ಸೋಮವಾರಪೇಟೆ, ಏ. 12: ಹಣಗಳಿಸುವದೇ ಜೀವನದ ಏಕೈಕ ಗುರಿಯಾಗಬಾರದು. ನೈತಿಕ ಶಿಕ್ಷಣ, ಧಾರ್ಮಿಕ ಕಾರ್ಯಕ್ರಮ, ಕಲೆ ಮತ್ತು ಸಾಹಿತ್ಯಪರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವದರ ಮೂಲಕ ಜೀವನಕ್ಕೆ ಅರ್ಥ ತುಂಬಬೇಕು ಎಂದು ಕಿರಿಕೊಡ್ಲಿ ಮಠಾಧೀಶರಾದ ಶ್ರೀ ಸದಾಶಿವ ಸ್ವಾಮೀಜಿ ಅಭಿಪ್ರಾಯಿಸಿದರು.

ಇಲ್ಲಿನ ಮಹದೇಶ್ವರ ಬ್ಲಾಕ್‍ನಲ್ಲಿನ ನಿವೃತ್ತ ಸೈನಿಕ ದಿ. ಮಹಮ್ಮದ್ ಗೌಸ್ ನಿವಾಸದಲ್ಲಿ, ಮನೆ ಮನೆ ಕವಿಗೋಷ್ಠಿ, ಸಾಹಿತ್ಯ ಸಂಘಟನೆ, ತಥಾಸ್ತು ಸಾತ್ವಿಕ ಸಂಸ್ಥೆ ಮತ್ತು ನಯನಾ ಮಹಿಳಾ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಮತದಾನದ ಕುರಿತು ಕವನ ವಾಚನ ಮತ್ತು ಪುಟ್ಟಣ್ಣ ಕಣಗಾಲ್ ಅವರ ಚಿತ್ರಗಳ ಹಾಡುಗಳ ಗಾಯನ ಸ್ಪರ್ಧೆ ಸೇರಿದಂತೆ ವಿವಿಧ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಾಹಿತ್ಯಪರ ಮನಸ್ಸುಗಳು ಒಂದೆಡೆ ಕಲೆಯಲು ಇಂತಹ ಕಾರ್ಯಕ್ರಮಗಳು ಉತ್ತಮ ವೇದಿಕೆಯಾಗಿವೆ ಎಂದ ಸ್ವಾಮೀಜಿ, ಚುನಾವಣೆ ಎಂಬದು ಪ್ರಜಾಪ್ರಭುತ್ವದ ಹಬ್ಬವಾಗಿದ್ದು, ಪ್ರತಿಯೋರ್ವರೂ ಮತದಾನದಲ್ಲಿ ಭಾಗವಹಿಸುವ ಮೂಲಕ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಬೇಕು ಎಂದರು.

ಕಾರ್ಯಕ್ರಮದಲ್ಲಿ 9ರಿಂದ 16 ವರ್ಷದೊಳಗಿನ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ, ಭರತನಾಟ್ಯ, ಸಂಗೀತ ವಾದ್ಯಗಳ ನುಡಿಸುವಿಕೆ, ಚಿಣ್ಣರ ಸಾಹಿತ್ಯ ಮತ್ತು ವಿಚಾರ, ನೃತ್ಯ, ಗಾಯನ ಸ್ಪರ್ಧೆ, ರಸಪ್ರಶ್ನೆ ಸ್ಪರ್ಧೆಗಳನ್ನು ನಡೆಸಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ತಥಾಸ್ತು ಸಾತ್ವಿಕ ಸಂಸ್ಥೆಯ ಅಧ್ಯಕ್ಷ ರವೀಂದ್ರ ಹಾನಗಲ್ಲು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಿವೃತ್ತ ವಿಷಯ ಪರಿವೀಕ್ಷಕಿ ಎಸ್.ಎಂ. ಮನುಬಾಯಿ, ರಾಜ್ಯಪ್ರಶಸ್ತಿ ಪುರಸ್ಕøತ ವಿದ್ಯಾರ್ಥಿನಿ ಎಂ.ಯು. ಶ್ರಾವಣಿ, ಮನೆ ಮನೆ ಕವಿಗೋಷ್ಠಿ ಜಿಲ್ಲಾ ಸಂಯೋಜಕ ವೈಲೇಶ್, ನಯನ ಮಹಿಳಾ ಸಂಘದ ಅಧ್ಯಕ್ಷೆ ಎಂ.ಎ. ರುಬೀನ, ಸಾಹಿತಿ ಕಂಪ್ಲಾಪುರ ಮೋಹನ್ ಮತ್ತಿತರರು ಉಪಸ್ಥಿತರಿದ್ದರು.