ವೀರಾಜಪೇಟೆ, ಏ.12: ವೀರಾಜಪೇಟೆಗೆ ಸುರಿದ ಮುಂಗಾರು ಗುಡುಗು ಮಿಂಚು ಸಹಿತ ಮಳೆಗೆ ಕೆಲವು ಮನೆಗಳು ಧರೆಗುರುಳಿ ಜಖಂಗೊಂಡ ಘಟನೆ ನೆಹರು ನಗರದಲ್ಲಿ ನಡೆದಿದೆ. ಗುರುವಾರ ರಾತ್ರಿ ವೀರಾಜಪೇಟೆ ಪಟ್ಟಣಕ್ಕೆ ಸುರಿದ ಭಾರೀ ಮಳೆಗೆ ವಾರ್ಡ್ ಸಂಖ್ಯೆ 7ರ ನೆಹರು ನಗರದಲ್ಲಿ ರಾಜಾ ಕಾಲುವೆಗಾಗಿ ನಿರ್ಮಿಸಿದ ತಡೆಗೋಡೆ ಕುಸಿದ ಪರಿಣಾಮ ತಡೆಗೋಡೆ ಪಕ್ಕದಲ್ಲಿದ್ದ ಎಂ.ಪಿ ಅಫ್ತಾಬ್, ಪೈರೋಜ್ ಎಂ.ಪಿ, ರಫಿಕ್ ಅಹಮದ್ ಇವರುಗಳ ಮೂರು ಮನೆಗಳಿಗೆ ಜಖಂ ಆಗಿದೆ. ಉಳಿದ ಮನೆಗಳು ಅಪಾಯದ ಅಂಚಿನಲ್ಲಿದ್ದು ಯಾವ ಸಂದರ್ಭದಲ್ಲಿ ಧರೆಗುರುಳುತ್ತದೆ ಎಂಬ ಆತಂಕ ಎದುರಾಗಿದೆ. 40 ದಿನಗಳ ಹಿಂದೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ನೆಹರು ನಗರಕ್ಕೆ ಭೇಟಿ ನೀಡಿ ಬಿರುಕುಗೊಂಡು
(ಮೊದಲ ಪುಟದಿಂದ) ಅಪಾಯದಲ್ಲಿರುವ ಭಾರೀ ತಡೆಗೋಡೆಯನ್ನು ಖುದ್ದು ವೀಕ್ಷಿಸಿ ಇದರ ಪರಿಹಾರದ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದ್ದರು. 2018ರಲ್ಲಿ ಆಗಸ್ಟ್ ತಿಂಗಳಲ್ಲಿ ಸುರಿದ ಭಾರೀ ಮಳೆಗೆ ಬೆಟ್ಟ ಪ್ರದೇಶಗಳಾದ ನೆಹರುನಗರ, ಅರಸು ನಗರ, ಅಯ್ಯಪ್ಪ ಬೆಟ್ಟ, ಮಲೆತಿರಿಕೆ ಬೆಟ್ಟಗಳಲ್ಲಿ ಅನೇಕ ಮನೆಗಳು ಜಖಂಗೊಂಡು 13 ಮನೆಗಳು ನೆಲಕಚ್ಚಿದ್ದವು.
ಬೆಟ್ಟ ಪ್ರದೇಶಗಳಲ್ಲಿ ಅನೇಕ ಮನೆಗಳು ಜಖಂಗೊಂಡಿದ್ದು ಇದನ್ನು ಮುಂದಿನ ಮಳೆಗಾಲದೊಳಗೆ ದುರಸ್ತಿ ಪಡಿಸದಿದ್ದರೆ ಎಲ್ಲ ಮನೆಗಳು ಸರದಿ ಪ್ರಕಾರ ಕುಸಿಯುವ ಸಾಧ್ಯತೆ ಇದೆ. ಬೆಟ್ಟ ಪ್ರದೇಶದಲ್ಲಿ ಕಳೆದ ವರ್ಷದ ಗಾಳಿ ಮಳೆಯಿಂದ ಮನೆ ಜಖಂ ಆದ ಬಗ್ಗೆ ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ, ಆಡಳಿತಾಧಿಕಾರಿ ತಹಶೀಲ್ದಾರ್ ಅವರಿಗೆ ವರದಿ ನೀಡಿದ್ದರು. ಇದಕ್ಕೆ ಸಂಬಂಧಿಸಿದಂತೆ ರೆವಿನ್ಯೂ ಅಧಿಕಾರಿಗಳು ತಾಲೂಕು ಕಚೇರಿಯ ಪರಿಹಾರ ವಿಭಾಗಕ್ಕೆ ವರದಿ ಸಲ್ಲಿಸಿದ್ದಾರೆ.
ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷೆ ಹಾಗೂ ನೆಹರುನಗರದ ಏಳನೇ ವಾರ್ಡ್ನ ಸದಸ್ಯೆಯೂ ಆಗಿರುವ ಮನೆಯಪಂಡ ದೇಚಮ್ಮ ಅವರು ತಡೆಗೋಡೆ ಕುಸಿದ ಮನೆಗಳು ಜಖಂಗೊಂಡ ಸ್ಥಳಕ್ಕೆ ಇಂದು ಬೆಳಿಗ್ಗೆ ಭೇಟಿ ನೀಡಿ ಪರಿಶೀಲಿಸಿದರು. ಜಿಲ್ಲಾಧಿಕಾರಿಗಳು ನೆಹರು ನಗರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ನೆಹರು ನಗರದಲ್ಲಿ ಭಾರೀ ತಡೆಗೋಡೆ ಕುಸಿಯುವ ಸ್ಥಳವನ್ನು ತೋರಿಸಿದ್ದು, ಇದರ ಮುಂದಿನ ಕ್ರಮದ ಭರವಸೆಯನ್ನು ದೇಚಮ್ಮ ಅವರಿಗೆ ನೀಡಿದನ್ನು ಇಂದು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ದೇಚಮ್ಮ ‘ಶಕ್ತಿ’ಗೆ ತಿಳಿಸಿದ್ದಾರೆ.