ಮಡಿಕೇರಿ, ಏ. 12: ಈ ವಿಚಾರದಲ್ಲಿ ಹೆಚ್ಚೇನೂ ಬರೆಯಬೇಕೆಂದಿಲ್ಲ; ಚಿತ್ರಗಳೇ ಮುಂದಾಗಬಹುದಾದ ಬೆಳವಣಿಗೆ ಬಗ್ಗೆ ವಿವರಣೆ ನೀಡುತ್ತವೆ...

2018ರ ಆಗಸ್ಟ್ ಮಳೆ ದುರಂತ ಕೊಡಗು ಜಿಲ್ಲೆಯನ್ನು ಕನಿಷ್ಟ 10 ವರ್ಷಕ್ಕೆ ಹಿಂದಿಕ್ಕಿದೆ ಅನ್ನುವ ಕಹಿಯನ್ನು ನಾವೆಲ್ಲಾ ಅನುಭವಿಸು ತ್ತಿದ್ದೇವೆ. ಅಂದು ನೆಲಕಚ್ಚಿದ ವ್ಯಾಪಾರ ಉದ್ಯಮ ಇನ್ನೂ ಚೇತರಿಸಿಕೊಂಡಿಲ್ಲ. ಸಂಜೆ ತನಕದ ವ್ಯಾಪಾರದಲ್ಲಿ 250 ರೂಪಾಯಿ ಸಂಪಾದನೆ ಕೂಡಾ ಆಗಿಲ್ಲ ಎಂದು ಮರುಗುತ್ತಿರುವವರು ಇದ್ದಾರೆ; ಪ್ರತಿನಿತ್ಯದ ಅಕ್ಕಿ ಖರೀದಿಸಲೂ ಸಾಧ್ಯವಿಲ್ಲವೆನ್ನುವ ಆಟೋ ಮಾಲೀಕರಿದ್ದಾರೆ; ಬಾಡಿಗೆ ಓಡಿಸಲು ಖದೀದಿಸಿದ ಕಾರುಗಳನ್ನು ಗುತ್ತಿಗೆಗೆ ಕೊಟ್ಟವರಿದ್ದಾರೆ. ಅಂಗಡಿ ವ್ಯಾಪಾರ ವಿಲ್ಲದೆ ಬಾಗಿಲು ಮುಚ್ಚಿದವರಿದ್ದಾರೆ. ತಿಂಗಳ ಬಾಡಿಗೆ ಸರಿಯಾಗಿ ಬಾರದೆ ಮಳಿಗೆಗಳನ್ನು ಖಾಲಿ ಬಿಟ್ಟು ಸಾಲ ಪಾವತಿ ಮಾಡಲಾಗದೆ ಇರುವವರಿದ್ದಾರೆ. ಹೋಂಸ್ಟೇಗೆಂದು ಮನೆ ಕಟ್ಟಿ ಅತಿಥಿಗಳು ಬಾರದೆ ಮನೆಗಳನ್ನು ಮಾರಲು ಜಾಹೀರಾತು ನೀಡಿದವರಿದ್ದಾರೆ. ಬಾಡಿಗೆ ಮನೆಗಳನ್ನು ಪಡೆದು ವ್ಯಾಪಾರ ನಡೆಸುತ್ತಿದ್ದವರಲ್ಲಿ ಹಲವರು ನಾಪತ್ತೆಯಾಗಿದ್ದಾರೆ.ಜಿಲ್ಲೆಯಲ್ಲಿ ಕುಸಿದು ಹೋದ ಪ್ರವಾಸೋದ್ಯಮ ಚೇತರಿಕೆಗೊಳ್ಳಲೇ ಇಲ್ಲ. ಸುಮಾರು 5 ಸಾವಿರ ಲೀಟರ್ ಹಾಲು ಕಡಿಮೆ ಬೇಡಿಕೆಯಲ್ಲ್ಲಿದೆ, ಮದ್ಯ ಮಾರಾಟ ಕೂಡಾ ಕುಂಠಿತಗೊಂಡಿದೆ. ಅಡುಗೆ ಅನಿಲ ಸಿಲಿಂಡರ್‍ಗಳೂ ಮುಂದಿನಂತೆ ಖರೀದಿಯಾಗುತ್ತಿಲ್ಲ. ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸುಮಾರು 1 ಲಕ್ಷ ಮಂದಿ ಅವಲಂಬಿಸಿಕೊಂಡಿರುವ ಪ್ರವಾಸೋದ್ಯಮದ ಚೇತರಿಕೆಯ ಲಕ್ಷಣಗಳೂ ಕಾಣುತ್ತಿಲ್ಲ.

ಕಾಫಿ ಬೆಲೆ ಕುಸಿತ, ಕಾಳು ಮೆಣಸಿಗೆ ಸಿಗದ ದರದಿಂದ ತತ್ತರಿಸಿ ರುವ ಬೆಳೆಗಾರರು ಪರ್ಯಾಯ ಉದ್ಯಮವನ್ನೂ ಕಂಡುಕೊಳ್ಳಲಾಗದ ಪರಿಸ್ಥಿತಿ ಎದುರಾಗಿದೆ.

18ರ ಆಗಸ್ಟ್ ಹಲವಾರು ಜೀವಗಳನ್ನು ಬಲಿ ತೆಗೆದು ಕೊಂಡಿದ್ದರ ಜೊತೆ ನೂರಾರು ಮಂದಿಯನ್ನು ನಿರಾಶ್ರಿತರನ್ನಾಗಿ ಕಣ್ಣೀರಲ್ಲಿ ಮುಳುಗಿಸಿತು. ಇದರ ಪರಿಣಾಮದಿಂದ ಜಿಲ್ಲೆಯಲ್ಲಿ ಆವರಿಸಿದ ಮೌಢ್ಯ ಸಧ್ಯಕ್ಕೆ ದೂರವಾಗುವಂತಿಲ್ಲ.

ಅಂದು ಅದೆಷ್ಟೋ ಜೀವಹಾನಿ, ನೂರಾರು ಕುಸಿದ ಮನೆಗಳು, ಗುರುತೇ ಸಿಗದಂತೆ ಜಾರಿ ಹೋದ ತೋಟ, ಗದ್ದೆ, ರಸ್ತೆಗಳು ಬೆಳೆಗಾಗುವದರ ಒಳಗೆ ಹಲವು ಪ್ರದೇಶಗಳ ಭೌಗೋಳಿಕ ಸ್ಥಿತಿಯೇ ಬದಲಾಯಿತು.

ರಸ್ತೆಗಳೇನೋ ನಿರ್ಮಾಣ ಗೊಂಡವು; ಸೇತುವೆಗಳೇನೋ ರಿಪೇರಿಯಾದವು; ಆದರೆ ಜನರ ಬದುಕು? ಯಥಾಸ್ಥಿತಿಗೆ ಬರಲಾಗದ ಮನಸ್ಥಿತಿ?

ತಂಪಿನ ನಾಡು ಕೊಡಗು ಎಂದು ಬಂದವರು, ಬರಿ ಕಾಲಲ್ಲಿ ನೆಲ ಮುಟ್ಟಲಾಗದಷ್ಟು ಬಿಸಿಲಿನ ಪ್ರಖರತೆಯಿಂದ ವಾತಾವರಣ ದಲ್ಲೂ ಈ ಬಾರಿ ಏರುಪೇರು ಉಂಟಾಗಿ ರುವದು, ಅಂದಿನ ಪ್ರವಾಹದಲ್ಲಿ ನೀರಿನ ಮೂಲಗಳನ್ನೇ ಸೆಳೆದು ಕೊಂಡು ಹೋಗಿರುವ ಅಪಾಯಕಾರಿ

(ಮೊದಲ ಪುಟದಿಂದ) ಬೆಳವಣಿಗೆಯಲ್ಲಿ ಹಿಂದೆಂದೂ ಕಾಣದ ನೀರಿನ ಅಭಾವ; ಜಿಲ್ಲೆ ನೋವು ಅನುಭವಿಸುತ್ತಿರುವದು ವಾಸ್ತವ.

ಈ ಬಾರಿಯ ಮಳೆ ಆರಂಭವಾಗಲು ಇನ್ನೂ 30-40 ದಿನಗಳು ಮಾತ್ರ ಬಾಕಿ ಇವೆ. ಹಲವಷ್ಟು ತಗ್ಗು ಪ್ರದೇಶಗಳಲ್ಲಿ ಕಳೆದ ಬಾರಿ ತೊಂದರೆಗೆ ಒಳಗಾದ ಮನೆಗಳು ಬೀಳುವ ಸ್ಥಿತಿಯಲ್ಲಿವೆ. ಬಿರುಕು ಬಿಟ್ಟ ತಡೆಗೋಡೆಗಳು, ಕಟ್ಟಡಗಳು ಮುಂದೇನಾಗುತ್ತವೋ ಎಂಬ ಆತಂಕವಿದೆ.

ಪ್ರಕೃತಿಯ ಈ ಕೊಡುಗೆ ಒಂದೆಡೆಯಾದರೆ, ನಮ್ಮ ನಿರ್ಲಕ್ಷ್ಯದಿಂದ ಅಪಾಯವನ್ನು ಬರಮಾಡಿಕೊಳ್ಳುವ ಪರಿಸ್ಥಿತಿಗಳೂ ನಮ್ಮ ಕಣ್ಣ ಮುಂದಿವೆ.

ಹಳೇ ಖಾಸಗಿ ಬಸ್ ನಿಲ್ದಾಣ

ಸುಮಾರು 90 ಅಡಿ ಎತ್ತರ, 100 ಅಡಿ ಅಗಲದಲ್ಲಿರುವ ಹಿಂದಿನ ಖಾಸಗಿ ಬಸ್ ನಿಲ್ದಾಣ ಕಳೆದ ವರ್ಷ ಮಳೆಗೆ ಆಹುತಿಯಾಯಿತು. ಮೇಲಿನಿಂದ ಬಿದ್ದ ಬರೆ ಅಂಗಡಿ ಮಾಲೀಕರುಗಳನ್ನು ಬೀದಿಗೆ ತಂದು ನಿಲ್ಲಿಸಿತು. ಖಾಸಗಿ ಬಸ್ ನಿಲ್ದಾಣವನ್ನು ಸ್ಥಳಾಂತರಗೊಳಿಸಲು ಕಾರಣ ನೀಡಿತು.

ಅಂದಿನ ನಗರಸಭೆ ಅಧಿಕಾರಿಗಳು ಸರಿಯಾಗಿ ಅಂದಾಜುಪಟ್ಟಿ ಸಲ್ಲಿಸದೆ ಇದ್ದುದರಿಂದ ಕೇವಲ 1.07 ಕೋಟಿ ರೂಪಾಯಿಯನ್ನು ಅಂದಿನ ಜಿಲ್ಲಾಧಿಕಾರಿ ಮಳೆ ಪರಿಹಾರ ನಿಧಿಯಡಿ ನೀಡಿದರು. ಗುತ್ತಿಗೆದಾರನೊಬ್ಬನಿಗೆ ಕೆಲಸ ನೀಡಲಾಯಿತು. 90 ಅಡಿ ಎತ್ತರ ತಡೆಗೋಡೆ ಬದಲು 9 ಅಡಿ ಎತ್ತರಕ್ಕೆ ಮಾತ್ರ ಈ ಮೊತ್ತ ಸಾಕಾಗುವದು ಎಂದು ಗುತ್ತಿಗೆದಾರ ಹೇಳಿದರೂ ಅವರಿಗೇ ಕೆಲಸ ಒಪ್ಪಿಸಲಾಯಿತು.

ಅದೇ ಸಂದರ್ಭದಲ್ಲಿ ನಿವೃತ್ತ ಪಿಡಬ್ಲ್ಯುಡಿ ಹಿರಿಯ ಅಧಿಕಾರಿ ಸತ್ಯನಾರಾಯಣ್ ಅವರನ್ನು ಸಂಪರ್ಕಿಸಲಾಗಿ, ಹೊಸ ತಂತ್ರಜ್ಞಾನದಲ್ಲಿ ಕಡಿಮೆ ಮೊತ್ತದಲ್ಲಿ ತಡೆಗೋಡೆ ನಿರ್ಮಿಸಬಹುದೆಂದರು. ಅಂದಿನ ಜಿಲ್ಲಾಧಿಕಾರಿ ಅವರ ಅಣತಿಯಂತೆÀ ಈ ಅಧಿಕಾರಿ ನೇತೃತ್ವದಲ್ಲಿ ಬೆಂಗಳೂರಿನ ಬಿಎಂಎಸ್ ಇಂಜಿಯರಿಂಗ್ ಕಾಲೇಜಿನ ನೆರವು ಪಡೆಯಲಾಯಿತು. ಯಂತ್ರೋಪಕರಣಗಳೊಂದಿಗೆ ಬಂದ ಪ್ರೊ. ನಾಗರಾಜ್ ತಂಡ 4 ದಿನÀ ಈ ಸ್ಥಳದಲ್ಲಿ ಮೇಲಿಂದ ಎರಡು ಕಡೆ ಸುಮಾರು 110 ಅಡಿ ಆಳದಿಂದ ಮಣ್ಣು ತೆಗೆದು ಮಣ್ಣಿನ ಪರೀಕ್ಷಾ ವರದಿ ನೀಡಿತು. 90 ಅಡಿ ಎತ್ತರದ ತಡೆಗೋಡೆಗೆ ಕೇವಲ 1.25 ಕೋಟಿ ರೂಪಾಯಿ ಅಂದಾಜು ಪಟ್ಟಿ ನೀಡಿದರು.

ಆ ವೇಳೆಗೆ ನಗರಸಭಾ ಆಡಳಿತ ಅಧಿಕಾರ ಮುಕ್ತಾಯಗೊಳ್ಳುವದರಲ್ಲಿತ್ತು. ಅದಕ್ಕೂ ಮುನ್ನ ಮಾರ್ಚ್ 10 ರಂದು ಚುನಾವಣೆ ಘೋಷಣೆ ಆಗುವ ಸಾಧ್ಯತೆ ಇದ್ದುದರಿಂದ ಅಂದಿನ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಹಾಗೂ ಸದಸ್ಯ ನಂದಕುಮಾರ್ ಕಡತವನ್ನು ಜಿಲ್ಲಾಧಿಕಾರಿಗಳಿಗೆ ಒಪ್ಪಿಸಿದರು. ಜಿಲ್ಲಾಧಿಕಾರಿಗಳು ಸಂಬಂಧಿತ ಅಧಿಕಾರಿಗಳ ವರದಿಗಾಗಿ ಹಸ್ತಾಂತರಿಸಿದರು.

ಈ ಮಧ್ಯೆ ನಾಗರಿಕರು ಉದ್ಯಮಿ ಗಣೇಶ್ ಶೆಣೈ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿನ್ನು ಸಲ್ಲಿಸಿದರು. ಇದೀಗ ನಮಗೆ ದೊರೆತ ಮಾಹಿತಿ ಪ್ರಕಾರ ಲೋಕೋಪಯೋಗಿ ಇಲಾಖೆ ಈ ಕಡತಕ್ಕೆ ಅಂಗೀಕಾರ ನೀಡಿಲ್ಲ; ಹಾಗಾಗಿ ಕಾಮಗಾರಿ ನಡೆಯುವದಿಲ್ಲ. ಇತ್ತೀಚಿನ ಸಣ್ಣ ಮಳೆಗಳಿಗೂ ಈ ಬರೆಯ ಮೇಲ್ಭಾಗದಿಂದ ಕೆಳಕ್ಕೆ ನೀರು ಹರಿದು ಮಣ್ಣು ಕೊಚ್ಚಿ ಹೋಗುತ್ತಿದೆ. ಮುಂದಿನ ಮಳೆಗಾಲದಲ್ಲಿ ಸಂಭವಿಸುಬಹುದಾದ ಅನಾಹುತದ ಬಗ್ಗೆ ಊಹೆ ಕೂಡಾ ಅಸಾಧ್ಯ.

ವೆಬ್ಸ್ ಬಳಿ ತಡೆ ಗೋಡೆ

ನೂತನ ಖಾಸಗಿ ಬಸ್ ನಿಲ್ದಾಣದ ಪಕ್ಕದ ತೋಡಿಗೆ ಹಲವು ವರ್ಷಗಳ ಹಿಂದೆ ಕಾಂಕ್ರೀಟ್ ತಡೆಗೋಡೆ ನಿರ್ಮಿಸಲಾಗಿತ್ತು. ಅತ್ಯಂತ ಅವೈಜ್ಞಾನಿಕವಾಗಿದ್ದ ಈ ಕೆಲಸದಿಂದ ನಂತರದ ಮಳೆಗಾಲದಲ್ಲಿಯೇ ತಡೆಗೋಡೆಯ ತಳಪಾಯವೇ ಕುಸಿದು ಅದರ ಮೇಲ್ಭಾಗದಲ್ಲಿದ್ದ 4-5 ಮನೆಗಳು ಬಿರುಕು ಬಿಟ್ಟವು. ಪ್ರತಿ ಮಳೆಗಾಲದಲ್ಲೂ ಟಾರ್ಪಲ್ ಅಳವಡಿಸಿ ರಕ್ಷಿಸಿಕೊಳ್ಳುವ ಆ ಮನೆ ಮಂದಿಗೆ ಈ ಬಾರಿ ಮತ್ತೊಂದು ಆಘಾತ ಕಾದಿದೆ.

ಎರಡು ತಿಂಗಳ ಹಿಂದೆ ಇದೇ ಜಾಗದಲ್ಲಿ ಹೊಸ ತಡೆಗೋಡೆ ನಿರ್ಮಿಸುವದಾಗಿ ನಗರಸಭೆ, ಜೆಸಿಬಿ ಬಳಸಿ ಲಾರಿಗಟ್ಟಲೆ ಮಣ್ಣನ್ನು ಸ್ಥಳಾಂತರಿಸಿದೆ. ಇದುವರೆಗೂ ಕಾಮಗಾರಿ ಆರಂಭವಾಗಿಲ್ಲ. ಗಮನ ಹರಿಸದಿದ್ದಲ್ಲಿ ಮಳೆಗಾಲದಲ್ಲಿ ಮಣ್ಣೆಲ್ಲಾ ತೋಡಿಗೆ ಸೇರಿ ನೀರಿನ ಅನಾಹುತ ಒಂದೆಡೆಯಾದರೆ ಮೇಲಿನ ಮನೆಗಳು ಖಂಡಿತಾ ಅಪಾಯದಲ್ಲಿ ಸಿಲುಕಲಿವೆ. ತೊಂದರೆ ಯಾದರೆ ಯಾರನ್ನೂ ಕಾರಣ ಮಾಡುವದು?

ಜಿಲ್ಲಾಧಿಕಾರಿ ಕಚೇರಿ

ನೂತನವಾಗಿ ನಿರ್ಮಾಣ ಗೊಂಡ ಜಿಲ್ಲಾಧಿಕಾರಿ ಕಚೇರಿ ಕಾರ್ಯಾರಂಭ ಮಾಡಿ 5 ವರ್ಷಗಳೂ ಕಳೆದಿಲ್ಲ. ಕಳೆದ ಮಳೆಗೆ ಮಂಗಳೂರು ರಸ್ತೆಯಲ್ಲಿ ಈ ಕಟ್ಟಡ ಆವರಿಸಿದ ಜಾಗದ ಮೇಲ್ಭಾಗದಿಂದ ಸಣ್ಣ ಪ್ರಮಾಣದಲ್ಲಿ ಮಣ್ಣು ಕುಸಿದಿದ್ದು, ಅಭದ್ರತೆ ಕಾಡುತ್ತಿವೆ. ಈ ಹಿಂದೆಯೇ ಮಂಗಳೂರು ರಸ್ತೆ ಕಡೆಯಿಂದ ಜಿಲ್ಲಾಧಿಕಾರಿಯ ಕಚೇರಿಗೆ ತಡೆಗೋಡೆ ನಿರ್ಮಿಸಬೇಕೆಂಬ ಪ್ರಸ್ತಾವನೆ ಇದ್ದರೂ ಈ ಬಗ್ಗೆ ಯಾರೂ ಗಮನ ಹರಿಸದಿರುವದು ಮುಂದಿನ ಸಮಸ್ಯೆಗೆ ಕಾರಣವಾಗಬಹುದು.

ಒಟ್ಟಿನಲ್ಲಿ ಹಿಂದೆ ಉಂಟಾದ ಸಮಸ್ಯೆಗಳು ಮುಂದಿನ ಮಳೆಗಾಲದಲ್ಲಿ ಆಗದಂತೆ ಗಮನ ಹರಿಸಬೇಕಾದ ತುರ್ತು ಅಗತ್ಯ ಜಿಲ್ಲಾಡಳಿತದ ಮೇಲಿದೆ. ಮುಂದಿನ ಮಳೆಯಿಂದಾಗಿ ಸಣ್ಣಪುಟ್ಟ ಸಮಸ್ಯೆಗಳು ಉಂಟಾದರೂ ಇಡೀ ಕೊಡಗು ಜಿಲ್ಲೆಯೇ ತೊಂದರೆಯಲ್ಲಿದೆ ಎಂಬ ರೀತಿ ಪ್ರತಿ ಬಿಂಬಿತವಾಗುವದರಿಂದ ಕೊಡಗು ಮತ್ತೇ ಎಷ್ಟೋ ವರ್ಷಕ್ಕೆ ಆರ್ಥಿಕವಾಗಿ ಹಿಂದಕ್ಕೆ ತಳ್ಳಲ್ಪಡುತ್ತದೆ; ಜನತೆಯ ಬದುಕು ದುಸ್ತರವಾಗುತ್ತದೆ. ಹಾಗಾಗದಿರಲಿ ಎಂಬ ಹಾರೈಕೆ ಎಲ್ಲರದ್ದು. - ಜಿ. ಚಿದ್ವಿಲಾಸ್