ವೀರಾಜಪೇಟೆ, ಏ. 12: ಗಳಿಕೆಯೇ ಬದುಕಿನ ಗುರಿಯಾಗಬಾರದು. ಬದುಕಿನೊಂದಿಗೆ ಸಮಾಜಮುಖಿ ಕೆಲಸಗಳನ್ನು ಮಾಡುವಂತಾಗಬೇಕು ಎಂದು ಪೂಮಾಲೆ ಕೊಡವ ವಾರ ಪತ್ರಿಕೆ ಸಂಪಾದಕ ಹಾಗೂ ತಾಲೂಕು ಜನಪದ ಪರಿಷತ್ ಅಧ್ಯಕ್ಷ ಅಜ್ಜನಿಕಂಡ ಮಹೇಶ್ ನಾಚಯ್ಯ ಹೇಳಿದರು.
ಇಲ್ಲಿನ ರಾಜರಾಜೇಶ್ವರಿ ಸಭಾಂಗಣದಲ್ಲಿ ಮಾತೃ ಎಜುಕೇಷನ್ ಟ್ರಸ್ಟ್ ಹಾಗೂ ಚೋಟಾ ಚಾಂಪ್ಸ್ ಗುರುಕುಲದ ವಾರ್ಷಿಕ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ನಾವಿಂದು ಲೌಕಿಕ ಲೋಕದಲ್ಲಿದ್ದೇವೆ. ಇದರಿಂದ ಎಲ್ಲವನ್ನು ಪಡೆದುಕೊಳ್ಳುತ್ತೇವೆ ಎಂಬದು ಪ್ರಶ್ನಾರ್ಥಕವಾಗಿದೆ. ಗುರುಕುಲದ ಉದ್ದೇಶವನ್ನು ಇಟ್ಟುಕೊಂಡು ಶಾಲೆಯನ್ನು ಪ್ರಾರಂಭಿಸಿ ವಿದ್ಯಾರ್ಜನೆ ಮಾಡುತ್ತಿರುವದು ಶ್ಲಾಘನೀಯ. ಯಾವದೇ ದಾನವನ್ನು ಸ್ವೀಕರಿಸದೆ ತನ್ನ ದುಡಿಮೆಯಿಂದಲೇ ಸಮಾಜಮುಖಿಯಾಗಿ ಕೆಲಸ ನಿರ್ವಹಿಸುವದು ಮನುಷ್ಯನ ವ್ಯಕ್ತಿತ್ವವನ್ನು ತೋರಿಸುತ್ತದೆ. ದುಡಿಮೆಯೇ ದೇವರು ಅಂತ ಅಂದುಕೊಂಡವರು ಬದುಕಿನಲ್ಲಿ ಒಂದು ಹಂತ ತಲಪಲು ಸಾಧ್ಯ ಎಂದು ಹೇಳಿದರು. ವೇದಿಕೆಯಲ್ಲಿ ಶಾಲಾ ಮುಖ್ಯಸ್ಥ ಚಂಗೇಟ್ಟಿರ ಧನು, ನಿರ್ದೇಶಕಿ ವೀಣಾ ಉಪಸ್ಥಿತರಿದ್ದರು. ಈ ಸಂದರ್ಭ ಮಕ್ಕಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.