ಗೋಣಿಕೊಪ್ಪ ವರದಿ, ಏ. 13: ಭಗತ್‍ಸಿಂಗ್ ಯುವಕ ಸಂಘ ಹಾಗೂ ಕರ್ನಾಟಕ ನಾಯರ್ ಸೊಸೈಟಿ ಗೋಣಿಕೊಪ್ಪ ಶಾಖೆ ವತಿಯಿಂದ ಬೈಪಾಸ್ ರಸ್ತೆಯಲ್ಲಿನ ಮೈದಾನದಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ಫುಟ್ಬಾಲ್ ಪಂದ್ಯಾಟದಲ್ಲಿ ಕುಂದ ಬಿಸಿಎ ತಂಡ ಪ್ರಥಮ ಸ್ಥಾನ ಪಡೆದುಕೊಂಡಿದೆ. ಫೈನಲ್‍ನಲ್ಲಿ ಸೋಲನುಭವಿಸಿದ ಪಾಲಿಬೆಟ್ಟ ರೋಜರ್ ಎಫ್‍ಸಿ ತಂಡವು ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

ವಿಜೇತ ಕುಂದ ತಂಡವು ಫೈನಲ್‍ನಲ್ಲಿ 2-1 ಗೋಲುಗಳ ಅಂತರದಲ್ಲಿ ಜಯ ಸಾಧಿಸಿ ಕಪ್ ಗೆದ್ದು ಕೊಂಡಿತು. ಪಾಲಿಬೆಟ್ಟ ರೋಜರ್ ಎಫ್‍ಸಿ ತಂಡವು ದ್ವಿತೀಯ ಬಹುಮಾನ ಪಡೆದುಕೊಂಡಿತು. ಅಮ್ಮತ್ತಿ ಮಿಲನ್ ಬಾಯ್ಸ್ ತಂಡವು ತೃತೀಯ ಸ್ಥಾನ ದಕ್ಕಿಸಿಕೊಂಡಿತು. ಟ್ರೋಫಿಯೊಂದಿಗೆ ವಿಜೇತ ತಂಡಕ್ಕೆ ರೂ. 25 ಸಾವಿರ, ದ್ವಿತೀಯ ತಂಡಕ್ಕೆ ರೂ. 15 ಸಾವಿರ ನಗದು ಬಹುಮಾನ ನೀಡಲಾಯಿತು. ಟೂರ್ನಿಯಲ್ಲಿ 16 ತಂಡಗಳು ಪಾಲ್ಗೊಂಡಿದ್ದವು.

ಸಮಾರೋಪ ಕಾರ್ಯಕ್ರಮದಲ್ಲಿ ವಾಹನ ಚಾಲಕರ ಸಂಘದ ಅಧ್ಯಕ್ಷ ಸಿ.ಕೆ. ಬೋಪಣ್ಣ, ಉದ್ಯಮಿಗಳಾದ ಸಿ.ಕೆ. ಕಣ್ಣನ್, ಕಿಲನ್ ಗಣಪತಿ, ಭಗತ್‍ಸಿಂಗ್ ಯುವಕ ಸಂಘ ಅಧ್ಯಕ್ಷ ಸಿಂಗಿ ಸತೀಶ್, ಕೆ.ಎನ್.ಎಸ್.ಎಸ್. ಅಧ್ಯಕ್ಷ ಪಿ.ಜಿ. ಪವಿತ್ರನ್, ದಾನಿ ಮನೋಜ್, ಶಾರದಾಂಭ ದಸರಾ ಸಮಿತಿ ಅಧ್ಯಕ್ಷ ಬಿ.ಇ. ಕಿರಣ್ ಬಹುಮಾನ ವಿತರಿಸಿದರು. - ಸುದ್ದಿಪುತ್ರ