ಮಡಿಕೇರಿ, ಏ. 13: ಭಾರತ ದೇಶದ ಸಂವಿಧಾನ ರಚನೆಯ ಬಳಿಕ ಇದೇ ಪ್ರಪ್ರಥಮ ಬಾರಿಗೆ ದೇಶದ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಸ್ಥಾನಕ್ಕೆ ಕೊಡಗಿನ ವ್ಯಕ್ತಿಯೊಬ್ಬರು ಶಿಫಾರಸುಗೊಳ್ಳುವ ಮೂಲಕ ಜಿಲ್ಲೆಯ ಹಿರಿಮೆಗೆ ಮತ್ತೊಂದು ಗರಿ ಮೂಡಿದಂತಾಗಿದೆ.ಕರ್ನಾಟಕ ರಾಜ್ಯ ಉಚ್ಚ ನ್ಯಾಯಾ ಲಯದ ನ್ಯಾಯಮೂರ್ತಿಯಾಗಿ ಕರ್ತವ್ಯ ನಿರ್ವಹಿಸಿ ಕೆಲವು ತಿಂಗಳ ಹಿಂದೆಯಷ್ಟೇ ಗುವಾಹಟಿಯ ಮುಖ್ಯ ನ್ಯಾಯಮೂರ್ತಿಗಳಾಗಿ ನೇಮಕ ಗೊಂಡಿದ್ದ ಮೂಲತಃ ಪಾಲಿಬೆಟ್ಟದವ ರಾದ ಅಜ್ಜಿಕುಟ್ಟೀರ ಎಸ್. ಬೋಪಣ್ಣ ಅವರು ಈ ಸಾಧನೆಗೆ ಪಾತ್ರರಾಗಿದ್ದಾರೆ.ಈ ಹಿಂದೆ ವಿಧಾನಪರಿಷತ್ ಸದಸ್ಯರಾಗಿದ್ದ ಜಿಲ್ಲೆಯ ಹಿರಿಯ ಸಹಕಾರಿ ದಿವಂಗತ ಅಜ್ಜಿಕುಟ್ಟೀರ ಎನ್. ಸೋಮಯ್ಯ ಅವರ ಪುತ್ರರಾಗಿರುವ ನ್ಯಾಯಮೂರ್ತಿ ಎ.ಎಸ್. ಬೋಪಣ್ಣ ಅವರ ಹೆಸರನ್ನು ಇದೀಗ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸ್ಥಾನಕ್ಕೆ ಈ ಕುರಿತಾಗಿ ನೇಮಕ ಗೊಂಡಿದ್ದ ಸಮಿತಿ ನಿನ್ನೆ ಶಿಫಾರಸು ಮಾಡಿದೆ.ಎ.ಎಸ್. ಬೋಪಣ್ಣ ಅವರು ಸೇರಿದಂತೆ ಈ ಸ್ಥಾನಕ್ಕೆ ಶಿಫಾರಸುಗೊಂಡಿರುವವರ ಹೆಸರು, ಕೇಂದ್ರ ಸರಕಾರ, ಗೃಹ ಸಚಿವಾಲಯ, ಕಾನೂನು ಇಲಾಖೆ ಹಾಗೂ ಪ್ರಧಾನಮಂತ್ರಿಗಳ ಮೂಲಕ ರಾಷ್ಟ್ರಪತಿಗಳಿಗೆ ಸಲ್ಲಿಕೆಯಾಗಬೇಕಿದೆ. ಈ ಪ್ರಕ್ರಿಯೆ ಬಳಿಕ ರಾಷ್ಟ್ರಪತಿಗಳ ಮೂಲಕ ‘ಎಪಾಯಿಂಟ್‍ಮೆಂಟ್ ವಾರಂಟ್’ ಜಾರಿಯಾಗಬೇಕಿದ್ದು, ಇದಾದ ಬಳಿಕ ಇವರು ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಗಳಾಗಿ ರಾಷ್ಟ್ರಪತಿಗಳಿಂದ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂಬದಾಗಿ ಮಾಜಿ ಕಾನೂನು ಮತ್ತು ಸಂಸದೀಯ ಸಚಿವರಾಗಿದ್ದ

(ಮೊದಲ ಪುಟದಿಂದ) ಯಂ.ಸಿ. ನಾಣಯ್ಯ ಅವರು ವಿವರವಿತ್ತಿದ್ದಾರೆ.

ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಸ್ಥಾನದ ಮೆಟ್ಟಿಲೇರುತ್ತಿರುವ ಜಸ್ಟೀಸ್ ಬೋಪಣ್ಣ ಜನವರಿ 6, 2006ರಂದು ರಾಜ್ಯ ಉಚ್ಛ ನ್ಯಾಯಾಲಯದ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಕಗೊಂಡರು. ಜನವರಿ 3, 2007ರಂದು ಖಾಯಂ ನ್ಯಾಯಮೂರ್ತಿಗಳಾಗಿ ಆಯ್ಕೆಗೊಂಡರು. ಇದಾದ ಬಳಿಕ 2018ರ ಅಕ್ಟೋಬರ್ 29ರಂದು ಶ್ರೀಯುತರು ಗುವಾಹಟಿಯ ಮುಖ್ಯ ನ್ಯಾಯಮೂರ್ತಿ ಸ್ಥಾನಕ್ಕೆ ಬಡ್ತಿಗೊಂಡು ಅಲ್ಲಿ ಇದೀಗ ಕಾರ್ಯನಿರ್ವಹಿಸುತ್ತಿದ್ದಾರೆ. ಅದಕ್ಕೂ ಮುನ್ನ 1984ರಲ್ಲಿ ಇವರು ನ್ಯಾಯವಾದಿಯಾಗಿ ಸಿವಿಲ್ ಮತ್ತು ಕಾರ್ಮಿಕ ನ್ಯಾಯಾಲಯಗಳಲ್ಲಿ ಸೇವೆ ಸಲ್ಲಿಸಿದ್ದರು. ಸಾಕಷ್ಟು ಸಂಸ್ಥೆಗಳಿಗೆ ಕಾನೂನು ಸಲಹೆಗಾರರಾಗಿ, 1999ರಿಂದ 2005ರವರೆಗೆ ಕೇಂದ್ರ ಸರಕಾರದ ಹೆಚ್ಚುವರಿ ಸ್ಟ್ಯಾಂಡಿಂಗ್ ಕೌನ್ಸಿಲ್‍ನಲ್ಲೂ ದುಡಿದಿದ್ದಾರೆ.

ವಿಷಾದ : ತಾ. 13ರಂದು ಶ್ರೀಯುತರ ಆಯ್ಕೆ ಬಗ್ಗೆ ಪ್ರಕಟಗೊಂಡಿದ್ದ ಸುದ್ದಿಯಲ್ಲಿ ಅವರ ತೀರ್ಥರೂಪರ ಬಗ್ಗೆ ತಪ್ಪು ಮಾಹಿತಿ ಇದ್ದು, ಪ್ರಮಾದಕ್ಕಾಗಿ ವಿಷಾದಿಸುತ್ತೇವೆ.

-ಸಂಪಾದಕ.