ಸಿದ್ದಾಪುರ, ಏ.13: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಿದ್ದಾಪುರ ಪೊಲೀಸ್ ಇಲಾಖೆ ವತಿಯಿಂದ ನೆಲ್ಯಹುದಿಕೇರಿ ಸಹಕಾರ ಸಂಘದ ಸಭಾಂಗಣದಲ್ಲಿ ಚುನಾವಣಾ ಮುಂಜಾಗ್ರತಾ ಸಭೆಯನ್ನು ನಡೆಸಲಾಯಿತು.

ಸಭೆಯಲ್ಲಿ ಠಾಣಾಧಿಕಾರಿ ಮಹೇಶ್ ಮಾತನಾಡಿ, ನೆಲ್ಯಹುದಿಕೇರಿ ಮತ್ತು ಸಿದ್ದಾಪುರ ಠಾಣಾ ವ್ಯಾಪ್ತಿಯಲ್ಲಿ ಮತದಾರರು ಅಧಿಕ ಸಂಖ್ಯೆಯಲ್ಲಿದ್ದು, ಶಾಂತಿಯುತ ಮತದಾನಕ್ಕೆ ಪೊಲೀಸ್ ಇಲಾಖೆ ಮನವಿ ಮಾಡುತ್ತದೆ. ಇಲಾಖೆಯಿಂದ ಮುಂಜಾಗ್ರತಾ ಕ್ರಮಗಳನ್ನು ತೆಗೆದು ಕೊಂಡಿದ್ದೇವೆ. ಯಾರು ಕೂಡಾ ಯಾವದೇ ಅಹಿತಕರ ಘಟನೆಗಳಿಗೆ ಆಸ್ಪದ ಕೊಡದೆ ಶಾಂತಿಯುತವಾಗಿ ಮತದಾನ ಮಾಡಬೇಕೆಂದರು. ಯಾವದೇ ಪಕ್ಷ ಅಥವಾ ವ್ಯಕ್ತಿಗಳು ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿಸಿ ಕೊಂಡರೆ ಅವರ ವಿರುದ್ಧ ನಿರ್ದಾಕ್ಷಣ್ಯ ಕ್ರಮ ಜರುಗಿಸುವದಾಗಿ ಎಚ್ಚರಿಸಿದರು.

ನೆಲ್ಯಹುದಿಕೇರಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ನಂಜುಂಡಸ್ವಾಮಿ ಮಾತನಾಡಿ, ಶೇಕಡ ನೂರರ ಮತದಾನ ಆಗಲಿ ಎಂಬ ಉದ್ದೇಶದಿಂದ ಜಿಲ್ಲಾಡಳಿತ ಹಾಗೂ ಚುನಾವಣೆ ಅಧಿಕಾರಿಗಳಿಂದ ನಾನಾ ಕಾರ್ಯಕ್ರಮ ಹಮ್ಮಿಕೊಂಡಿದ್ದು. ಮತದಾರರಿಗೆ ಮತದಾನದ ಜಾಗೃತಿ ಮೂಡಿಸಲಾಗಿದೆ. ಪ್ರತಿಯೊಬ್ಬರೂ ತಪ್ಪದೆ ಮತ ಚಲಾಯಿಸಬೇಕೆಂದ ಅವರು, ಗ್ರಾಮದ ಬಹುತೇಕ ಮತದಾರರು ಗ್ರಾಮದಿಂದ ಹೊರಗಡೆ ಇದ್ದಾರೆ. ಹಾಗಾಗಿ ಸಂಬಂಧಿಕರು ಅವರನ್ನು ಮತದಾನ ಮಾಡಲು ಬರುವಂತೆ ಮನವಿ ಮಾಡಿ, ಎಲ್ಲರೂ ಕೂಡಾ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಮಾಡಬೇಕೆಂದರು. 60 ವರ್ಷ ದಾಟಿದವರು ಹಾಗೂ ಅಂಗವಿಕಲರಿದ್ದಲ್ಲಿ ಗಾ.್ರಪಂ ಗಮನಕ್ಕೆ ತಂದರೆ ಅವರನ್ನು ಮತಗಟ್ಟೆಗೆ ಕರೆದೊಯ್ದು ಮತದಾನ ಮಾಡಿಸಿದ ಬಳಿಕ ವಾಪಸ್ ಮನೆಗೆ ಕಳುಹಿಸಿಕೊಡಲಾಗುವದು. ಇದಕ್ಕಾಗಿ ಚುನಾವಣಾ ಆಯೋಗದ ವತಿಯಿಂದ ವಾಹನ ಮತ್ತು ವ್ಹೀಲ್ ಚೇರ್ ವ್ಯವಸ್ಥೆ ಮಾಡಲಾಗಿದೆ ಎಂದರು.

ಈ ಸಂದರ್ಭ ಗ್ರಾಪಂ ಉಪಾಧ್ಯಕ್ಷೆ ಸಫಿಯಾ ಮುಹಮ್ಮದ್, ಸದಸ್ಯ ಅಫ್ಸಲ್, ಶುಕೂರ್, ಗ್ರಾಮಸ್ಥರಾದ ವಿಜು, ಬಶೀರ್, ಪದ್ಮನಾಭ, ಅನಿಲ್, ಮುಹಮ್ಮದ್ ಇತರರು ಇದ್ದರು.