ಮಡಿಕೇರಿ, ಏ. 12: ಕಳೆದ ಲೋಕಸಭಾ ಚುನಾವಣೆ ಸಂದರ್ಭ ನೀಡಿದ್ದ ಭರವಸೆ ಗಳನ್ನು ಹುಸಿಗೊಳಿಸಿರುವ ಬಿಜೆಪಿ ಅಭ್ಯರ್ಥಿ ಮರಳಿ ಆಯ್ಕೆಯಾದಲ್ಲಿ ಕೊಡಗಿನ ಬೆಳೆಗಾರರು, ಕಾರ್ಮಿಕ ಸಮೂಹ ಹಾಗೂ ಆದಿವಾಸಿ ಗಳು ಮತ್ತಷ್ಟು ಸಂಕಷ್ಟವನ್ನು ಎದುರಿಸಬೇಕಾಗುತ್ತದೆ ಎಂದು ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಡಾ. ಇ.ರ. ದುರ್ಗಾಪ್ರಸಾದ್ ಆತಂಕ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಲೋಕಸಭಾ ಚುನಾವಣೆಯ ಸಂದರ್ಭ ಬಿಜೆಪಿ ಕೊಡಗಿಗೆ ಸೀಮಿತವಾದ ವಿಚಾರಗಳನ್ನು ಒಳಗೊಂಡ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿತ್ತು. ಅದರಲ್ಲಿ ತಾವು ಅಧಿಕಾರಕ್ಕೆ ಬಂದಲ್ಲಿ ಕಸ್ತೂರಿ ರಂಗನ್ ವರದಿಯನ್ನು ಜಾರಿಗೆ ತರಲು ಬಿಡುವದಿಲ್ಲವೆಂದು ತಿಳಿಸಿತ್ತು. ಆದರೆ, ಅಧಿಕಾರಕ್ಕೆ ಬಂದು ಮೂರು ತಿಂಗಳ ಅವಧಿಯಲ್ಲೆ ಕೇಂದ್ರ ಸರ್ಕಾರ ಸರ್ವೋಚ್ಚ ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಿ, ಕಸ್ತೂರಿ ರಂಗನ್ ವರದಿಯನ್ನು ಜಾರಿಗೊಳಿಸುವದಾಗಿ ತಿಳಿಸಿದೆ. ಇದೀಗ ಈ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪ ಸಿಂಹ ಅವರು, ಕಸ್ತೂರಿ ರಂಗನ್ ವರದಿ ಜಾರಿ ಯಾಗದಂತೆ ತಡೆ ಹಿಡಿದಿದ್ದೇನೆಂದು ಅಪ್ಪಟ ಹೇಳುತ್ತಿದ್ದಾರೆ ಎಂದು ಆರೋಪಿಸಿದರು. ಇದೇ ರೀತಿ ಪರಿಸರ ಸೂಕ್ಷ್ಮ ಪ್ರದೇಶಗಳ ರಚನೆಗೆ ಅವಕಾಶ ನೀಡುವದಿಲ್ಲವೆಂದು ಸಂಸದರು ತಿಳಿಸಿದ್ದರಾದರು, ಅದಾಗಲೆ ಕೊಡಗಿನ ತಲಕಾವೇರಿ, ಬ್ರಹ್ಮಗಿರಿ, ಪುಷ್ಪಗಿರಿಯನ್ನು ಸೂಕ್ಷ್ಮ ಪರಿಸರ ಪ್ರದೇಶಗಳೆಂದು ರಚಿಸಲಾಗಿದ್ದು, ನಾಗರಹೊಳೆಯನ್ನು ಸೂಕ್ಷ್ಮ ಪರಿಸರ ಪ್ರದೇಶವಾಗಿ ಘೋಷಿಸುವ ಪ್ರಕ್ರಿಯೆ ನಡೆದಿದೆ. ಜಿಲ್ಲೆಯ 26 ಗ್ರಾಮಗಳು ಸೂಕ್ಷ್ಮ ಪರಿಸರ ಪ್ರದೇಶಕ್ಕೆ ಒಳಪಟ್ಟಿದ್ದು, ಇವುಗಳ ಜಾರಿಯನ್ನು ತಡೆಯಬೇಕಿದ್ದ ಸಂಸದ ಪ್ರತಾಪ ಸಿಂಹ ಅವರು ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿಲ್ಲ ವೆಂದು ದುರ್ಗಾ ಪ್ರಸಾದ್ ಟೀಕಿಸಿದರು.

ಡಾ. ಕಸ್ತೂರಿ ರಂಗನ್ ವರದಿಗೆ ಸಂಬಂಧಿಸಿದಂತೆ ಆರು ರಾಜ್ಯಗಳ ಜನಪ್ರತಿನಿಧಿಗಳ ಸಭೆಯಲ್ಲಿಯೂ ಪಾಲ್ಗೊಳ್ಳದ ಪ್ರತಾಪ ಸಿಂಹ ಅವರು ಕರ್ತವ್ಯಚ್ಯುತಿಯನ್ನು ಎಸಗಿದ್ದಾರೆ ಎಂದು ಆರೋಪಿಸಿದರು.

ಕೊಡಗಿನ ಆರ್ಥಿಕತೆಯ ಬೆನ್ನೆಲುಬಾಗಿರುವ ಕರಿಮೆಣಸಿನ ಧಾರಣೆ ದಿನದಿಂದ ದಿನಕ್ಕೆ ಕುಸಿತಕ್ಕೆ ಒಳಗಾಗುತ್ತಿದ್ದು, ಇದಕ್ಕೆ ಕೇಂದ್ರ ಸರಕಾರ ಕಾರಣ ಎಂದರು. ಡಾ. ಸ್ವಾಮಿನಾಥನ್ ಸಮಿತಿಯ ವರದಿಯ ಶಿಫಾರಸ್ಸಿನಂತೆ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಘೋಷಿಸುವ ಭರವಸೆಯಿಂದಲೂ ಬಿಜೆಪಿ ವಿಮುಖವಾಗಿದ್ದು, ಕೊಟ್ಟ ಮಾತಿನಂತೆ ನಡೆದುಕೊಳ್ಳದೆ ಕೃಷಿ ಕ್ಷೇತ್ರವನ್ನು ಸಂಕಷ್ಟಕ್ಕೆ ಸಿಲುಕಿಸಿದೆ.

ದೊಡ್ಡ ಉದ್ಯಮಿಗಳ ಕೋಟ್ಯಂತರ ಸಾಲವನ್ನು ಮನ್ನಾ ಮಾಡುವ ಕೇಂದ್ರ ಸರ್ಕಾರ, ಸಣ್ಣ ಮತ್ತು ಮಧ್ಯಮ ರೈತರ ರಕ್ಷಣೆಗೆ ಬಂದಿಲ್ಲವೆಂದು ದುರ್ಗಾಪ್ರಸಾದ್ ಆರೋಪಿಸಿದರು.

ಕಳೆದ ಲೋಕಸಭಾ ಚುನಾವಣೆ ಸಂದರ್ಭ ಪ್ರತಾಪ ಸಿಂಹ ಅವರು, ತಾನು ಆಯ್ಕೆಯಾದರೆ ಕೊಡಗಿಗೆ ರೈಲು ಸಂಪರ್ಕ ಕಲ್ಪಿಸುವದಾಗಿ ಭರವಸೆ ನೀಡಿದ್ದರು. ಆದರೆ ಇಲ್ಲಿಯವರೆಗೆ ಇದರ ಸುಳಿವಿಲ್ಲ, ಇದೀಗ ಚುನಾವಣಾ ಹಂತದಲ್ಲಿ ರೈಲ್ವೆಗೆ ಕೇಂದ್ರದ ಒಪ್ಪಿಗೆ ದೊರಕಿಸಿಕೊಂಡಿರುವದಾಗಿ ಜನರನ್ನು ಮೂರ್ಖರನ್ನಾಗಿ ಮಾಡಲು ಯತ್ನಿಸುತ್ತಿದ್ದಾರೆ ಎಂದು ಟೀಕಿಸಿದರು.

ಗೋಷ್ಠಿಯಲ್ಲಿ ಸಿಪಿಐಎಂ ಜಿಲ್ಲಾ ಸಂಘಟನಾ ಸಮಿತಿ ಸದಸ್ಯರುಗಳಾದ ಎ.ಸಿ. ಸಾಬು, ಹೆಚ್.ಬಿ. ರಮೇಶ್ ಹಾಗೂ ಎನ್.ಡಿ. ಕುಟ್ಟಪ್ಪ ಉಪಸ್ಥಿತರಿದ್ದರು.