ಕೂಡಿಗೆ, ಏ. 13: ಐತಿಹಾಸಿಕ ಹಿನ್ನೆಲೆಯುಳ್ಳ ಸಮೀಪದ ಕಣಿವೆಯ ಶ್ರೀ ರಾಮಲಿಂಗೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವವು ಶನಿವಾರ ಶ್ರದ್ದಾಭಕ್ತಿಯಿಂದ ನೆರವೇರಿತು.ಪ್ರತಿ ವರ್ಷದ ವಾಡಿಕೆಯಂತೆ ಹೆಬ್ಬಾಲೆ ಗ್ರಾಮಸ್ಥರು ಕಾಶಿಯಿಂದ ಅಂಚೆ ಮೂಲಕ ಬರಮಾಡಿಕೊಂಡ ಗಂಗಾ ತೀರ್ಥವನ್ನು ಅಲಂಕೃತ ಮಂಟಪದಲ್ಲಿ ಕಣಿವೆಯ ಗಡಿಭಾಗಕ್ಕೆ ವಾದ್ಯಗೋಷ್ಠಿಯೊಂದಿಗೆ ತಂದರು.ನಂತರ ರಾಮಲಿಂಗೇಶ್ವರ ದೇವಾಲಯ ಸಮಿತಿಯವರು ಶಾಸ್ತ್ರೋಕ್ತವಾಗಿ ಗಂಗಾಜಲವನ್ನು ಬರಮಾಡಿಕೊಂಡು ಕಣಿವೆಯ ಪ್ರಮುಖ ಬೀದಿಗಳ ಮೂಲಕ ದೇವಾಲಯಕ್ಕೆ ತಂದು ರಾಮಲಿಂಗೇಶ್ವರನಿಗೆ ಗಂಗೋಧಕ ಮಾಡಿದ ನಂತರ

(ಮೊದಲ ಪುಟದಿಂದ) ವಸಂತಮಾಧವ ಪೂಜೆಯ ಬಳಿಕ ರಥಬಲಿ ನಡೆಯಿತು. ಮಧ್ಯಾಹ್ನ ಸುಮಾರು 1.30 ಗಂಟೆಗೆ ಅಭಿಜಿನ್ ಲಗ್ನದಲ್ಲಿ ರಥೋತ್ಸವಕ್ಕೆ ಚಾಲನೆ ದೊರಕಿತು. ರಥೋತ್ಸವದ ಬಳಿಕ ನೆರದಿದ್ದ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಗ್ರಾಮಸ್ಥರು ನೆರೆದಿದ್ದ ಭಕ್ತರಿಗೆ ಪಾನಕ ಮತ್ತು ಮಜ್ಜಿಗೆಯನ್ನು ವಿತರಿಸಿದರು. ಬೆಂಗಳೂರಿನ ವೇದಬ್ರಹ್ಮ ನರಹರಿಶರ್ಮ, ದೇವಾಲಯದ ಪ್ರಧಾನ ಅರ್ಚಕ ರಾಘವೇಂದ್ರಾಚಾರ್ ಮತ್ತು ತಂಡ ಪೂಜಾ ವಿಧಿ ನೆರವೇರಿಸಿದರು.

ಕುಶಾಲನಗರದ ಗ್ರಾಮಾಂತರ ಪೆÇಲೀಸ್ ಠಾಣೆಯ ಸಹಾಯಕ ಪೆÇಲೀಸ್ ಠಾಣಾಧಿಕಾರಿ ಅಪ್ಪಾಜಿ ನೇತೃತ್ವದಲ್ಲಿ ಸಂಚಾರಿ ಪೆÇಲೀಸ್ ಠಾಣೆಯ ಪೆÇಲೀಸ್ ಸಿಬ್ಬಂದಿಗಳು ಬಿಗಿ ಪೆÇಲೀಸ್ ಬಂದೂಬಸ್ತ್ ಕಲ್ಪಿಸಿದ್ದರು.

ಶ್ರೀರಾಮ ನವಮಿ

ಮಡಿಕೇರಿ: ಇಲ್ಲಿನ ಮಲ್ಲಿಕಾರ್ಜುನ ನಗರದ ಶ್ರೀ ಕೋದಂಡ ರಾಮ ದೇವಾಲಯದಲ್ಲಿ ಇಂದು ಸರಳವಾಗಿ ಶ್ರೀ ರಾಮನವಮಿ ಉತ್ಸವವನ್ನು ಆಚರಿಸಲಾಯಿತು. ದೇವಾಲಯ ಸಮಿತಿಯ ಪ್ರಮುಖರು ಈ ಸಂದರ್ಭ ಮಾತನಾಡುತ್ತಾ, ಪ್ರತಿ ವರ್ಷ ಅದ್ಧೂರಿಯಾಗಿ ರಾಮೋತ್ಸವ ದೊಂದಿಗೆ, ನಗರದಲ್ಲಿ ಸಂಕೀರ್ತನೆ, ಉತ್ಸವ ಮೂರ್ತಿ ಮೆರವಣಿಗೆಯನ್ನು ಆಚರಿಸಿಕೊಂಡು ಬಂದಿದ್ದು, ಪ್ರಸಕ್ತ ದೇವಾಲಯದ ಜೀರ್ಣೋದ್ಧಾರ ಕೆಲಸ ನಡೆಯುತ್ತಿರುವದರಿಂದ ಸರಳವಾಗಿ ಕಾರ್ಯಕ್ರಮ ರೂಪಿಸು ವಂತಾಗಿದೆ ಎಂದು ನೆನಪಿಸಿದರು.

ಅರ್ಚಕ ನರಸಿಂಹಮೂರ್ತಿ ನೇತೃತ್ವದಲ್ಲಿ ಶ್ರೀ ರಾಮ ಪರಿವಾರ ದೇವತೆಗಳಿಗೆ ವಿಶೇಷ ಅಲಂಕಾರ ಪೂಜೆಯ ಬಳಿಕ, ಸದ್ಭಕ್ತರಿಗೆ ಕೋಸಂಬರಿ ಪಾನಕ, ಮಜ್ಜಿಗೆ, ಪ್ರಸಾದದೊಂದಿಗೆ ಅನ್ನಸಂತರ್ಪಣೆ ಜರುಗಿತು. ಅಲ್ಲದೆ ಸನ್ನಿಧಿ ಆವರಣದಲ್ಲಿ ಉತ್ಸವ ನಿಮಿತ್ತ ಬಣ್ಣದ ಓಕುಳಿಯೊಂದಿಗೆ ಸಂಭ್ರಮಿಸ ಲಾಯಿತು.

ರಾಮೋತ್ಸವ ಸಮಿತಿ, ಜ್ಯೋತಿ ಯುವಕ ಸಂಘ, ಆಡಳಿತ ಮಂಡಳಿ ಪ್ರಮುಖರು, ಪದಾಧಿಕಾರಿಗಳು ಸದ್ಭಕ್ತರು ದೇವತಾ ಕೈಂಕರ್ಯಗಳಲ್ಲಿ ಪಾಲ್ಗೊಂಡು ಶ್ರೀರಾಮನ ಕೃಪೆಗೆ ಪಾತ್ರರಾದರು.

ಪೇಟೆ ರಾಮಮಂದಿರ

ಮಡಿಕೇರಿಯ ಪೇಟೆ ರಾಮಮಂದಿರದಲ್ಲಿ ಶ್ರೀ ರಾಮನವಮಿ ಪ್ರಯುಕ್ತ ವಿಶೇಷ ಅಲಂಕಾರದೊಂದಿಗೆ ಪೂಜೆ, ಅಭಿಷೇಕ, ರಾಮೋತ್ಸವ ಅಂಗವಾಗಿ ಅಷ್ಟೋತ್ತರ, ವಿಷ್ಣು ಸಹಸ್ರ ನಾಮ ಪಾರಾಯಣ ನಡೆಸಲಾಯಿತು. ಮಹಾಪೂಜೆಯ ಬಳಿಕ ದೇವಾಲಯ ಸಮಿತಿ ವತಿಯಿಂದ ಭಕ್ತರಿಗೆ ಕೋಸಂಬರಿ ಪಾನಕದೊಂದಿಗೆ ಅನ್ನಸಂತರ್ಪಣೆ ನೆರವೇರಿತು. ಹೆಚ್ಚಿನ ಭಕ್ತರು ಪಾಲ್ಗೊಂಡಿದ್ದರು.

ಓಂಕಾರ ಸದನ

ಶ್ರೀ ಆಂಜನೇಯ ಹಾಗೂ ಓಂಕಾರೇಶ್ವರ ಆವರಣದ ಓಂಕಾರ ಸದನದಲ್ಲಿ ಶ್ರೀ ರಾಮನವಮಿ ಪ್ರಯುಕ್ತ ಇಂದು ವಿಶೇಷ ಪೂಜೆಯೊಂದಿಗೆ, ರಾಮ ಅಷ್ಟೋತ್ತರ, ವಿಷ್ಣು ಸಹಸ್ರನಾಮ ಸಹಿತ ನಾಮಸಂಕೀರ್ತನೆ ನೆರವೇರಿತು. ಸಂಜೆ ಪುತ್ತೂರು ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಮಂಡಳಿಯಿಂದ ತಾಳೆಮದ್ದಳೆ ಜರುಗಿತು. ಸದ್ಭಕ್ತರೊಂದಿಗೆ ಹಿರಿಯರು ಪಾಲ್ಗೊಂಡಿದ್ದರು.

ಸೋಮವಾರಪೇಟೆ: ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದ ವಿವಿಧ ದೇವಾಲಯಗಳಲ್ಲಿ ರಾಮನವಮಿ ಉತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು. ದಿನದ ಅಂಗವಾಗಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು.

ಇಲ್ಲಿನ ಶ್ರೀ ಆಂಜನೇಯ ದೇವಾಲಯ, ರಾಮಮಂದಿರ, ಗಣಪತಿ ದೇವಾಲಯ, ಸೋಮೇಶ್ವರ ದೇವಾಲಯಗಳಲ್ಲಿ ದಿನದ ಅಂಗವಾಗಿ ವಿಶೇಷ ಪೂಜೆಗಳು ನಡೆದವು. ಖಾಸಗಿ ಬಸ್ ನಿಲ್ದಾಣದಲ್ಲಿ ಶ್ರೀ ರಾಮನ ವಿಗ್ರಹವನ್ನು ಪ್ರತಿಷ್ಠಾಪಿಸಿ ಸಾರ್ವಜನಿಕವಾಗಿ ರಾಮನವಮಿ ಆಚರಿಸಲಾಯಿತು.

ಖಾಸಗಿ ಬಸ್ ನಿಲ್ದಾಣದಲ್ಲಿ ಬೆಳಗ್ಗಿನಿಂದಲೇ ಪಾನಕ ಮತ್ತು ಕೋಸಂಬರಿ, ಮಜ್ಜಿಗೆ ವಿತರಿಸಲಾ ಯಿತು. ಆಂಜನೇಯ ಸ್ವಾಮಿ ದೇವಾಲಯದಲ್ಲಿ ಕಳೆದ ಒಂದು ವಾರದಿಂದ ದೇವರ ವಿಗ್ರಹಗಳಿಗೆ ಕೇಸರಿ, ಬೆಣ್ಣೆ, ತುಳಸಿ, ಹೂವಿನ ಅಲಂಕಾರ, ವಸ್ತ್ರಾಲಂಕಾರ ಮತ್ತು ವಿಳ್ಳೆದೆಲೆ ಅಲಂಕಾರ ನಡೆದವು.

ಇದರೊಂದಿಗೆ ಗ್ರಾಮೀಣ ಭಾಗದಲ್ಲೂ ಶ್ರೀರಾಮ ನವಮಿ ನಡೆಯಿತು. ಸ್ಥಳೀಯರು ರಸ್ತೆಯಲ್ಲಿ ತೆರಳುವ ಸಾರ್ವಜನಿಕರಿಗೆ ಪಾನಕ ವಿತರಿಸಿದರು.

ಆಂಜನೇಯ ಸ್ವಾಮಿ ದೇವಾಲಯ ಹಾಗೂ ಶ್ರೀ ರಾಮನವಮಿ ಆಚರಣಾ ಸಮಿತಿ ವತಿಯಿಂದ ರಾತ್ರಿ ಅಲಂಕೃತ ಮಂಟಪಗಳ ಮೆರವಣಿಗೆ ಪಟ್ಟಣದ ಪ್ರಮುಖ ಮಾರ್ಗಗಳಲ್ಲಿ ನಡೆಯಿತು. ಗ್ರಾಮೀಣ ಭಾಗದಿಂದ ಶ್ರೀ ಆಂಜನೇಯ ದೇವಾಲಯಕ್ಕೆ ಆಗಮಿಸಿದ ಅಲಂಕೃತ ಮಂಟಪಗಳು ರಾತ್ರಿ ಅಲ್ಲಿಂದ ಹೊರಟು ಪಟ್ಟಣದ ಪ್ರಮುಖ ಮಾರ್ಗಗಳಲ್ಲಿ ಶೋಭಾ ಯಾತ್ರೆಯಲ್ಲಿ ಭಾಗವಹಿಸಿದ್ದವು. ಕೇಸರಿ ಧ್ವಜವನ್ನು ಧರಿಸಿದ್ದ ಯುವಕರು ಶ್ರೀರಾಮನ ಪರ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆಯಲ್ಲಿ ಸಾಗಿದರು.