ಶ್ರೀಮಂಗಲ, ಏ. 12: ಇದು ಬಿರುನಾಣಿ ಗ್ರಾ.ಪಂ. ವ್ಯಾಪ್ತಿಯ ಪೊರಾಡು ಗ್ರಾಮದ ಮುಖ್ಯರಸ್ತೆ. ಕೇವಲ ಈ ಗ್ರಾಮಕ್ಕೆ ಸಂಪರ್ಕ ಬೆಸೆಯಲು ಸೀಮಿತವಾದ ರಸ್ತೆಯಲ್ಲ. ಟಿ. ಶೆಟ್ಟಿಗೇರಿ-ಬಿರುನಾಣಿ ಮುಖ್ಯರಸ್ತೆ ಹಾಗೆಯೇ ಬಿರುನಾಣಿ-ಹೈಸೊಡ್ಲೂರು ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಯೂ ಆಗಿದೆ.
ಈ ರಸ್ತೆ ಮೂಲಕವೇ ಹುದಿಕೇರಿ, ಪೊನ್ನಂಪೇಟೆ ಹಾಗೂ ಗೋಣಿಕೊಪ್ಪಕ್ಕೆ ಬರಲು ಗ್ರಾಮಸ್ಥರು ಅವಲಂಭಿಸಿದ್ದಾರೆ. ಕಳೆದ 8-10 ವರ್ಷಗಳಿಂದ ಅಕ್ರಮ ಮರಳು ದಂಧೆಯಿಂದ ಈ ರಸ್ತೆ ಸಂಪೂರ್ಣ ಹಾಳಾಗಿದೆ. ಅಂದಾಜು 3 ಕಿ.ಮೀ. ಅಂತರದ ಈ ರಸ್ತೆ ನಿರಂತರ ನಿರ್ಲಕ್ಷ್ಯಕ್ಕೆ ತುತ್ತಾಗಿದೆ. ಗ್ರಾಮಸ್ಥರು ಹಾಗೂ ಶಾಲಾ ಮಕ್ಕಳು ಸೇರಿ ಈ ರಸ್ತೆಯನ್ನು ದುರಸ್ತಿ ಮಾಡಿ ಶಾಲಾ ಬಸ್ ಸಂಚಾರ ಮಾಡುವಂತೆ ಮಾಡಿಕೊಂಡಿದ್ದಾರೆ. ರಸ್ತೆಯುದ್ದಕ್ಕೂ ಎದ್ದು ಹೋಗಿರುವ ಕಲ್ಲುಗಳಿಂದ ವಾಹನ ಸಂಚಾರಕ್ಕೆ ಸಂಕಷ್ಟ ಉಂಟಾಗಿದೆ. ಈ ರಸ್ತೆ ದುರಸ್ತಿಯಾಗದಿದ್ದರೆ ಮುಂದಿನ ಮಳೆಗಾಲದಿಂದ ಶಾಲಾ ಬಸ್ ಮಾತ್ರವಲ್ಲದೆ ಇಲ್ಲಿನ ಖಾಸಗಿ ವಾಹನ ಸಂಚಾರ ಅಸಾಧ್ಯ.
ಮುಂದಿನ ಶೈಕ್ಷಣಿಕ ವರ್ಷದಿಂದ ರಸ್ತೆ ದುಸ್ಥಿತಿಯಿಂದ ಮಕ್ಕಳನ್ನು ಕರೆದುಕೊಂಡು ಮುಖ್ಯ ರಸ್ತೆಗೆ ಬಿಡಬೇಕಾದ ಅನಿವಾರ್ಯತೆ ಎದುರಾಗಿದೆ. ಕಳೆದ ವಿಧಾನಸಭಾ ಚುನಾವಣೆಗೆ ನೀತಿ ಸಂಹಿತೆ ಜಾರಿಯಾಗುವ ವಾರದ ಮುಂಚೆ ಈ ರಸ್ತೆ ಅಭಿವೃದ್ಧಿಗೆ ಶಾಸಕರು, ಜಿಲ್ಲಾ ಪಂಚಾಯಿತಿ ಸದಸ್ಯರು ಹಾಗೂ ಇತರ ಜನಪ್ರತಿನಿಧಿಗಳು ಭೂಮಿಪೂಜೆ ಮಾಡಿದ್ದರು. ಮಾರನೇ ದಿನದಿಂದಲೇ ರಸ್ತೆ ಕಾಮಗಾರಿ ಆರಂಭವಾಗಲಿದೆ ಎಂದು ಗ್ರಾಮಸ್ಥರಿಗೆ ಭರವಸೆ ನೀಡಿದ್ದರು. ಆದರೆ, ವರ್ಷ ಕಳೆದರೂ ಯಾವದೇ ಕಾಮಗಾರಿಯಾಗಿಲ್ಲ ಎಂದು ಗ್ರಾಮಸ್ಥ ಬಿ.ಯು. ಚಂಗಪ್ಪ ಆರೋಪಿಸಿದ್ದಾರೆ.
ಇನ್ನಾದರೂ ರಾಜಕೀಯ ಬಿಟ್ಟು ಜನಪ್ರತಿನಿಧಿಗಳು ಪ್ರಾಮಾಣಿಕ ಕಾಳಜಿ ತೋರುವಂತಾಗಲಿ ಎಂದು ಒತ್ತಾಯಿಸಿದ್ದಾರೆ.
- ಅಣ್ಣೀರ ಹರೀಶ್ ಮಾದಪ್ಪ