ವೀರಾಜಪೇಟೆ, ಏ. 13: ವೀರಾಜಪೇಟೆ ತಾಲೂಕು ಸಹಾಯಕ ಚುನಾವಣಾಧಿಕಾರಿ, ಭಾರತೀಯ ಜನತಾ ಪಾರ್ಟಿ ಕಾರ್ಯಕರ್ತರೊಂದಿಗೆ ಶಾಮೀಲಾಗಿ ಮತದಾರರ ಗುರುತಿನ ಚೀಟಿಯೊಂದಿಗೆ ಬಿಜೆಪಿ ಅಭ್ಯರ್ಥಿಯ ಕರಪತ್ರವನ್ನು ಸೇರಿಸಿ ಬಿಜೆಪಿ ಪಕ್ಷದ ಪರ ಪ್ರಚಾರ ಮಾಡುತ್ತಿರುವದಾಗಿ ಆಧಾರ ಸಮೇತ ರಾಜ್ಯದ ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವದು ಎಂದು ವಿಧಾನ ಪರಿಷತ್‍ನ ಮಾಜಿ ಸದಸ್ಯ ಚೆಪ್ಪುಡೀರ ಅರುಣ್ ಮಾಚಯ್ಯ ಅವರು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅರುಣ್ ಮಾಚಯ್ಯ, ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಅನೇಕ ಗ್ರಾಮ ಪಂಚಾಯಿತಿಗಳಲ್ಲಿ ಬಿಜೆಪಿ ಕಾರ್ಯಕರ್ತರುಗಳು ಮತದಾರರ ಗುರುತಿನ ಚೀಟಿಯೊಂದಿಗೆ ಬಿಜೆಪಿಯ ಚುನಾವಣಾ ಕರಪತ್ರಗಳನ್ನು ಹಂಚುತ್ತಿರುವದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಖುದ್ದು ಪತ್ತೆ ಹಚ್ಚಿದ್ದಾರೆ. ಚುನಾವಣಾ ಕಾನೂನು ಪ್ರಕಾರವಾಗಿ ಮತದಾರರ ಗುರುತಿನ ಚೀಟಿಯನ್ನು ತಾಲೂಕಿನ ಸಹಾಯಕ ಚುನಾವಣಾಧಿಕಾರಿ ಇಲ್ಲವೇ ಇವರಿಂದ ನೇಮಕಗೊಂಡ ಬಿ.ಎಲ್.ಓ. ಗ್ರಾಮ ಪಂಚಾಯಿತಿ ಸಿಬ್ಬಂದಿಗಳು, ಅಂಗನವಾಡಿ ಕಾರ್ಯಕರ್ತೆಯರು ವಿತರಣೆ ಮಾಡಬೇಕಾಗಿದೆ. ಆದರೆ ವೀರಾಜಪೇಟೆ ತಾಲೂಕು ಕಚೇರಿಯ ಚುನಾವಣಾಧಿಕಾರಿ ಚುನಾವಣಾ ಕಾನೂನು ನಿಯಮ ನಿಬಂಧನೆಗಳನ್ನು ಗಾಳಿಗೆ ತೂರಿ ಬಿ.ಜೆ.ಪಿ. ಪರವಾಗಿ ಪ್ರಚಾರಕ್ಕೆ ಬೆಂಬಲ ನೀಡುತ್ತಿದ್ದು ಇಂದಿನ ಪಾರದರ್ಶಕ ಚುನಾವಣೆಗೆ ಅಡ್ಡಿ ಉಂಟು ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಚುನಾವಣಾ ಗುರುತಿನ ಚೀಟಿಯೊಂದಿಗೆ ಬಿಜೆಪಿ. ಪಕ್ಷದ ಪ್ರಚಾರದ ಕರಪತ್ರಗಳನ್ನು ಮತದಾರರಿಗೆ ಹಂಚಿದನ್ನು ಪತ್ರಕರ್ತರಿಗೆ ಪ್ರತ್ಯಕ್ಷವಾಗಿ ತೋರಿಸಿದ ಅರುಣ್ ಮಾಚಯ್ಯ ಅವರು ಚುನಾವಣಾ ಆಯೋಗದಿಂದ ನ್ಯಾಯ ದೊರಕದಿದ್ದರೆ ಕಾಂಗ್ರೆಸ್ ಪಕ್ಷದಿಂದ ನ್ಯಾಯಾಲಯದ ಮೊರೆ ಹೋಗುವದಾಗಿ ತಿಳಿಸಿದ್ದಾರೆ.
ಇಂದು ಜಿಲ್ಲಾ ಚುನಾವಣಾ ಧಿಕಾರಿಯಾಗಿರುವ ಜಿಲ್ಲಾಧಿಕಾರಿಗೂ ದೂರು ನೀಡಿರುವದಾಗಿ ತಿಳಿಸಿದ್ದು ಇನ್ನು ಮತದಾನಕ್ಕೆ ಕೇವಲ ನಾಲ್ಕು ದಿನಗಳ ಸಮಯಾವಕಾಶವಿದ್ದು ತಾಲೂಕಿನ ಅನೇಕ ಗ್ರಾಮ ಪಂಚಾಯಿತಿಗಳಿಗೆ ಮತದಾರರ ಗುರುತಿನ ಚೀಟಿ ವಿತರಣೆಯಾಗಿಲ್ಲ. ಮತದಾನದ ದಿನಾಂಕದೊಳಗೆ ಗುರುತಿನ ಚೀಟಿಯನ್ನು ಸಹಾಯಕ ಚುನಾವಣಾಧಿಕಾರಿ ವಿತರಿಸದಿದ್ದರೆ ಈ ಸಂಬಂಧದಲ್ಲಿಯೂ ನ್ಯಾಯಾಲಯಕ್ಕೆ ದೂರು ನೀಡಲಾಗುವದು ಎಂದು ಅರುಣ್ ಮಾಚಯ್ಯ ತಿಳಿಸಿದರು.
ಗೋಷ್ಠಿಯಲ್ಲಿ ಕಾಂಗ್ರೇಸ್ ಪಕ್ಷದ ಬ್ಲಾಕ್ ಅಧ್ಯಕ್ಷ ಆರ್.ಕೆ. ಅಬ್ದುಲ್ ಸಲಾಂ, ಪಕ್ಷದ ನಗರ ಸಮಿತಿ ಅಧ್ಯಕ್ಷ ಜಿ.ಜಿ. ಮೋಹನ್, ಎಂ.ಕೆ. ಬೋಪಣ್ಣ, ನರೇಂದ್ರ ಕಾಮತ್, ಹಾತೀಪ್ ಮನ್ನಾ, ವಿ.ಸಿ. ಗಣೇಶ್, ಸಿ.ಎ. ನಾಸಿರ್, ಪಟ್ಟಣ ಪಂಚಾಯಿತಿ ಸದಸ್ಯರುಗಳಾದ ಪಟ್ಟಡ ರಂಜಿ ಪೂಣಚ್ಚ, ಡಿ.ಪಿ. ರಾಜೇಶ್, ಮಹಮ್ಮದ್ ರಾಫಿ ಮತ್ತಿತರರು ಹಾಜರಿದ್ದರು.