ಮೂರ್ನಾಡು, ಏ. 13: ಟಿವಿ, ವಾಟ್ಸ್‍ಅಪ್, ಫೇಸ್‍ಬುಕ್‍ಗಳಿಂದ ಮಕ್ಕಳು ಕಲೆ ಸಂಸ್ಕøತಿಗಳನ್ನು ಮರೆಯುತ್ತಿದ್ದಾರೆ ಎಂದು ನಿವೃತ್ತ ಮುಖ್ಯ ಶಿಕ್ಷಕಿ ಹೆಚ್.ಕೆ. ಸರೋಜ ಹೇಳಿದರು.

ಮೂರ್ನಾಡು ಕೊಡವ ಸಮಾಜದಲ್ಲಿ ಆಯೋಜಿಸಲಾಗಿದ್ದ ಭಾರತೀಯ ನೃತ್ಯ ಕಲಾ ಶಾಲೆಯ ನೃತ್ಯೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ನಮ್ಮ ದೇಶದ ಕಲೆ ಸಂಸ್ಕøತಿಯನ್ನು ಉಳಿಸುವ ನಿಟ್ಟಿನಲ್ಲಿ ಭರತನಾಟ್ಯ ನೃತ್ಯ ಪ್ರಕಾರಗಳು ಮಹತ್ತರ ಪಾತ್ರ ವಹಿಸುತ್ತದೆ. ದೂರದರ್ಶನ, ಮೊಬೈಲ್‍ಗಳತ್ತ ಹೆಚ್ಚಿನ ಗಮನ ಹರಿಸುತ್ತಿರುವ ಈಗಿನ ಮಕ್ಕಳು ಇಂತಹ ಶಾಸ್ತ್ರೀಯ ನೃತ್ಯ ಕಲೆಗಳತ್ತ ಒಲವು ಮೂಡಿಸಬೇಕು. ಪೋಷಕರು ತಮ್ಮ ಮಕ್ಕಳಲ್ಲಿ ಇಂತಹ ಕಲೆಗಳನ್ನು ಕಲಿಯುವಲ್ಲಿ ಆಸಕ್ತಿ ಹಾಗೂ ಪ್ರೋತ್ಸಾಹ ಮೂಡಿಸಬೇಕು ಎಂದು ತಿಳಿಸಿ ಕಲೆ ಸಂಸ್ಕøತಿ ಉಳಿಸಿ ಬೆಳೆಸುವಲ್ಲಿ ನೃತ್ಯ ಕಲಾ ಶಾಲೆಗಳ ಪಾತ್ರ ಮಹತ್ತರವಾಗಿದೆ ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮೂರ್ನಾಡು ವಿದ್ಯಾಸಂಸ್ಥೆಯ ನಿರ್ದೇಶಕರಾದ ಪೆಮ್ಮುಡಿಯಂಡ ವೇಣು ಅಪ್ಪಣ್ಣ ಮಾತನಾಡಿ ಮಕ್ಕಳಲ್ಲಿರುವ ಪ್ರತಿಭೆಗೆ ಪೋಷಕರು ಪ್ರೋತ್ಸಾಹ ನೀಡಬೇಕು. ಶಾಸ್ತ್ರೀಯ ನೃತ್ಯ ತನ್ನದೆ ಆದ ಪ್ರಾಮುಖ್ಯತೆಯನ್ನು ಉಳಿಸಿ ಕೊಂಡಿದ್ದು, ಅದನ್ನು ಉಳಿಸಿಕೊಂಡು ಹೋಗುವ ಕಾರ್ಯವಾಗಬೇಕು ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ಹಿರಿಯರಾದ ಕಳ್ಳಿರ ಗಣಪತಿ ವಹಿಸಿದ್ದರು. ನೃತ್ಯ ಶಾಲೆಯ 41 ನೃತ್ಯ ಕಲಾವಿದರು ಭರತನಾಟ್ಯ, ದಾಸರಪದ, ತತ್ತ್ವಪದ ಮತ್ತು ಜಾನಪದ ಹಾಡುಗಳಿಗೆ 21 ನೃತ್ಯಗಳನ್ನು ವೇದಿಕೆಯಲ್ಲಿ ಪ್ರದರ್ಶಿಸಿದರು. ನೃತ್ಯೋತ್ಸವ ಸಮಾರಂಭದಲ್ಲಿ ನವಶಕ್ತಿ ವೈಭವ ನ್ಯತ್ಯ ರೂಪಕ ವಿಶೇಷವಾಗಿದ್ದು, ಸಭಿಕರ ಮೆಚ್ಚುಗೆಗೆ ಪಾತ್ರವಾಯಿತು. ಎಲ್ಲಾ ನೃತ್ಯ ಪ್ರಕಾರಗಳನ್ನು ನೃತ್ಯ ಶಿಕ್ಷಕಿ ಜಲಜ ನಾಗರಾಜ್ ಗರಡಿಯಲ್ಲಿ ಕಲಿತು, ಕಲಾವಿದರು ವೇದಿಕೆಯಲ್ಲಿ ಪ್ರದರ್ಶಿಸಿದರು. ನೃತ್ಯ ಶಿಕ್ಷಕಿ ಜಲಜ ನಾಗರಾಜ್ ಸ್ವಾಗತಿಸಿ, ಮೂರ್ನಾಡು ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಹರೀಶ್ ಕಿಗ್ಗಾಲು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.