ಗುಂಡಿನ ದಾಳಿಯಲ್ಲಿ ಹಲವರಿಗೆ ಗಾಯ

ಮೆಲ್ಬೋರ್ನ್, ಏ. 14: ಆಸ್ಟ್ರೇಲಿಯಾದ ಮೆಲ್ಬೋರ್ನ್‍ನಲ್ಲಿ ದುಷ್ಕರ್ಮಿಯೋರ್ವ ನಡೆಸಿರುವ ಶೂಟಿಂಗ್‍ನಲ್ಲಿ ಹತ್ತಾರು ಮಂದಿ ಗಾಯಗೊಂಡಿದ್ದು, ಈ ಪೈಕಿ ಇಬ್ಬರು ಗಂಭೀರವಾಗಿದ್ದಾರೆ. ಆಸ್ಟ್ರೇಲಿಯಾದ ಎರಡನೇ ದೊಡ್ಡ ನಗರವಾದ ಮೆಲ್ಬೋರ್ನ್‍ನಲ್ಲಿ ಬೈಕ್‍ನಲ್ಲಿ ಬಂದ ದುಷ್ಕರ್ಮಿಗಳು ಅಲ್ಲಿನ ನೈಟ್ ಕ್ಲಬ್‍ವೊಂದರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಕ್ಲಬ್‍ನಲ್ಲಿದ್ದ ಹತ್ತಾರು ಮಂದಿ ಗಾಯಗೊಂಡಿದ್ದಾರೆ. ಈ ಪೈಕಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ವೀಕೆಂಡ್ ಆದ್ದರಿಂದ ಕ್ಲಬ್‍ನಲ್ಲಿ ಸಾಕಷ್ಟು ಮಂದಿ ಇದ್ದರು. ಹೀಗಾಗಿ ಗಾಯಾಳುಗಳ ಸಂಖ್ಯೆ ಹೆಚ್ಚಾಗಿದೆ ಎಂದು ಭದ್ರತಾ ಪಡೆಗಳು ತಿಳಿಸಿವೆ. ಅಂತೆಯೇ ಬೈಕ್‍ನಲ್ಲಿ ಬಂದ ದುಷ್ಕರ್ಮಿಗಳಿಗಾಗಿ ಪೆÇಲೀಸರು ಬಲೆ ಬೀಸಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಇನ್ನು ಘಟನೆ ಭಯೋತ್ಪಾದಕ ಕೃತ್ಯವಲ್ಲ ಎಂದು ಹೇಳಿರುವ ಸ್ಥಳೀಯ ಜಿಲ್ಲಾಡಳಿತ ಇದು ದುಷ್ಕರ್ಮಿಗಳ ಕೃತ್ಯ ಎಂದು ಸ್ಪಷ್ಟನೆ ನೀಡಿದ್ದಾರೆ. ಇನ್ನು 1996ರಲ್ಲಿ ಇದೇ ಮೆಲ್ಬೋರ್ನ್‍ನಲ್ಲಿ ನಡೆದಿದ್ದ ಶೂಟಿಂಗ್‍ನಲ್ಲಿ 35 ಮಂದಿ ಅಸು ನೀಗಿದ್ದರು.

ಕಲ್ಲು ತೂರಿದ 7 ಮಂದಿಯ ಬಂಧನ

ಮಂಗಳೂರು, ಏ. 14: ಶನಿವಾರ ಮಂಗಳೂರಿನ ನೆಹರೂ ಮೈದಾನದಲ್ಲಿ ಆಯೋಜಿತವಾಗಿದ್ದ ಪ್ರಧಾನಿ ನರೇಂದ್ರ ಮೋದಿಯವರ ಚುನಾವಣಾ ರ್ಯಾಲೆಗೆ ತೆರಳಿದ್ದ ಬಸ್ ಮೇಲೆ ಕಲ್ಲುತೂರಾಟ ಘಟನೆಗೆ ಸಂಬಂಧಿಸಿ 7 ಮಂದಿಯನ್ನು ಪೆÇಲೀಸರು ಬಂಧಿಸಿದ್ದಾರೆ. ಮಂಗಳೂರಿನ ಕುತ್ತಾರು ಮದನಿನಗರದಲ್ಲಿ ಮೊದಿ ಕಾರ್ಯಕ್ರಮ ಮುಗಿಸಿ ವಾಪಾಸಾಗುವಾಗ ದುಷ್ಕರ್ಮಿಗಳು ಬಸ್ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಘಟನೆಯಲ್ಲಿ ನಾಲ್ವರಿಗೆ ಗಾಯಗಳಾಗಿತ್ತು, ಬಸ್‍ನಲ್ಲಿದ್ದ ಮಹಿಳೆಯರ ಮೇಲೆ ಹಲ್ಲೆ ನಡೆದಿತ್ತು ಎಂಬ ಆರೋಪದಡಿ ಬಿಜೆಪಿ ಕಾರ್ಯಕರ್ತರು, ಶಾಸಕರಾದ ಡಾ. ವೈ. ಭರತ್ ಶೆಟ್ಟಿ ಹಾಗೂ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಕೊಣಾಜೆ ಪೆÇಲೀಸ್ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ್ದರು. ಇದರಿಂದ ಎಚ್ಚೆತ್ತ ಪೆÇಲೀಸ್ ಪಡೆ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಏಳು ಮಂದಿಯನ್ನು ಬಂಧಿಸಿದ್ದಾರೆ. ಇನ್ನೂ ಹಲವಾರು ಮಂದಿಯ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿದಿದೆ. ಈ ಘಟನೆ ಹಿಂದೆ ರಾಜಕೀಯ ದ್ವೇಷ ಇರಬಹುದು ಎಂದು ಪೆÇಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಉಗ್ರವಾದದ ಪ್ರಸ್ತಾವನೆ ಕೈಬಿಟ್ಟ ಕೆನಡಾ

ಟೊರಾಂತೋ, ಏ. 14: ಕೆನಡಾದಲ್ಲಿನ ಸಿಖ್ಖ್ ವಲಸೆಗಾರರ ಒತ್ತಡಕ್ಕೆ ಮಣಿದು ಭಯೋತ್ಪಾದನಾ ಬೆದರಿಕೆಗಳ ಕುರಿತಂತೆ ತಾನು ತಯಾರಿಸಿದ್ದ 2018ರ ವರದಿಯಿಂದ ಸಿಖ್ಖ್ ಹಾಗೂ ಖಲಿಸ್ತಾನಿ ಉಗ್ರವಾದದ ಪ್ರಸ್ತಾವನೆಗಳನ್ನು ಕೆನಡಾ ಸರ್ಕಾರ ತೆಗೆದು ಹಾಕಿದೆ. 2018 ರ ಕೆನಡಾದ ಭಯೋತ್ಪಾದನಾ ಹಾನಿಯ ಕುರಿತಾದ ಸಾರ್ವಜನಿಕ ವರದಿ’ಯಿಂದ ಸಿಖ್ಖ್ ಉಗ್ರವಾದಿತ್ವ ಹಾಗೂ ಖಲಿಸ್ತಾನ ಉಗ್ರರ ಉಲ್ಲೇಖವನ್ನು ಕೆನಡಾ ಕೈಬಿಟ್ಟಿದೆ.ಈ ಉಲ್ಲೇಖವು ವಿಶ್ವದಾದ್ಯಂತ ಸಿಖ್ಖರನ್ನು ಕೆರಳಿಸಿತು. ಕೆನಡಾದ ಸಿಖ್ಖರು ಉಲ್ಲೇಖವನ್ನು ತೆಗೆದುಹಾಕಲು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಕೆನಡಾದಲ್ಲಿ ಸಿಖ್ಖ ಸಮುದಾಯದ ಗುರುದ್ವಾರಗಳು, ಸಿಖ್ಖ್ ವಕೀಲರ ಗುಂಪು ಸೇರಿ ಹಲವರು ಹಲವು ಸಭೆಗಳನ್ನು ಕರೆದು ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ಸೂಚಿಸಿದ್ದರು. ಈಗ ದೇಶದ ಪ್ರಭಾವಿ ಸಿಖ್ಖ್ ಸಮುದಾಯದ ಒತ್ತಡಕ್ಕೆ ಮಣಿದ ಸರ್ಕಾರ ಸಿಖ್ಖ್ ಉಗ್ರಗಾಮಿತ್ವ ಮತ್ತು ಖಲೀಸ್ಥಾನ್ ಪದಗಳನ್ನು ಅಳಿಸಿ ಹಾಕಿದ್ದು ಆ ಜಾಗದಲ್ಲಿ ಭಾರತದೊಳಗೆ ಸ್ವತಂತ್ರ ರಾಜ್ಯವನ್ನು ಸ್ಥಾಪಿಸಲು ಹಿಂಸಾಚಾರವನ್ನು ಬೆಂಬಲಿಸುವ ಉಗ್ರರು ಎಂದು ಸೇರಿಸಿದೆ. ತಾ. 12 ರಂದು ನವೀಕರಿಸಲಾದ ವರದಿಯು ಬಿಡುಗಡೆಯಾಗಿದೆ.

ಸಂವಿಧಾನ ಶಿಲ್ಪಿಗೆ ರಾಷ್ಟ್ರಪತಿ ನಮನ

ನವದೆಹಲಿ, ಏ. 14: ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಭೀಮರಾವ್ ಅಂಬೇಡ್ಕರ್ ಅವರ 128ನೇ ಜನ್ಮದಿನದ ಹಿನ್ನೆಲೆಯಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯಾತಿಗಣ್ಯರು ಅಂಬೇಡ್ಕರ್ ಅವರಿಗೆ ಗೌರವ ವಂದನೆ ಸಲ್ಲಿಸಿದ್ದಾರೆ ಅವರು (ಅಂಬೇಡ್ಕರ್) ನನಗೆ ಸೇರಿದಂತೆ ಕೋಟ್ಯಾಂತರ ಜನರಿಗೆ ಸ್ಪೂರ್ತಿಯಾಗಿದ್ದರು. ಒಬ್ಬ ಶ್ರೀಮಂತ ಕುಟುಂಬದಲ್ಲಿ ಮಾತ್ರವೇ ಜನಿಸಿ ದೊಡ್ಡ ವ್ಯಕ್ತಿಯಾಗಬೇಕಿಲ್ಲ, ಭಾರತದಲ್ಲಿ ಬಡ ಕುಟುಂಬದಲ್ಲಿ ಜನಿಸಿದ ವ್ಯಕ್ತಿಯು ಸಹ ದೊಡ್ಡ ಕನಸು ಕಾಣಬಹುದು, ಅವುಗಳನ್ನು ನನಸಾಗಿಸಿಕೊಳ್ಳಬಹುದು ಎಂದು ಮೋದಿ ವೀಡಿಯೋ ಒಂದನ್ನು ಹಂಚಿಕೊಳ್ಳುವ ಮೂಲಕ ಹೇಳಿದ್ದಾರೆ.

ಮೇಲ್ಸೇತುವೆಯಿಂದ ಲಾರಿ ಬಿದ್ದು 1 ಸಾವು

ಬೆಂಗಳೂರು, ಏ. 14: ನಗರದಲ್ಲಿ ಭಾನುವಾರ ಬೆಳ್ಳಂಬೆಳಗ್ಗೆ ಸಂಭವಿಸಿದ ಅಪಘಾತದಲ್ಲಿ ಯಶವಂತಪುರ ಮೇಲ್ಸೇತುವೆಯಲ್ಲಿ ಅತಿ ವೇಗವಾಗಿ ಬರುತ್ತಿದ್ದ ಮಿನಿ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಕೆಳಗೆ ಬಿದ್ದ ಘಟನೆ ನಡೆದಿದೆ. ಪ್ಲೈ ಓವರ್ನಿಂದ ಲಾರಿ ಕೆಳಕ್ಕೆ ಬಿದ್ದ ರಭಸಕ್ಕೆ ಲಾರಿ ಕ್ಲೀನರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಚಾಲಕನಿಗೆ ಗಂಭೀರ ಗಾಯವಾಗಿದೆ.

ವಿಮಾನ ಅಪಘಾತ : ಇಬ್ಬರ ಸಾವು

ಕಠ್ಮಂಡು, ಏ. 14: ನೇಪಾಳದ ವಿಮಾನ ನಿಲ್ದಾಣವೊಂದರಲ್ಲಿ ಸಂಭವಿಸಿದ ಸುಮಿತ್ ವಿಮಾನ ಅಪಘಾತದಿಂದ ಕನಿಷ್ಟ ಇಬ್ಬರು ಮೃತಪಟ್ಟು ಐದು ಮದಿ ಗಾಯಗೊಂಡಿದ್ದಾರೆ. ಭಾನುವಾರ ಮುಂಜಾನೆ ಪೂರ್ವ ನೇಪಾಳದ ಸೋಲುಂಖುಬು ಜಿಲ್ಲೆ ಖುಂಬು ಪ್ರದೇಶದ ಲೂಕ್ಲಾ ವಿಮಾನ ನಿಲ್ದಾಣದಲ್ಲಿ ಈ ಅವಘಡ ಸಂಭವಿಸಿದೆ. ವಿಮಾನ ನಿಲ್ದಾಣದಲ್ಲಿ ನಿಂತಿದ್ದ ಚಾಪರ್ ಒಂದಕ್ಕೆ ಡಿಕ್ಕಿ ಹೊಡೆದ ಬಳಿಕ ಈ ಅಪಘಾತ ನಡೆದಿದೆ. ಲೂಕ್ಲಾದಿಂಡ ಕಠ್ಮಂಡುವಿಗೆ ಈ ಸುಮಿತ್ ವಿಮಾನ ಪ್ರಯಾಣಿಸುತ್ತಿತ್ತು. ಅಪಘಾತದಲ್ಲಿ ಓರ್ವ ಪೆÇಲೀಸ್ ಸಿಬ್ಬಂದಿ ಸೇರಿ ಐವರು ಗಾಯಗೊಂಡಿದ್ದು ಅವರನ್ನು ತುರ್ತು ವಿಮಾನದ ಮೂಲಕ ಚಿಕಿತ್ಸೆಗಾಗಿ ಕಠ್ಮಂಡುವಿಗೆ ರವಾನಿಸಲಾಗಿದೆ.

ಮಣ್ಣು ಕುಸಿದು ಕಾರ್ಮಿಕರ ಸಾವು

ಬೆಂಗಳೂರು, ಏ. 14: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೊಂದು ಭೀಕರ ದುರಂತ ಸಂಭವಿಸಿದೆ. ರಾಜಕಾಲುವೆಯ ಮಣ್ಣು ಕುಸಿದ ಪರಿಣಾಮ ಇಬ್ಬರು ಕಾರ್ಮಿಕರು ಸಾವನ್ನಪ್ಪಿ ನಾಲ್ವರು ಗಾಯಗೊಂಡ ಘಟನೆ ಬೆಂಗಳೂರಿನ ಪುಲಕೇಶಿ ನಗರದಲ್ಲಿ ನಡೆದಿದೆ. ಪುಲಕೇಶಿ ನಗರದ ಬಿಜಿ ಗಾರ್ಡನ್ ಸಮೀಪ ಶನಿವಾರ ಸಂಜೆ ಈ ಘಟನೆ ನಡೆದಿದ್ದು ಸುದರ್ಶನ್ ಹಾಗೂ ಶಫೀಕ್ ಎಂಬವರು ಸಾವನ್ನಪ್ಪಿದ್ದಾರೆ. ಮೃತರು ಜಾರ್ಖಂಡ್ ಮೂಲದ ಕಾರ್ಮಿಕರಾಗಿದ್ದು ಸುದರ್ಶನ್ ಸ್ಥಳದಲ್ಲೇ ಸಾವನ್ನಪ್ಪಿದ್ದರೆ ಶಫೀಕ್ ಆಸ್ಪತ್ರೆಗೆ ಸಾಗಿಸುವ ಮಾರ್ಗದ ನಡುವೆ ಅಸುನೀಗಿದ್ದಾರೆ. ಎಂಟು ಜನ ಕಾರ್ಮಿಕರು ಒಳಚರಂಡಿ ಕಾಮಗ್ರಿ ನಡೆಸುತ್ತಿದ್ದಾಗ ಏಕಾಏಕಿ ಮಣ್ಣು ಕುಸಿದು ಈ ದುರಂತ ಸಂಭವಿಸಿದೆ. ಘಟನೆಯಲ್ಲಿ ಇನ್ನೂ ನಾಲ್ವರು ಕಾರ್ಮಿಕರಿಗೆ ಗಾಯಗಳಾಗಿದ್ದು ಅವರನ್ನು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಒದಗಿಸಲಾಗುತ್ತಿದೆ.