌದು. ಕೊಡವರ ಬದುಕಿನಲ್ಲಿ ಬರುವಂತಹ ಹಬ್ಬಗಳೆಲ್ಲವೂ ಕೃಷಿಯೊಂದಿಗೆ ಬೆಸೆದು ಕೊಂಡಿದೆ. ಮಾಲ್ಯಾರ್ (ಮಕರ ಮಾಸ) ಚಂಗ್ರಾಂದಿಯನ್ನು ‘ಬೇದ ಚಂಗ್ರಾಂದಿ’ಯೆಂದು ಭೂಮಿ ತಾಯಿಯು ಮುಟ್ಟಾಗಿರುವ ಳೆಂದು ಆರೈಕೆ ಮಾಡುವ ಹಬ್ಬ. ಆನಂತರ ಬರುವದೇ ಕೊಡವರ ಹೊಸ ವರ್ಷಾಚರಣೆಯ ಹಬ್ಬ ‘ಎಡಮ್ಯಾರ್ ಒಂದ್’. ನಂತರ ಬರುವ ಕಕ್ಕಡ 18, ಕೈಲ್ ಪೊವ್ದ್, ತೊಲ್ಯಾರ್ ಚಂಗ್ರಾಂದಿ ಹಾಗೂ ಪುತ್ತರಿ ಹಬ್ಬಗಳೆಲ್ಲವೂ ಕೃಷಿಯೊಂದಿಗೆ ಆಚರಿಸುವ ಹಬ್ಬಗಳೇ ಆಗಿರುವದು ವಿಶೇಷ.

ಈ ‘ಎಡಮ್ಯಾರ್ ಒಂದ್’ ಹೊಸ ವರ್ಷವನ್ನು ಕೊಡವರು ಕೃಷಿ ಚಟುವಟಿಕೆಯನ್ನು ಪ್ರಾರಂಭಿಸುವದರ ಮೂಲಕ ಸ್ವಾಗತಿಸುತ್ತಾರೆ. ಆ ದಿನ ಮುಂಜಾನೆ ಬ್ರಹ್ಮ ಮುಹೂರ್ತದಲ್ಲಿ ಎದ್ದು, ಕೊಟ್ಟಿಗೆಯಿಂದ ಎತ್ತುಗಳೊಂದಿಗೆ ಆಕತೇಂವ (ಮೀಸಲಿರಿಸಿದ ಗದ್ದೆ)ಕ್ಕೆ ತೆರಳಿ, ಎತ್ತುಗಳನ್ನು ಪೂರ್ವಾಭಿಮುಖ ವಾಗಿ ನಿಲ್ಲಿಸಿಲಾಗುವದು. ಆನಂತರ ಅಲ್ಲಿಯೇ ಏರಿಯಲ್ಲಿ ತೋರತೊಪ್ಪು (ಒಂದು ಬಗೆಯ ಮರದ ಎಲೆ) ಮೂರು ಎಲೆಗಳನ್ನು ಹರಡಿ, ಅದಕ್ಕೆ ಅಕ್ಕಿಯನ್ನು ಹಾಕಿ, ಪೂರ್ವಾಭಿಮುಖವಾಗಿ ನಿಂತು ಸೂರ್ಯನನ್ನು ಪ್ರಾರ್ಥಿಸಿ ಶಾಸ್ತ್ರೋಕ್ತವಾಗಿ ಸೂರ್ಯನಿಗೂ, ಎತ್ತುಗಳ ತಲೆ ಹಾಗೂ ಕತ್ತಿನ ಬಾಗಕ್ಕೂ ಅಕ್ಕಿಯನ್ನು(ಅಕ್ಷತೆ) ಹಾಕಿ, ಬಾಳೆದಿಂಡಿನ ಪಟ್ಟೆಯಲ್ಲಿ ಬೆಂಕಿಯ ಕೆಂಡಕ್ಕೆ ಧೂಪವನ್ನು ಹಾಕಿ ಎತ್ತುಗಳಿಗೆ ಆರತಿ ಎತ್ತಿ ಎತ್ತುಗಳ ಹಣೆಗೆ ಕತ್ತಿನ ಭಾಗಕ್ಕೆ ಕೊಂಬುಗಳಿಗೆ ಗಂಧದ ತಿಲಕವಿಟ್ಟು ನಂತರ ಎತ್ತುಗಳಿಗೆ ನೊಗವನ್ನಿಟ್ಟು ನೇಗಿಲನ್ನು ಕಟ್ಟಿ, ಮತ್ತೊಮ್ಮೆ ಪೂರ್ವಾಭಿಮುಖವಾಗಿ ಸೂರ್ಯನಿಗೆ ಅಕ್ಷತೆ ಯನ್ನು ಹಾಕಿ ಮೂರು ಸಾಲು ಉಳುಮೆ ಮಾಡಿದ ಎತ್ತುಗಳ ಕಾಲಿಗೆ ನೀರು ಹಾಕಿದ ನಂತರ ನೇಗಿಲನ್ನು ಬಿಚ್ಚಲಾಗುವದು. ಇಲ್ಲಿಗೆ ಎತ್ತು ಕಟ್ಟುವ ಶಾಸ್ತ್ರವು ಮುಗಿಯುತ್ತದೆ. ಗದ್ದೆಯಲ್ಲಿ ಶಾಸ್ತ್ರವು ಮುಗಿಯುತ್ತಿದ್ದಂತೆ ಇತ್ತ ಮನೆಯಲ್ಲಿ ತುಲಾ ಸಂಕ್ರಮಣಕ್ಕೆ ಪೂಜಿಸಿದಂತೆಯೇ ಕಣಿ ಪೂಜುವ ಸಂಪ್ರದಾಯವೂ ಈ ಮೀನ್ಯಾರ್ ಚಂಗ್ರಾಂದಿಯಲ್ಲಿತ್ತು. ಆದರೆ ಇದೀಗ ಎಲ್ಲವೂ ತನ್ನ ಅಸ್ತಿತ್ವವನ್ನು ಕಳೆದುಕೊಂಡು ಕೂತಿರುವದು ವಿಪರ್ಯಾಸವೇ ಸರಿ. ಪ್ರತಿಮನೆಯಲ್ಲೂ ಬೊಳ್ಳರಿ ತೋಟ (ತರಕಾರಿ ತೋಟ) ಎನ್ನುವ ತರಕಾರಿ ತೋಟವಿರುತ್ತಿತ್ತು. ತಳಿಯ ಎನ್ನುವ ಹಿತ್ತಾಳೆಯ ತಟ್ಟೆಯನ್ನು ಮುಕ್ಕಾಲಿಯ ಮೇಲಿರಿಸಿ, ಅದಕ್ಕೆ ಅಕ್ಕಿಯನ್ನು ಹಾಕಿ ಅದರ ಮೇಲೆ ತೋಟದಿಂದ ತಂದ ಸೌತೆಕಾಯಿಯನ್ನಿರಿಸಿ, ಅದನ್ನು ಕೋಂದೆ ಮರದ ಹೂವು ಹಾಗೂ ದೇವಕಳ್ಳಿ ಎಂಬ ಜಾತಿಯ ಹೂವಿನಿಂದ ಅಲಂಕರಿಸಿ ಅದನ್ನು ಮನೆಯಲ್ಲಿ ರುವ ಪತ್ತಾಕ್, ಜೋಮಾಲೆ, ಕೊಕ್ಕೆತಾತಿ ಮುಂತಾದ ಆಭರಣಗಳನ್ನು ತೊಡಿಸಿ ಸಿಂಗರಿಸಿ ಪೂಜಿಸುವ ಪದ್ಧತಿಯನ್ನು ಕಣಿಪೂಜೋ ಎನ್ನತ್ತಾರೆ. ಕಣಿ ಪೂಜೆಗೆ ಸೌತೆಯನ್ನು ಕುಯ್ಯುವವರೆಗೆ ತರಕಾರಿ ತೋಟದಿಂದ ಏನನ್ನೂ ಕುಯ್ಯುವಂತಿರಲಿಲ್ಲ. ಈ ಕಣಿ ಪೂಜಿದ ನಂತರ ಮನೆಯವರೆಲ್ಲರೂ ಅದಕ್ಕೆ ಅಕ್ಕಿಯನ್ನು ಹಾಕಿ ಹಿರಿಯರ ಪಾದಮುಟ್ಟಿ ನಮಸ್ಕರಿಸಿ ಆಶೀರ್ವಾದ ಪಡೆಯುವದೂ ಈ ದಿನದ ವಿಶೇಷತೆಗಳಲ್ಲೊಂದು. ಇಂದು ಇವೆಲ್ಲವೂ ಮರೆಯಾಗಿ ಎಲ್ಲವೂ ಬರಡು ಬರಡು ಎನ್ನಿಸುವಂತಾಗಿದೆ. ಭತ್ತದ ಗದ್ದೆಗಳಿಂದ ಮನೆಯಲ್ಲಿನ ಆಚರಣೆಗಳವರೆಗೆ ಎಲ್ಲವೂ ಬರಡು ಬರಡಾಗಿ ಬಿಟ್ಟಿದೆ. ಇದಲ್ಲವೇ ದುರಂತ.

ಕಾರೋಣರಿಗೆ ಮೀದಿ: ಈ ದಿನದ ವಿಶೇಷತೆಗಳಲ್ಲಿ ಒಕ್ಕದ ಕಾರೋಣರಿಗೆ ವಾರ್ಷಿಕ ಮೀದಿ ಇಡುವದಕ್ಕೂ ಅತ್ಯಂತ ಪ್ರಶಸ್ತವಾದ ದಿನ. ಇಂದಿಗೂ ಕೊಡಗಿನ ಅನೇಕ ಕೊಡವ ಕುಟುಂಬಗಳಲ್ಲಿ ಗುರುಕಾರೋಣರಿಗೆ ಮೀದಿ ಸಮರ್ಪಿಸುವ ಪವಿತ್ರವಾದ ದಿನವನ್ನಾಗಿ ಈ ಎಡಮ್ಯಾರ್ ಒಂದ್‍ನ್ನು ಆಚರಿಸಲಾಗುತ್ತದೆ. ಹಿಂದಿನ ಪ್ರತಿಯೊಂದು ಆಚರಣೆಗಳಿಗೂ ಒಂದು ಬಲವಾದ ನಂಬಿಕೆ, ಅರ್ಥಪೂರ್ಣವಾದ ಚೌಕಟ್ಟು, ವಿಭಿನ್ನವಾದ ಕಟ್ಟುಪಾಡುಗಳು ಇರುತ್ತಿದ್ದವು. ಇಂದಿಗೂ ಇಂತಹವುಗಳನ್ನು ಅಷ್ಟೇ ನಂಬಿಕೆಯಿಂದ ಅನುಸರಿಸಿ ಕೊಂಡು ಹೋದಾಗ ಮಾತ್ರವೇ ಅಂತಹ ಸಂಸ್ಕøತಿಯಲ್ಲಿ ಹುಟ್ಟಿದ್ದಕ್ಕೂ ಒಂದು ಅರ್ಥ ಬರುತ್ತದೆ. ಇದೆಲ್ಲವನ್ನೂ ಕಡೆಗಣಿಸಿ, ಇನ್ನೇನನ್ನೋ ಹುಡುಕುವ ಬರದಲ್ಲಿ ನಮ್ಮ ಜೀವನದ ಅರ್ಥವನ್ನೇ ಕಳೆದುಕೊಳ್ಳುವ ಸ್ಥಿತಿಯನ್ನು ತಲುಪಿರುವದು ವಿಪರ್ಯಾಸ. ನಾಡಿನ ಸಮಸ್ತರಿಗೆ ಎಡಮ್ಯಾರ್ ಒಂದ್ ಹೊಸ ವರ್ಷಾ ಚರಣೆಯ ಶುಭ ಕಾಮನೆಗಳು.

? ಕೊಕ್ಕಲೆಮಾಡ ಮಂಜು ಚಿಣ್ಣಪ್ಪ,

ಹೈಸೊಡ್ಲೂರು