ಮಡಿಕೇರಿ, ಏ. 13: ಹುಲಿತಾಳದ ಡಾ. ಭೀಮ್‍ರಾವ್ ಅಂಬೇಡ್ಕರ್ ಕ್ರೀಡಾ ಸಮಿತಿ ಮತ್ತು ದಲಿತ ನಾಗಾಸ್ ಕ್ರೀಡಾ ಅಕಾಡೆಮಿ ವತಿಯಿಂದ 18 ನೇ ವರ್ಷದ ಜೈ ಭೀಮ್ ಕ್ರಿಕೆಟ್ ಕಪ್ 2019 ಪಂದ್ಯಾಟಕ್ಕೆ ಮೂರ್ನಾಡು ವಿದ್ಯಾಸಂಸ್ಥೆ ಮೈದಾನದಲ್ಲಿ ಶುಕ್ರವಾರ ಚಾಲನೆ ದೊರೆಯಿತು.

ಡಾ. ಭೀಮ್‍ರಾವ್ ಅಂಬೇಡ್ಕರ್ ಕ್ರೀಡಾ ಸಮಿತಿ ಹಾಗೂ ಹುಲಿತಾಳದ ದಲಿತ ನಾಗಾಸ್ ಕ್ರೀಡಾ ಅಕಾಡೆಮಿ ಉಪ ಕಾರ್ಯದರ್ಶಿ ಪ್ರವೀಣ್ ಹೆಚ್.ಬಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ನಗರಸಭೆ ಸದಸ್ಯ ಹೆಚ್.ಎಂ ನಂದಕುಮಾರ್ ಉದ್ಘಾಟಿಸಿದರು.

ಕ್ರಿಕೆಟ್ ಪಂದ್ಯಾಟದಲ್ಲಿ ಪಾಲ್ಗೊಳ್ಳಲು 40 ತಂಡಗಳು ಹೆಸರು ನೋಂದಾಯಿಸಿಕೊಂಡಿರುವದು ಸಂತಸದ ವಿಚಾರ. ಮುಂದಿನ ದಿನದಲ್ಲಿಯೂ ಇಂತಹ ಕ್ರೀಡಾಕೂಟ ಹೆಚ್ಚು ನಡೆಯುವಂತಾಗಲಿ ಎಂದು ಆಶಿಸಿದರು.

ದಸಂಸದ ಜಿಲ್ಲಾ ಸಂಚಾಲಕ ಹಾನಗಲ್ ಜೋಯಪ್ಪ ಮಾತನಾಡಿ, ಡಾ. ಭೀಮರಾವ್ ಅಂಬೇಡ್ಕರ್ ಅವರ ಹಿತನುಡಿಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಂಡು, ಅಂಬೇಡ್ಕರ್ ಚಿಂತನೆಗಳೊಂದಿಗೆ ಮುನ್ನಡೆಯಬೇಕೆಂದು ಕರೆ ನೀಡಿದರು.

ಯುವಜನ ಒಕ್ಕೂಟ ಅಧ್ಯಕ್ಷ ಪಿ.ಪಿ ಸುಕುಮಾರ್ ಮಾತನಾಡಿದರು.

ವೇದಿಕೆಯಲ್ಲಿ ಹುಲಿತಾಳದ ಡಾ. ಭೀಮಾರಾವ್ ಅಂಬೇಡ್ಕರ್ ಕ್ರೀಡಾ ಸಮಿತಿ ಹಾಗೂ ದಲಿತ ನಾಗಾಸ್ ಕ್ರೀಡಾ ಅಕಾಡೆಮಿ ಅಧ್ಯಕ್ಷ ಹೆಚ್.ಪಿ ನಿತೀನ್, ಹಾಕತ್ತೂರು ಗ್ರಾಮ ಪಂಚಾಯಿತಿ ಸದಸ್ಯೆ ಪೂವಮ್ಮ ಹೆಚ್.ಪಿ, ಸಾಮಾಜಿಕ ಪರಿವರ್ತನಾ ಚಳುವಳಿಯ ಪ್ರಮುಖ ಮೋಹನ್ ಮೌರ್ಯ ಸಿ.ಜೆ, ನಿವೃತ್ತ ಮುಖ್ಯ ಶಿಕ್ಷಕಿ ಸಾವಿತ್ರಿ ಹೆಚ್. ಎಸ್ ಇದ್ದರು.

ರಾಯಲ್ಸ್ ಅಪ್ಪಂಗಳ ಹಾಗೂ ಸೂಪರ್ ಡ್ರೀಮ್ ಕಿಲ್ಲರ್ಸ್ ಹುಲಿತಾಳ ತಂಡದ ನಡುವೆ ಪ್ರದರ್ಶನ ಪಂದ್ಯ ನಡೆಯಿತು. ಪಂದ್ಯಾಟದಲ್ಲಿ ಅಪ್ಪಂಗಳ ತಂಡ ಜಯ ಸಾಧಿಸಿತು. ಪುರುಷರ ಕಬ್ಬಡಿ ಪಂದ್ಯಾಟಕ್ಕೆ 23 ಹಾಗೂ ಮಹಿಳೆಯರ ಥ್ರೋ ಬಾಲ್ ಪಂದ್ಯಾಟಕ್ಕೆ 4 ತಂಡ ಹೆಸರು ನೋಂದಾಯಿಸಿದೆ. ಮೂರು ವಿಭಾಗದ ಫೈನಲ್ ಪಂದ್ಯಾಟ ತಾ. 14ರಂದು (ಇಂದು) ನಡೆಯಲಿದೆ.