ಮಡಿಕೇರಿ, ಏ. 12: ಇನ್ನರ್ ವ್ಹೀಲ್ ಕ್ಲಬ್ ವತಿಯಿಂದ ಪ್ರಕೃತಿ ವಿಕೋಪ ಸಂತ್ರಸ್ತರಿಗೆ ಹೈಬ್ರೀಡ್ ತಳಿಯ ಹಸು ಹಾಗೂ ಮಿನಿ ಹೈಡ್ರೋಪವರ್ ಜನರೇಟರ್ ಯೂನಿಟ್‍ನ್ನು ವಿತರಿಸಲಾಯಿತು. ನಗರದ ರೋಟರಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ 10 ಸಂತ್ರಸ್ತರಿಗೆ ಹೈಬ್ರೀಡ್ ತಳಿಯ ಹಸುಗಳನ್ನು ಮತ್ತು ಮಡಿಕೇರಿ ತಾಲೂಕಿನ ಹಮ್ಮಿಯಾಲ ಗ್ರಾಮದ 11 ಸಂತ್ರಸ್ತ ಕುಟುಂಬಗಳಿಗೆ ಮಿನಿ ಹೈಡ್ರೋಪವರ್ ಜನರೇಟರ್ ಯೂನಿಟ್‍ನ್ನು ಪ್ರಮುಖರು ವಿತರಿಸಿದರು. ಇದಕ್ಕೂ ಮೊದಲು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಭಾರತೀಯ ಇನ್ನರ್‍ವ್ಹೀಲ್ ಕ್ಲಬ್ ಅಧ್ಯಕ್ಷೆ ಸ್ಮಿತಾ ಪಿಂಗ್ಲೇ, ಕ್ಲಬ್ 1958ರಲ್ಲಿ ಆರಂಭವಾಗಿದ್ದು, ಸುಮಾರು 103 ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. 45 ಸಾವಿರ ಸದಸ್ಯರನ್ನು ಹೊಂದಿದ್ದು, ಭಾರತದಲ್ಲಿ ಸುಮಾರು 28 ಜಿಲ್ಲೆಗಳನ್ನು ಈ ಕ್ಲಬ್ ಹೊಂದಿದೆ. ಕೊಡಗಿನಲ್ಲಿ ಮರ್ಕರಾ ಇನ್ನರ್‍ವ್ಹೀಲ್ ಕಾರ್ಯನಿರ್ವಹಿಸುತ್ತಿದ್ದು, 31 ಮಂದಿ ಸದಸ್ಯರಿದ್ದಾರೆ ಎಂದರು.

ಇನ್ನರ್‍ವ್ಹೀಲ್ ಸಂಸ್ಥೆ ಮಹಿಳೆಯರ ಸಬಲೀಕರಣ ಮತ್ತು ಮಾನಸಿಕ ವಿಕಸನದ ದೃಷ್ಟಿಯಂದ ಆರಂಭವಾಗಿದ್ದು, ಜಿಲ್ಲೆಯ ಆಸಕ್ತ ಮಹಿಳೆ ಯರು ಸದಸ್ಯರಾಗುವಂತೆ ಸ್ಮಿತಾ ಪಿಂಗ್ಲೆ ಮನವಿ ಮಾಡಿದರು. ಸದಸ್ಯತ್ವಕ್ಕೆ 9480499622 ನ್ನು ಸಂಪರ್ಕಿಸ ಬಹುದಾಗಿದೆ. ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದಿಂದ ಅಪಾರ ಹಾನಿಯಾಗಿದ್ದ ಸಂದರ್ಭ ಕ್ಲಬ್ ತಕ್ಷಣ ಸ್ಪಂದಿಸುವ ಮೂಲಕ ಸಂತ್ರಸ್ತರ ನೆರವಿಗೆ ಬಂದಿದೆ. ಇದರ ಒಂದು ಭಾಗವಾಗಿ ಹಸು ಹಾಗೂ ಹೈಡ್ರೋಪವರ್ ಜನರೇಟರ್ ನೀಡಲಾಗುತ್ತಿದೆ ಎಂದರು. ಮರ್ಕರಾ ಇನ್ನರ್‍ವ್ಹೀಲ್ ಕ್ಲಬ್ ಅಧ್ಯಕ್ಷೆ ಲತಾ ಚಂಗಪ್ಪ ಮಾತನಾಡಿ, ಪ್ರಕೃತಿ ವಿಕೋಪ ಸಂತ್ರಸ್ತರಿಗೆ ನೆರವಾಗುವ ನಿಟ್ಟಿನಲ್ಲಿ ಕ್ಲಬ್‍ನಿಂದ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳ ಲಾಗಿದೆ ಎಂದರು. ಹಸು ಹಾಗೂ ಹೈಡ್ರೋಪವರ್ ಜನರೇಟರ್ ವಿತರಣೆಗಾಗಿ ಕ್ಲಬ್‍ನ ಸದಸ್ಯರು ತಮ್ಮ ಸ್ವಂತ ಹಣವನ್ನು ಖರ್ಚು ಮಾಡಿ ಸಂತ್ರಸ್ತರಿಗೆ ಸಹಾಯ ಮಾಡುತ್ತಿದ್ದಾರೆ ಎಂದು ತಿಳಿಸಿದರು. ಈ ಹಿಂದೆ ಸಂತ್ರಸ್ತರಿಗೆ ಹೊಲಿಗೆ ಯಂತ್ರ ಹಾಗೂ ವಾಷಿಂಗ್ ಮಿಷನ್ ಸೇರಿದಂತೆ ಆರ್ಥಿಕ ನೆರವನ್ನು ನೀಡಲಾಗಿದೆ ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಬೆಂಗಳೂರು ಇನ್ನರ್‍ವ್ಹೀಲ್ ಕ್ಲಬ್ ಅಧ್ಯಕ್ಷೆ ಶ್ರೀವಿದ್ಯಾ, ಜಿಲ್ಲಾ ಚೇರ್‍ಮನ್ ಡಾ. ಸಾರಿಕಾ ಪ್ರಸಾದ್, ಜಿಲ್ಲಾ ಯೋಜನಾ ಸಂಚಾಲಕಿ ನಯನ ಅಚ್ಚಪ್ಪ, ಹಾಗೂ ಕಾರ್ಯದರ್ಶಿ ಕಣ್ಣು ದೇವರಾಜ್ ಹಾಜರಿದ್ದರು.