ಮಡಿಕೇರಿ, ಏ. 12: ಸಿ-ವಿಜಿಲ್ ಮೊಬೈಲ್ ಆ್ಯಪ್ ಸದ್ಬಳಕೆ ಮಾಡಿಕೊಂಡು ಚುನಾವಣಾ ಅಕ್ರಮಗಳಿಗೆ ಕಡಿವಾಣ ಹಾಕಲು ಸಾರ್ವಜನಿಕರು ಸಹಕರಿಸುವಂತೆ ಸ್ವೀಪ್ ಸಮಿತಿ ಅಧ್ಯಕ್ಷರಾದ ಜಿ.ಪಂ. ಸಿ.ಇ.ಓ. ಕೆ. ಲಕ್ಷ್ಮಿಪ್ರಿಯಾ ಕೋರಿದ್ದಾರೆ. ಚುನಾವಣೆ ಸಂದರ್ಭ ಹಣ, ಮದ್ಯ ಮತ್ತಿತರ ವಸ್ತುಗಳನ್ನು ಹಂಚಿ ಮತದಾರರಿಗೆ ಆಮಿಷ ಒಡ್ಡುವ ಪ್ರಕರಣಗಳನ್ನು ನಿಯಂತ್ರಿಸಲು ಚುನಾವಣಾ ಆಯೋಗ ಸಾರ್ವಜನಿಕ ಸ್ನೇಹಿ ಆ್ಯಪ್ ರೂಪಿಸಿದ್ದು, ಇದನ್ನು ಸದ್ಬಳಕೆ ಮಾಡಿಕೊಳ್ಳುವಂತಾಗಬೇಕು ಎಂದು ಅವರು ಹೇಳಿದರು. ಸಿ-ವಿಜಿಲ್ ಆ್ಯಪ್‍ನ ಮೂಲಕ ಚುನಾವಣಾ ಅಕ್ರಮಗಳ ಬಗ್ಗೆ ದೂರು ನೀಡಿದರೆ ಅಂಥವರ ಹೆಸರನ್ನು ಗೌಪ್ಯವಾಗಿ ಇಡಲಾಗುವದು. ಅಕ್ರಮಗಳಿಗೆ ಸಂಬಂಧಿತ ಛಾಯಾಚಿತ್ರ, ವೀಡಿಯೋ ಮತ್ತಿತರ ವಿವರಗಳನ್ನು ಆ್ಯಪ್ ಮೂಲಕ ಕಳುಹಿಸಿದ 15 ನಿಮಿಷದಲ್ಲಿ ಕ್ಷಿಪ್ರ ತನಿಖಾ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, 100 ನಿಮಿಷಗಳ ಒಳಗೆ ಮಾಹಿತಿ ನೀಡ ಲಾಗುತ್ತದೆ ಎಂದರು. ಭಾರತ ಚುನಾವಣಾ ಆಯೋಗವು ಈ ಬಾರಿಯು ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಮಾದರಿ ನೀತಿ ಸಂಹಿತೆ ಹಾಗೂ ಅಭ್ಯರ್ಥಿ ಗಳ ಚುನಾವಣಾ ವೆಚ್ಚ ಕುರಿತು ನಿಗಾವಹಿಸಲು ಸಿ-ವಿಜಿಲ್ ಎಂಬ ಮೊಬೈಲ್ ಆ್ಯಪ್‍ನ್ನು ಪರಿಚಯಿಸಿದೆ. ನಾಗರಿಕರು ಸಿ-ವಿಜಿಲ್ ಆ್ಯಪ್ ಮೂಲಕ ದೂರು ದಾಖಲಿಸಿದ್ದಲ್ಲಿ ಸದರಿ ದೂರನ್ನು 100 ನಿಮಿಷ ದೊಳಗೆ ಇತ್ಯರ್ಥಗೊಳಿಸಲಾಗುವದು.
ಸಿ-ವಿಜಿಲ್ ಆ್ಯಪ್‍ನ್ನು ಗೂಗಲ್ ಪ್ಲೇಸ್ಟೋರ್ ಮೂಲಕ ಡೌನ್‍ಲೋಡ್ ಮಾಡಿಕೊಂಡು ಫೋಟೋ ಅಥವಾ ವೀಡಿಯೋ ಮೂಲಕ ದೂರನ್ನು ದಾಖಲಿಸಬಹುದು. ಸಿ-ವಿಜಿಲ್ ಆ್ಯಪ್ ಮಾದರಿ ಚುನಾವಣಾ ನೀತಿ ಸಂಹಿತೆ ಜಾರಿಯಾದ ದಿನದಿಂದಲೇ ಕಾರ್ಯಚರಣೆಯಲ್ಲಿದೆ. ಮಾದರಿ ನೀತಿ ಸಂಹಿತೆ ಅವಧಿಯಲ್ಲಿ ನಿಯಮ ಉಲ್ಲಂಘನೆ ಮಾಡುವ ವ್ಯಕ್ತಿ, ಗುಂಪು, ಸ್ಥಳದ ಫೋಟೋ, ವೀಡಿಯೋ ಗಳನ್ನು ಈ ಆ್ಯಪ್‍ನಲ್ಲಿ ದಾಖಲಿಸಿ, ಜಿಲ್ಲಾ ಚುನಾವಣಾ ಘಟಕಕ್ಕೆ ನಾಗರಿಕರು ರವಾನಿಸಬಹುದು.
ನಾಗರಿಕರು ಕಳುಹಿಸುವ ಈ ದೂರುಗಳು ಸಮೀಪದ ಜಿಲ್ಲಾ ಚುನಾವಣಾ ಆಯೋಗದ ಕಂಟ್ರೋಲ್ ರೂಂನಲ್ಲಿ ದಾಖಲಾಗುತ್ತದೆ. ಕಳುಹಿ ಸುವ ಫೋಟೋ ಅಥವಾ ವೀಡಿಯೋದಲ್ಲಿ ಚಿತ್ರೀಕ ರಿಸಿದ ಸ್ಥಳದ ಮಾಹಿತಿ ಜಿಪಿಆರ್‍ಎಸ್ ಮೂಲಕ ಚುನಾವಣಾ ಆಯೋಗಕ್ಕೆ ತಿಳಿಯುತ್ತದೆ. ದೂರಿನ ಸ್ಥಳ ಮಾಹಿತಿಯನ್ನು ಆಧರಿಸಿ ಆ ಸ್ಥಳಕ್ಕೆ ಸಮೀಪವಿರುವ ನೀತಿ ಸಂಹಿತೆ ನಿಗಾ ತಂಡದ ಅಧಿಕಾರಿಗೆ ದೂರು ರವಾನೆಯಾಗುತ್ತದೆ. ದೂರು ಬಂದ 5 ನಿಮಿಷದ ಅವಧಿಯೊಳಗೆ ಜಿಲ್ಲಾ ಕಂಟ್ರೋಲ್ ರೂಂ ಅಧಿಕಾರಿಗಳ ತಂಡಕ್ಕೆ ದೂರು ವರ್ಗಾಯಿಸುತ್ತಾರೆ.
ದೂರು ಕೈಗೆತ್ತಿಕೊಂಡ ಅಧಿಕಾರಿಗಳ ತಂಡ 100 ನಿಮಿಷಗಳ ಕಾಲಾವಧಿಯೊಳಗೆ ಪರಿಶೀಲನೆ ನಡೆಸಿ ವರದಿ ಸಲ್ಲಿಸುತ್ತದೆ. ದೂರು ದಾಖಲಾದ 100 ನಿಮಿಷದೊಳಗೆ ದೂರುದಾರ ನಾಗರಿಕನಿಗೆ ದೂರಿನ ತನಿಖೆಯ ಮಾಹಿತಿಯ ಸ್ಥಿತಿ ಸಿ-ವಿಜಿಲ್ ಆ್ಯಪ್ ಮೂಲಕ ರವಾನೆ ಯಾಗುತ್ತದೆ. ನಾಗರಿಕರು ಸಿ-ವಿಜಿಲ್ ಆ್ಯಪ್‍ನ್ನು ಡೌನ್‍ಲೋಡ್ ಮಾಡಿ ಕೊಂಡು ಮಾದರಿ ನೀತಿ ಸಂಹಿತೆ ಉಲ್ಲಂಘನೆ ಕಂಡುಬಂದಲ್ಲಿ ಸಿ-ವಿಜಿಲ್ ಆ್ಯಪ್ ಮೂಲಕ ದೂರು ದಾಖಲಿಸಬಹುದಾಗಿದೆ ಎಂದು ಸ್ವೀಪ್ ಸಮಿತಿ ಅಧ್ಯಕ್ಷರಾದ ಕೆ. ಲಕ್ಷ್ಮಿಪ್ರಿಯಾ ಕೋರಿದ್ದಾರೆ.