ವೀರಾಜಪೇಟೆ, ಏ. 13: ಆದಿವಾಸಿಗಳ ಅಭಿವೃದ್ಧಿಗೆ ಕೇಂದ್ರದ ಭಾ.ಜ.ಪ. ಸರ್ಕಾರವು ನಿರಂತರವಾಗಿ ಶ್ರಮಿಸುತ್ತಿದೆ, ಆದರೇ ಕಾಂಗ್ರೆಸ್ ಪಕ್ಷದ ಪರಿಶಿಷ್ಟ ಘಟಕದ ಜಿಲ್ಲಾ ಮಹಿಳಾ ಅಧ್ಯಕ್ಷೆ ಪಿ.ಆರ್. ಪಂಕಜ ಅವರು ಕೇಂದ್ರದಿಂದ ಆದಿವಾಸಿಗಳ ಶ್ರೇಯೋಭಿವೃದ್ಧಿಗೆ ಯಾವದೇ ಪೂರಕವಾದ ಯೋಜನೆಗಳು ಮಾಡಿಲ್ಲ ಎಂದು ಬಿಂಬಿಸುತ್ತಿರುವದು ಸತ್ಯಕ್ಕೆ ದೂರವಾದುದು ಎಂದು ವೀರಾಜಪೇಟೆ ತಾಲೂಕು ಭಾ.ಜ.ಪ. ಪರಿಶಿಷ್ಟ ಪಂಗಡದ ಅಧ್ಯಕ್ಷ ಎಂ.ಎಂ. ಪರಮೇಶ್ವರ ಪ್ರತಿಕ್ರಿಯಿಸಿದ್ದಾರೆ.

ಕೇಂದ್ರ ಸರ್ಕಾರವು ಕೊಡಗಿನಲ್ಲಿರುವ ಆದಿವಾಸಿಗಳನ್ನು ಒಕ್ಕಲೆಬ್ಬಿಸಲು ಯಾವದೇ ಕ್ರಮ ಕೈಗೊಂಡಿಲ್ಲ. ಕೇಂದ್ರ ಸರ್ಕಾರವು ಆದಿವಾಸಿ ಮತ್ತು ಗಿರಿಜನರ ಅಭಿವೃದ್ಧಿಗೆ ಹಲವಾರು ಯೋಜನೆಗಳು ಜಾರಿಗೆ ತಂದಿದ್ದು ಶಾಲಾ ಮಕ್ಕಳಿಗೆ ವಸತಿ ಶಾಲೆ, ಹಾಡಿಗಳಲ್ಲಿ ತಂಗಲು ನಿವಾಸಗಳು, ವಿದ್ಯುತ್ ಸಂಪರ್ಕ, ಕುಡಿಯುವ ನೀರು, ರಸ್ತೆ ಹೀಗೆ ಹತ್ತು ಹಲವು ಮೂಲಭೂತ ಸೌಕರ್ಯಗಳನ್ನು ಹಂತಹಂತವಾಗಿ ನಿರ್ಮಾಣ ಮಾಡಿಕೊಡುತ್ತಿದೆ. ಅರಣ್ಯದಲ್ಲಿ ವಾಸ ಮಾಡುವ ಆದಿವಾಸಿಗಳ ನೋವುಗಳನ್ನು ಅರಿಯಲು ಸ್ಥಳೀಯ ಆಡಳಿತ, ಜನಪ್ರತಿನಿಧಿಗಳು ಪಕ್ಷಾತೀತವಾಗಿ ಶ್ರಮವಹಿಸಿಬೇಕು. ಜನಾಂಗದ ಚುನಾಯಿತ ಪ್ರತಿನಿಧಿಗಳು ಸರ್ಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸಿ ಪ್ರಮುಖ ಪಾತ್ರ ವಹಿಸಿದಲ್ಲಿ ಆದಿವಾಸಿಗಳ ಅಭಿವೃದ್ಧಿ ಸಾಧ್ಯ ಎಂದರು.

- ಕೆ.ಕೆ.ಎಸ್. ವೀರಾಜಪೇಟೆ