ಸೋಮವಾರಪೇಟೆ, ಏ. 12: ಪ್ರಾಕೃತಿಕ ವಿಕೋಪದಿಂದ ಕಂಗೆಟ್ಟಿರುವ ಕಾಫಿ ಬೆಳೆಗಾರರಿಗೆ ಸರ್ಕಾರದಿಂದ ವಿತರಿಸುತ್ತಿರುವ ಪರಿಹಾರ ಸಮರ್ಪಕವಾಗಿಲ್ಲ ಎಂದು ಆರೋಪಿಸಿರುವ, ಕಾಫಿ ಬೆಳೆಗಾರರ ಹೋರಾಟ ಸಮಿತಿ ಪ್ರಮುಖರು, ಸಮರ್ಪಕವಾಗಿ ಪರಿಹಾರ ವಿತರಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಕಾಫಿ ಬೆಳೆಗಾರರು ಪ್ರಾಕೃತಿಕ ವಿಕೋಪದಿಂದ ನಲುಗಿದ್ದು, ಕೇಂದ್ರ ಸರ್ಕಾರ ಕಾಫಿ ಮಂಡಳಿಯ ಮೂಲಕ ಜಿಲ್ಲೆಯ ಸಂತ್ರಸ್ತರಿಗೆ 8 ಕೋಟಿ ಪರಿಹಾರ ಸಂದಾಯವಾಗಿರುವದಾಗಿ ಕಂದಾಯ ಅಧಿಕಾರಿಗಳು ತಿಳಿಸಿದ್ದು, ಈ ಪರಿಹಾರ ಹಣದಲ್ಲಿ 1 ಹೆಕ್ಟೇರ್ ಬೆಳೆ ನಷ್ಟಕ್ಕೆ 35,000 ಪರಿಹಾರ ಹಂಚಿಕೆಯಾಗಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಆದರೆ ಈ ಪರಿಹಾರ ನಿಜವಾದ ಸಂತ್ರಸ್ತ ಬೆಳೆಗಾರರಿಗೆ ಲಭಿಸಿಲ್ಲ ಎಂದು ಸಮಿತಿಯ ವಕ್ತಾರ ಶ್ಯಾಂಪ್ರಸಾದ್ ಆರೋಪಿಸಿದ್ದಾರೆ.
ಆರ್‍ಟಿಸಿಯಲ್ಲಿ ಬರುವ ಪಟ್ಟೆದಾರರು ಮತ್ತು 6ನೇ ಕಾಲಂನಲ್ಲಿ ಕುಟುಂಬದ ಸದಸ್ಯರ ಪಟ್ಟಿ ದಾಖಲಾಗಿದ್ದು, ಪರಿಹಾರ ಹಣ ಕೇವಲ ಪಟ್ಟೆದಾರರ ಹೆಸರಿಗೆ ಸಂದಾಯವಾಗುತ್ತಿದೆ. ಆದರೆ ಕುಟುಂಬದ ಸದಸ್ಯರು 1ಹೆಕ್ಟೇರ್‍ನಲ್ಲಿ ಪಾಲುಪಾರಿಕತ್ತು ಮಾಡಿಸಿಕೊಳ್ಳದೇ ಪ್ರತ್ಯೇಕವಾಗಿ ಕೃಷಿ ಕಾರ್ಯ ಕೈಗೊಂಡಿದ್ದಾರೆ. ಆದರೆ ಇಂತಹ ಬೆಳೆಗಾರರಿಗೆ ಸರ್ಕಾರದ ಪರಿಹಾರ ಲಭಿಸುತ್ತಿಲ್ಲ ಎಂದು ಸಮಿತಿಯ ಅಧ್ಯಕ್ಷ ಎಂ.ಸಿ. ಮುದ್ದಪ್ಪ ಹೇಳಿದ್ದಾರೆ.