ಸೋಮವಾರಪೇಟೆ, ಏ. 13: ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಪ್ರಜಾಸತ್ಯ ಪತ್ರಿಕೆಯ ವತಿಯಿಂದ ಮಹಿಳಾ ಸಮಾಜದಲ್ಲಿ ಲೋಕ ಸಭಾ ಚುನಾವಣೆ-ಸಂವಾದ ಕಾರ್ಯಕ್ರಮ ನಡೆಯಿತು.

ಸಂವಾದದಲ್ಲಿ ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ವಕ್ತಾರ ಎಂ.ಬಿ. ಅಭಿಮನ್ಯುಕುಮಾರ್, ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಕೆ.ಪಿ. ಚಂದ್ರಕಲಾ, ಬಿ.ಎಸ್.ಪಿ. ಜಿಲ್ಲಾಧ್ಯಕ್ಷ ಮೋಹನ್ ಮೌರ್ಯ ಭಾಗವಹಿಸಿದ್ದರು.

ಕೊಡಗು-ಮೈಸೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಜಯಗಳಿಸುವದು ಶತಃಸಿದ್ಧ. ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಅಲೆಯಿದ್ದು, ಕೇಂದ್ರ ಸರ್ಕಾರದ ಅಭಿವೃದ್ಧಿ ಕಾರ್ಯಗಳಿಗೆ ಮತದಾರರು ಮನ್ನಣೆ ನೀಡಲಿದ್ದಾರೆ. ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ ಎಂದು ಅಭಿಮನ್ಯುಕುಮಾರ್ ಆಶಯ ವ್ಯಕ್ತಪಡಿಸಿದರು.

ಮೋದಿ ಅಲೆ ಎಲ್ಲೂ ಇಲ್ಲ. ಕೇಂದ್ರದ ಸಾಧನೆಗಳು ಯಾವದೂ ಇಲ್ಲ. ಮೈತ್ರಿ ಪಕ್ಷಗಳ ಕಾಂಗ್ರೆಸ್ ಅಭ್ಯರ್ಥಿ ವಿಜಯಶಂಕರ್ ಗೆಲವು ಸಾಧಿಸುವದರಲ್ಲಿ ಯಾವದೇ ಅನುಮಾನವಿಲ್ಲ, ರಾಹುಲ್ ಗಾಂಧಿ ಮುಂದಿನ ಪ್ರಧಾನಿಯಾಗಲಿದ್ದಾರೆ ಎಂದು ಕೆ.ಪಿ. ಚಂದ್ರಕಲಾ ಭರವಸೆ ವ್ಯಕ್ತಪಡಿಸಿದರು. ಬಿ.ಎಸ್.ಪಿ. ಜಿಲ್ಲಾಧ್ಯಕ್ಷ ಮೋಹನ್ ಮೌರ್ಯ ಮಾತನಾಡಿ, ಕಾಂಗ್ರೆಸ್‍ನಿಂದ ದೇಶದಲ್ಲಿ ಬಡತನ ಜೀವಂತವಾಗಿದೆ.

ಕಾಂಗ್ರೆಸ್ ಗರ್ಭದಲ್ಲಿ ಜನಿಸಿದ ಬಿಜೆಪಿ ಕಳೆದ ಐದು ವರ್ಷಗಳ ಹಿಂದೆ ಆಡಳಿತಕ್ಕೆ ಬಂದರೂ ಯಾವದೇ ಅಭಿವೃದ್ಧಿ ಸಾಧಿಸಿಲ್ಲ ಎಂದು ಟೀಕಿಸಿದರಲ್ಲದೆ, ಎರಡೂ ಪಕ್ಷಗಳನ್ನು ದೂರವಿಟ್ಟು ಈ ಬಾರಿ ತೃತೀಯ ರಂಗ ದೇಶದ ಚುಕ್ಕಾಣಿ ಹಿಡಿಯಲಿದೆ. ಬಿಎಸ್‍ಪಿಯನ್ನು ಹೊರತುಪಡಿಸಿ ಪ್ರಧಾನಿ ಆಯ್ಕೆ ಮತ್ತು ಸರ್ಕಾರ ರಚನೆಗೊಳ್ಳುವದಿಲ್ಲ ಎಂದರು.

ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಭಯೋತ್ಪಾದನೆ, ಬಿಜೆಪಿ-ಕಾಂಗ್ರೆಸ್‍ನ ಪ್ರಣಾಳಿಕೆ, ಕಾಫಿ-ಕಾಳುಮೆಣಸು ಬೆಲೆ, ಪ್ರಕೃತಿ ವಿಕೋಪ, ಪರಿಹಾರ ವಿತರಣೆ ವಿಳಂಬ, ಕಸ್ತೂರಿ ರಂಗನ್ ವರದಿ ತೂಗುಕತ್ತಿ, ರೈಲ್ವೇ ಯೋಜನೆ, ಕಾಶ್ಮೀರ ಸಮಸ್ಯೆ, ಸೈನ್ಯ, ಮಹಾಘಟಬಂಧನ್ ಸೇರಿದಂತೆ ಇನ್ನಿತರ ವಿಷಯಗಳು ಸಂವಾದದಲ್ಲಿ ಚರ್ಚೆಗೆ ಒಳಪಟ್ಟವು.

ಸಂವಾದಕ್ಕೂ ಮುನ್ನ ಪತ್ರಿಕಾಭವನ ಟ್ರಸ್ಟ್‍ನ ಅಧ್ಯಕ್ಷ ಎಸ್. ಮಹೇಶ್ ಪ್ರಾಸ್ತಾವಿಕ ನುಡಿಯಾಡಿದರು. ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಹೆಚ್.ಆರ್. ಹರೀಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ನಗರ ಪತ್ರಕರ್ತರ ಸಂಘದ ಅಧ್ಯಕ್ಷ ಡಿ.ಪಿ. ಲೋಕೇಶ್, ಲಯನ್ಸ್ ಅಧ್ಯಕ್ಷ ಯೋಗೇಶ್, ಹಿರಿಯ ನಾಗರಿಕರ ವೇದಿಕೆ ಅಧ್ಯಕ್ಷ ಎಂ.ಟಿ. ದಾಮೋದರ್, ಜೇಸಿ ಅಧ್ಯಕ್ಷ ಪುರುಷೋತ್ತಮ್ ಉಪಸ್ಥಿತ ರಿದ್ದರು. ಪತ್ರಕರ್ತ ಕಿಶೋರ್ ರೈ ಕತ್ತಲೆಕಾಡು, ತಾಲೂಕು ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ವಿಜಯ್ ಹಾನಗಲ್ ಸಂವಾದ ನಿರ್ವಹಿಸಿದರು.